ETV Bharat / state

ವರ್ಗಾವಣೆ ದಂಧೆಯಲ್ಲಿ ಎಐಸಿಸಿಗೆ ಪಾಲು ನಿಗದಿಪಡಿಸಲು ದೆಹಲಿಯಲ್ಲಿ ಕಾಂಗ್ರೆಸ್ ಸಭೆ: ಛಲವಾದಿ ನಾರಾಯಣಸ್ವಾಮಿ ಆರೋಪ

author img

By

Published : Aug 2, 2023, 4:09 PM IST

''ವರ್ಗಾವಣೆ ದಂಧೆಯಲ್ಲಿ ಎಐಸಿಸಿಗೆ ಪಾಲು ನಿಗದಿಪಡಿಸಲು ದೆಹಲಿಯಲ್ಲಿ ಕಾಂಗ್ರೆಸ್ ಸಭೆ ಆಯೋಜಿಸಲಾಗಿದೆ'' ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.

Chalavadi Narayanaswamy
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.

ಬೆಂಗಳೂರು: ''ಕಾಂಗ್ರೆಸ್​ನ ಡಬ್ಬಾ ಖಾಲಿಯಾಗಿದೆ ಮುಂದಿನ ಚುನಾವಣೆಗಾಗಿ ಡಬ್ಬಾ ತುಂಬಿಸಬೇಕಿದೆ. ಆ ಡಬ್ಬಾ ತುಂಬಿಸಲು ಇಂದು ಎಲ್ಲರನ್ನು ದೆಹಲಿಗೆ ಕರೆದು ವರ್ಗಾವಣೆ ದಂಧೆ ಕುರಿತು ಚರ್ಚೆ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆಯ ಪಾಲು ಮುಂದಿನ ಚುನಾವಣೆಯಲ್ಲಿ ಎಐಸಿಸಿಗೆ ಎಷ್ಟು ಎಂದು ಫಿಕ್ಸ್ ಮಾಡುವ ಕುರಿತು ಸಭೆ ನಡೆಯುತ್ತಿದೆ'' ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ದೆಹಲಿ ಕಾಂಗ್ರೆಸ್ ಸಭೆಯನ್ನು ಟೀಕಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ದೆಹಲಿಯಲ್ಲಿ ಇಂದು ಎಐಸಿಸಿ ಸಭೆ ನಡೆಯುತ್ತಿದೆ. ರಾಜ್ಯದಿಂದ ಎಲ್ಲರನ್ನೂ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಈ ಸರ್ಕಾರ ಬಂದ ಮೊದಲ ದಿನದಿಂದ ಇಲ್ಲಿಯವರೆಗೆ ಮಾಡಿದ್ದು ಒಂದೇ ಕೆಲಸ ಗ್ಯಾರಂಟಿ ಬಗ್ಗೆ ಮಾತನಾಡಿದ್ದನ್ನು ಬಿಟ್ಟರೆ, ವರ್ಗಾವಣೆ ದಂಧೆ ಮಾತ್ರ ಮಾಡಿದ್ದಾರೆ. ಇವತ್ತು ಕೂಡ ಕಾಂಗ್ರೆಸ್ ಸಭೆ ನಡೆಯುತ್ತಿರುವುದು ಈ ದಂಧೆಯ ಪಾಲು ಮುಂದಿನ ಚುನಾವಣೆಯಲ್ಲಿ ಎಐಸಿಸಿಗೆ ಎಷ್ಟು ಎಂದು ಫಿಕ್ಸ್ ಮಾಡುವ ಸಭೆ ಇದಾಗಿದೆ. ಸಾವಿರಾರು ನೌಕರರು ಹಾಗೂ ಅಧಿಕಾರಿಗಳ ಪಟ್ಟಿ ಮಾಡಿ ವರ್ಗಾವಣೆ ಆದೇಶ ಮಾಡುತ್ತಿದ್ದಾರೆ. ಇವರು ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಈ ಸರ್ಕಾರ ಕೋಟ್ಯಂತರ ರೂ.ಗಳ ಸಂಗ್ರಹ ಮಾಡಿ ಮುಂದಿನ ಚುನಾವಣೆ ಎದುರಿಸಲು ಚಿಂತನೆ ನಡೆಸಿದೆ. ಅದಕ್ಕಾಗಿಯೇ ಇಂದು ವರ್ಗಾವಣೆ ದಂಧೆ ಕೆಲಸ ಮಾಡುತ್ತಿದ್ದಾರೆ. ಜನರಿಂದ ಕೇವಲ ಎರಡು ತಿಂಗಳಿನಲ್ಲಿ ಇಷ್ಟೊಂದು ಕೆಟ್ಟ ಹೆಸರು ಪಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.

''ಹಾಲಿನ ದರ, ವಿದ್ಯುತ್ ದರ ಹೆಚ್ಚಾಗಿದೆ. ದವಸ ಧಾನ್ಯಗಳು ಬೆಲೆ ಹೆಚ್ಚಾಗಿವೆ. ತಿಂಡಿ ತಿನಿಸುಗಳ ಬೆಲೆ ಕೂಡಾ ಹೆಚ್ಚಳವಾಗಿದೆ. ನನಗೆ ತಿಳಿದ ಮಟ್ಟಿಗೆ ಕಾಂಗ್ರೆಸ್ ಬೆಲೆ ಒಂದು ಬಿಟ್ಟು ಇನ್ನುಳಿದ ಎಲ್ಲಾ ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಬೆಲೆ ಮಾತ್ರ ಕಡಿಮೆಯಾಗಿದೆ ಇನ್ಯಾವುದೇ ಬೆಲೆ ಕಡಿಮೆ ಆಗಿಲ್ಲ ಎಂದು ವ್ಯಂಗ್ಯವಾಡಿದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಣ್ಣದ ಮೂಲಕ ಟೀಕೆ ಮಾಡಿದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ ಅವರು, ''ಯಾರ ಬಣ್ಣದ ಬಗ್ಗೆ ಮಾತನಾಡುವುದೂ ತಪ್ಪು. ಹಾಗೆ ನಾವು ವ್ಯಕ್ತಿಗಳ ಬಣ್ಣವನ್ನು ಹೇಳುವುದೂ ತಪ್ಪು. ಈ ರೀತಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ'' ಎಂದರು.

ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು, ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡುವಾಗ ಆ ಭಾಗದ ಪ್ರಕೃತಿ ಬಗ್ಗೆ ಮಾತನಾಡುವಾಗ ಹೇಗೆಲ್ಲಾ ವ್ಯಕ್ತಿಗಳು ಬೆಳೆಯುತ್ತಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲ ಬೇಗೆಯಿಂದ ಜನರು ಹೇಗೆ ಬಳಲುತ್ತಿದ್ದಾರೆ ಎನ್ನುವ ಹೋಲಿಕೆ ಮಾಡಿದ್ದಾರೆ ಅಷ್ಟೇ. ಬಿಜೆಪಿ ಯಾವುದೇ ವ್ಯಕ್ತಿ ಜಾತಿ, ಧರ್ಮ, ಬಣ್ಣದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದಿಲ್ಲ. ಅದನ್ನು ಬಿಜೆಪಿ ಒಪ್ಪುವುದೂ ಇಲ್ಲ'' ಎಂದು ಸ್ಪಷ್ಟಪಡಿಸಿದರು.

ದಲಿತರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯ: ಕೆಲವು ದಲಿತ ನಾಯಕರು, ದಲಿತ ಸಂಘಟನೆಗಳು ಪ್ಯಾಕೇಜ್ ಸಂಘಟನೆಗಳಿವೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಏನಾದರೂ ಮಾಡಿ ಗೆಲ್ಲಿಸಲೇಬೇಕು ಎಂದು ಪ್ಯಾಕೇಜ್ ಮಾಡಿಕೊಂಡು ಕಾಂಗ್ರೆಸ್​ಗೆ ಸೇರಿಕೊಂಡಿದ್ದಾರೆ. ಈಗ ನಿಮ್ಮ ಧ್ವನಿ ಎಲ್ಲಿ ಹೋಯಿತು? ದಲಿತರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗುತ್ತಿದ್ದರೂ ಯಾಕೆ ಮಾತನಾಡುತ್ತಿಲ್ಲ. ನೀವು ಕಾಮಾಲೆ ಕಣ್ಣುಗಳಿಂದ ಪಕ್ಷಗಳನ್ನ ನೋಡುವುದನ್ನ ಬಿಡಿ ಎಂದು ಛಲವಾದಿ ನಾರಾಯಣಸ್ವಾಮಿ ದಲಿತ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು.

ಒಂದು ಪಕ್ಷ ನಡೆಸುವ ತಾಕತ್ತು ದಲಿತರಿಗೆ ಇದ್ದರೆ ಯಾಕೆ ಕೊಡಬಾರದು? ದಲಿತರೂ ರಾಜ್ಯಾಧ್ಯಕ್ಷ ಆಗಬಹುದು ಎಲ್ಲರನ್ನು ಒಳಗೊಂಡಂತೆ ಸಮಾಜವೇ ಹೊರತು ಒಬ್ಬರನ್ನ ಬಿಟ್ಟು ಮತ್ತೊಬ್ಬರು ಎನ್ನುವುದು ಸಮಾಜವಲ್ಲ. ಯೋಗ್ಯತೆಯನ್ನು ಗುರುತಿಸುವ ಪಕ್ಷವನ್ನು ನಮ್ಮ ಪಕ್ಷದಲ್ಲಿ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.3

ಇದನ್ನೂ ಓದಿ: ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ, ಸರ್ಕಾರ ಆಡಿದ್ದೇ ಆಟವಾಗಿದೆ : ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.