ETV Bharat / state

ಲೋಕಸಭಾ ಸೀಟ್ ಗೆಲ್ಲೋ ಸಭೆಯಲ್ಲ, ಸೂಟ್ ಕೇಸ್ ಟಾರ್ಗೆಟ್ ಕೊಡುವ ಸಭೆ: ರವಿಕುಮಾರ್ ಟೀಕೆ

author img

By

Published : Aug 2, 2023, 5:35 PM IST

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ದೆಹಲಿಯಲ್ಲಿ ನಡೆಯುತ್ತಿರುವ ಎಐಸಿಸಿ ಸಭೆ ವಿರುದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ದೆಹಲಿ ಎಐಸಿಸಿ ಸಭೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟೀಕಿಸಿದರು.

ಬೆಂಗಳೂರು : ದೆಹಲಿಯಲ್ಲಿ ನಡೆಯುತ್ತಿರುವ ಎಐಸಿಸಿ ಸಭೆ ಲೋಕಸಭಾ ಚುನಾವಣಾ ಸಿದ್ದತೆಯ ಸಭೆಯಲ್ಲ. ಚುನಾವಣೆಗೆ ಎಷ್ಟು ಸೂಟ್ ಕೇಸ್ ತಂದು ಕೊಡಬೇಕು ಎಂದು ಟಾರ್ಗೆಟ್ ಕೊಡುವ ಸಭೆಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿಪರೀತ ಮಳೆ ಬಂದಿದೆ. ಅನೇಕ ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ದೆಹಲಿಯಲ್ಲಿ ಕಾಂಗ್ರೆಸ್ ಸಭೆಯನ್ನು ಮಾಡುತ್ತಿದೆ. ಇಡೀ ರಾಜ್ಯದ ಸಚಿವ ಸಂಪುಟ ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿದೆ. ಆ ಸಭೆಯಲ್ಲಿ ಏನು ಚರ್ಚೆ ನಡೆಯುತ್ತಿದೆ, ಎಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶ ಇರಿಸಿಕೊಂಡು ಹೆಚ್ಚು ಸೂಟ್ ಕೇಸ್​ಗಳನ್ನು ತುಂಬಿಸಬೇಕು ಎಂದು ಸಭೆಯನ್ನು ಟೀಕಿಸಿದರು.

ಕಾಂಗ್ರೆಸ್ ಈಗಾಗಲೇ ಅಭಿವೃದ್ಧಿಗೆ ಹಣ ಕೇಳಬೇಡಿ ಎಂದು ಶಾಸಕರಿಗೆ ಫಾರ್ಮಾನು ಹೊರಡಿಸಿದೆ. 33 ಜನ ಶಾಸಕರು ಅಭಿವೃದ್ಧಿಗೆ ಹಣ ಕೊಡಿ ಎಂದು ಸಿಎಂ ಸಿದ್ದಾರಮಯ್ಯಗೆ ಪತ್ರ ಬರೆದಿದ್ದಾರೆ. ಅವರೆಲ್ಲರಿಗೂ ಸಿಎಂ ಉತ್ತರ ನಿರಾಶೆ ತಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲ ಎಲ್ಲರೂ ಕೂಡ ಕರ್ನಾಟಕದ ಎಲ್ಲಾ ಸಚಿವರನ್ನು ದೆಹಲಿಗೆ ಕರೆದು ಪ್ರತಿಯೊಬ್ಬ ಸಚಿವರಿಗೂ ಟಾರ್ಗೆಟ್ ಕೊಡುವ ಸಭೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ರೈತರು, ಕಾರ್ಮಿಕರು, ಸಾಮಾನ್ಯ ಜನರು ಅತ್ಯಂತ ಹೆಚ್ಚು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಮಳೆಯಾಗದೆ ಹಾಗು ಮಳೆಯಿಂದ ಪ್ರವಾಹ ಉಂಟಾಗಿ ಬಿತ್ತನೆಯಾಗಿಲ್ಲ. ಒಂದು ಕಡೆ ಹಸಿರು ಬರ. ಇನ್ನೊಂದು ಕಡೆ ಒಣ ಬರ. ಇದರ ಜೊತೆಗೆ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಹೊರೆ ಬೇರೆ ಎದುರಾಗಿದೆ.

ರಾಜ್ಯದಲ್ಲಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ ಮಾಡಲಾಗಿದೆ. ಟೊಮೊಟೊ ಸೇರಿ ಎಲ್ಲ ತರಕಾರಿ ಬೆಲೆ ಹೆಚ್ಚಳವಾಗಿದೆ. ಕಟ್ಟಡ ಬೆಲೆ ಹೆಚ್ಚಿಸಲಾಗಿದೆ. ಈ ರೀತಿ ಪ್ರತಿಯೊಂದರಲ್ಲಿಯೂ ದರ ಹೆಚ್ಚಿಸಲಾಗಿದ್ದು, ಮೋಟಾರ್ ವಾಹನಗಳ ದರ, ಬಸ್ ದರ ಏರಿಕೆ ಮಾಡಿದ್ದಾರೆ. ಇವರ ಗುರಿ ಕೇವಲ ಒಟ್ಟು ಸಂಗ್ರಹ ಮಾಡುವಂತಹದ್ದು ಮಾತ್ರ. ಇವರಿಂದ ಜನರಿಗೆ ಕೊಡುವುದು ಏನು ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ಹಣವನ್ನು ಸಂಗ್ರಹ ಮಾಡಿ ಸೂಟ್ ಕೇಸ್​ ತುಂಬಿಸಿಕೊಂಡು ಹೋಗಿ ದೆಹಲಿಗೆ ಕೊಡುವುದು. ಚುನಾವಣೆಗೆ ತಯಾರಿ ಮಾಡುವುದು. ಇದೇ ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ. ಜನ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಈ ಸೂಟ್ ಕೇಸ್​ ತುಂಬಿಸುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ಗ್ಯಾರಂಟಿ ಹೆಸರಿನಲ್ಲಿ ಭ್ರಷ್ಟಾಚಾರ : ನಾವು ಹಿಂದುಳಿದ ವರ್ಗದ ಪರ ಎಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ 11000 ಕೋಟಿ ರೂ. ಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಗ್ಯಾರಂಟಿ ಯೋಜನೆಗಳಿಗೆ ಕೊಡುತ್ತಿದ್ದಾರೆ ಎಲ್ಲಿದೆ ಇವರ ಅಭಿವೃದ್ಧಿ? ಎಲ್ಲಿದೆ ಇವರ ದಲಿತರ ಪರ ಕಾಳಜಿ? ಹಾಗಾಗಿ ಈ ಸರ್ಕಾರದ ಗುರಿ ಕೇವಲ ಸೂಟ್​ಕೇಸ್ ತುಂಬಿಸುವುದು ಮಾತ್ರ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಸರ್ಕಾರ ವಿಪರೀತ ಭ್ರಷ್ಟಾಚಾರದಲ್ಲಿ ಇಳಿದಿದ್ದು, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಪ್ರತಿಯೊಂದು ವರ್ಗಾವಣೆಯಲ್ಲಿಯೂ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ವರ್ಗಾವಣೆ ದಂಧೆಯಲ್ಲಿ ಎಐಸಿಸಿಗೆ ಪಾಲು ನಿಗದಿಪಡಿಸಲು ದೆಹಲಿಯಲ್ಲಿ ಕಾಂಗ್ರೆಸ್ ಸಭೆ: ಛಲವಾದಿ ನಾರಾಯಣಸ್ವಾಮಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.