ETV Bharat / state

ನಿಮ್ಮ ಸಂಕಷ್ಟ ನಿವಾರಣೆಗೆ ನಾನು, ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ : ಡಿಕೆಶಿ

author img

By

Published : Jul 3, 2021, 8:12 PM IST

Statement by KPCC President D.K. Sivakumar in Bangalore
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ

ಕೊರೊನಾ ಸಂತ್ರಸ್ತರಿಂದ ಅರ್ಜಿ ಹಾಕಿಸಿ, ಅವರಿಗೆ ಪರಿಹಾರ ಒದಗಿಸಲು ವಾರ್ಡ್ ವಾರು ತಂಡಗಳನ್ನು ರಚಿಸಿ ಜನರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿದ್ದೇವೆ. ಸತ್ತವರ ಕುಟುಂಬ, ಆಸ್ಪತ್ರೆಯಲ್ಲಿ ನರಳಾಡಿದವರು, ಉದ್ಯೋಗ, ಆದಾಯ ಕಳೆದುಕೊಂಡವರಿಗೆ ಆಗಿರುವ ನಷ್ಟ, ಸಮಸ್ಯೆಯನ್ನು ಪಟ್ಟಿ ಮಾಡಿಕೊಡಿ. ನಿಮ್ಮ ಪರವಾಗಿ ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಹೇಗೆ ಹೋರಾಟ ಮಾಡುತ್ತೇವೆ ಎಂಬುದನ್ನು ನೋಡಿ..

ಬೆಂಗಳೂರು : ಕೋವಿಡ್ ಸಂಕಷ್ಟ ನಿವಾರಣೆಗೆ ನಾನು ಹಾಗೂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ರಾಜಾಜಿನಗರದ ಮಂಜುನಾಥ ನಗರದಲ್ಲಿ ಆಹಾರ ಕಿಟ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಪೀಡಿತರಿಗೆ ಸಾಂತ್ವನ ಹೇಳಿ, ಅವರಿಗೆ ಪರಿಹಾರ ಸಿಗುವಂತೆ ಮಾಡಲು ಕಾಂಗ್ರೆಸ್ ಒಂದು ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.

ನಮ್ಮ ಕಾರ್ಯಕರ್ತರು ನಿಮ್ಮ ಮನೆ ಬಾಗಿಲಿಗೆ ಬಂದಾಗ, ಕೋವಿಡ್‌ನಿಂದ ನಿಮಗಾಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ನಿಮ್ಮ ಪರ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಈ ಭಾಗದಲ್ಲಿ ನಮ್ಮ ನಾಯಕರು ನೂರಾರು ದಿನಗಳಿಂದ ಬಡವರಿಗೆ ಆಹಾರ ಕಿಟ್‌ಗಳನ್ನು ನೀಡುತ್ತಿದ್ದಾರೆ.

ಕನಿಷ್ಟ ಸಾವಿರ ರೂಪಾಯಿ ಮೌಲ್ಯದ ಫುಡ್ ಕಿಟ್ ನೀಡುತ್ತಿದ್ದಾರೆ. ಕೃಷ್ಣಮೂರ್ತಿ ಅವರು ಶ್ರೀಮಂತರಲ್ಲ. ಅವರಿಗೆ ಅಧಿಕಾರವೂ ಇಲ್ಲ. ಅವರನ್ನು ನೀವು ಕಾರ್ಪೊರೇಷನ್ ಗೆ ಕಳುಹಿಸಿದ್ದೀರಿ ಎಂಬ ಕಾರಣಕ್ಕೆ ಅವರು ತಮ್ಮ ಕೈಲಾದ ಸಹಾಯವನ್ನು ನಿಮಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕರೆಗೆ ಗೌರವ ಕೊಟ್ಟು ಈ ಕೆಲಸ ಮಾಡುತ್ತಿದ್ದು, ಪಕ್ಷದ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.

ಇಲ್ಲಿರುವವರೆಲ್ಲ ಕಾರ್ಮಿಕರು. ಕಳೆದ ವರ್ಷ ನಿಮಗೆ ₹10 ಸಾವಿರ ಕೊಡಿಸಲು ನಾನು ಹಾಗೂ ಸಿದ್ದರಾಮಯ್ಯನವರು ಹೋರಾಟ ಮಾಡಿದೆವು. ಸರ್ಕಾರ ₹5 ಸಾವಿರ ನೀಡುವುದಾಗಿ ಹೇಳಿತ್ತು. ಆದರೆ, ಆ ಹಣ ನಿಮಗೆ ಬಂತಾ.? ಈ ವರ್ಷ ಘೋಷಿಸಿದ 2-3 ಸಾವಿರ ಪರಿಹಾರ ಬಂತಾ.? ಯಾರಿಗೂ ಬಂದಿಲ್ಲ. ನಮ್ಮ ಹೋರಾಟಕ್ಕೆ ಹೆದರಿ ಸರ್ಕಾರ ಕಳೆದ ವರ್ಷ 1900 ಕೋಟಿ, ಈ ವರ್ಷ ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿತು. ಚಾಲಕರಿಗೆ ₹5 ಸಾವಿರ ನೀಡುತ್ತೇವೆ ಎಂದರು, ಅವರಿಗೂ ಹಣ ಬರಲಿಲ್ಲ. ಇದು ನುಡಿದಂತೆ ನಡೆಯದ ಸರ್ಕಾರ. ಅದಕ್ಕಾಗಿಯೇ ಇಂದು ಇಲ್ಲಿನ 5 ಸಾವಿರ ಜನಕ್ಕೆ ಫುಡ್ ಕಿಟ್ ನೀಡಲು ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಒಂದಾಗಿ 'ಕೈ'ಹಿಡಿಯೋಣ ಅಂತಿರುವ ಕಾಂಗ್ರೆಸ್‌.. ಹಳೆಯದನ್ನೆಲ್ಲ ಮರೆತು ಆಹ್ವಾನ ನೀಡ್ತಿರುವ ನಾಯಕರು..

ಸಹಾಯ ಹಸ್ತ : ನಮ್ಮ ಶಾಸಕರು ಇರುವ ಕಡೆ ಮಾತ್ರವಲ್ಲ, ಎರಡು ಮೂರು ಬಾರಿ ನಮ್ಮ ಅಭ್ಯರ್ಥಿಗಳು ಸೋತಿರುವ ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದ ಬಡವರಿಗೆ ಸಹಾಯ ಹಸ್ತ ನೀಡಲಾಗಿದೆ. ಅಲ್ಲಿನ ಬೇರೆ ಪಕ್ಷದ ಶಾಸಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ನಾಯಕರುಗಳು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋತಿದ್ದರೂ ಸಂಕಷ್ಟದ ಸಮಯದಲ್ಲಿ ನಿಮ್ಮ ಕೈ ಬಿಡಲಿಲ್ಲ ಎಂದರು.

ಇದು ಬೆಂಗಳೂರಿನ ವಿಚಾರ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಮ್ಮವರು ಜನರ ಸಹಾಯಕ್ಕೆ ನಿಂತಿದ್ದಾರೆ. ಕೊರೊನಾ ಸಂತ್ರಸ್ತರಿಂದ ಅರ್ಜಿ ಹಾಕಿಸಿ, ಅವರಿಗೆ ಪರಿಹಾರ ಒದಗಿಸಲು ವಾರ್ಡ್ ವಾರು ತಂಡಗಳನ್ನು ರಚಿಸಿ ಜನರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿದ್ದೇವೆ. ಸತ್ತವರ ಕುಟುಂಬ, ಆಸ್ಪತ್ರೆಯಲ್ಲಿ ನರಳಾಡಿದವರು, ಉದ್ಯೋಗ, ಆದಾಯ ಕಳೆದುಕೊಂಡವರಿಗೆ ಆಗಿರುವ ನಷ್ಟ, ಸಮಸ್ಯೆಯನ್ನು ಪಟ್ಟಿ ಮಾಡಿಕೊಡಿ. ನಿಮ್ಮ ಪರವಾಗಿ ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಹೇಗೆ ಹೋರಾಟ ಮಾಡುತ್ತೇವೆ ಎಂಬುದನ್ನು ನೋಡಿ ಎಂದರು.

ನಿಮ್ಮ ನೋವಿಗೆ ಸರಕಾರದ ಯಾರೂ ಸ್ಪಂದಿಸಲಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಪರಿಹಾರ ಪಡೆಯಲು ನೀವು ಆನ್​​ಲೈನ್‌ನಲ್ಲಿ ಅರ್ಜಿ ಹಾಕಬೇಕಂತೆ. ಇದಕ್ಕಾಗಿಯೇ ನಾವು ಕಾರ್ಯಕ್ರಮ ರೂಪಿಸಿದ್ದು, ನಿಮ್ಮ ಮನೆಗೆ ನಮ್ಮ ಕಾರ್ಯಕರ್ತರು ಬರುತ್ತಾರೆ. ನಿಮಗೆ ಪರಿಹಾರ ಕೊಡಿಸಲು ನಾವು ಪ್ರಯತ್ನಿಸುತ್ತೇವೆ. ಮುಂದಿನ ಬಾರಿ ನೀವು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಿಮ್ಮ ಋಣ ಹೇಗೆ ತೀರಿಸುತ್ತೇವೆ ಎಂಬುದರ ಬಗ್ಗೆ ಮುಂದೆ ಮಾತನಾಡುತ್ತೇನೆ. ನಮ್ಮ ಚುನಾವಣಾ ಪ್ರಣಾಳಿಕೆ ಬಂದಾಗ ಏನು ಹೇಳಬೇಕೋ ಅದನ್ನು ಹೇಳುತ್ತೇವೆ ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.