ETV Bharat / state

ಭರವಸೆ ಇಟ್ಟು ಜನ‌ ಬಹುಮತ ನೀಡಿದ್ದಾರೆ, ಜವಾಬ್ದಾರಿ ಅರಿತು ಕೆಲಸ ಮಾಡಿ: ಸರ್ಕಾರಕ್ಕೆ ಪ್ರತಾಪ್ ಸಿಂಹ ನಾಯಕ್ ಕಿವಿ ಮಾತು

author img

By

Published : Jul 10, 2023, 6:51 PM IST

pratap-simha-nayak-reaction-on-congress-government
ಭರವಸೆ ಇಟ್ಟು ಜನ‌ ಬಹುಮತ ನೀಡಿದ್ದಾರೆ, ಜವಾಬ್ದಾರಿ ಅರಿತು ಕೆಲಸ ಮಾಡಿ: ಸರ್ಕಾರಕ್ಕೆ ಪ್ರತಾಪ್ ಸಿಂಹ ನಾಯಕ್ ಕಿವಿ ಮಾತು

ಪ್ರತಿಪಕ್ಷ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಅದನ್ನು ತಡೆಯಬಾರದು ಎಂದು ಪ್ರತಾಪ್​ ಸಿಂಹ ನಾಯಕ್ ಹೇಳಿದ್ದಾರೆ.

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ದೊಡ್ಡ ಮಹತ್ವವಿದೆ. ಅದೇ ಆದ್ಯತೆ ಕೂಡ ಎಂದು ಬಿಜೆಪಿಯ ವಿಧಾನ ಪರಿಷತ್​ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಿಳಿಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಜನ ಮನ್ನಣೆ ಕಾಂಗ್ರೆಸ್​ಗೆ‌ ಸಿಕ್ಕಿದೆ. ನಾವು ನಮ್ಮ ಭರವಸೆ ನೀಡಿದ್ದೆವು. ನಮಗಿಂತ ಅವರು ನೀಡಿದ ಭರವಸೆಗಳು ಹೆಚ್ವು ಜನರನ್ನು ಆಕರ್ಷಿಸಿದೆ. ಜನ ನಮಗೆ ಕೊಟ್ಟ ಜವಾಬ್ದಾರಿಯನ್ನು ನಾವು ಪಾಲಿಸಬೇಕು. ಕಾಂಗ್ರೆಸ್​ ಮೇಲೆ ಭರವಸೆ ಇಟ್ಟು ಜನ‌ ಬಹುಮತ ನೀಡಿದ್ದಾರೆ. ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.

ಪರಿವರ್ತನೆ ನಿಮಗೆ ನೀಡಿದ್ದಾರೆ. ಇದೇ ಶಾಶ್ವತ ಎಂದು ಭಾವಿಸಬಾರದು. ಬದಲಾವಣೆ ಈಗ ಆಗಿದೆ. ಅದನ್ನು ನಾವು ಒಪ್ಪಿದ್ದೇವೆ, ನೀವೂ ಒಪ್ಪಬೇಕು. ನಮ್ಮ ಪ್ರತಿಪಕ್ಷ ನಾಯಕರಿಲ್ಲ ಎಂದು ಹೇಳುವ ಕಾಂಗ್ರೆಸ್ ಪಕ್ಷದಲ್ಲಿ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದವರು ಇಂದು ಕಾಣುವುದೇ ಅಪರೂಪವಾಗಿದೆ ಎಂದು ಪರೋಕ್ಷವಾಗಿ ಹರಿಪ್ರಸಾದ್ ಅವರು ಸದನದಲ್ಲಿ ಕಾಣಿಸುತ್ತಿಲ್ಲ ಎಂದು ಹೇಳಿದರು. ಆಗ ಸದನದಲ್ಲಿ ಗದ್ದಲ ಉಂಟಾಗಿ ಆಡಳಿತ - ಪ್ರತಿಪಕ್ಷ ಸದಸ್ಯರು ನಡುವೆ ವಾಕ್ಸಮರ ನಡೆಯಿತು. ಈ ವೇಳೆ, ಸಭಾಪತಿ ಬಸವರಾಜ ಹೊರಟ್ಟಿ ಅವರು ಎದ್ದು ನಿಂತು‌ ಸದನವನ್ನು ನಿಯಂತ್ರಣಕ್ಕೆ ತಂದರು.

ಮತ್ತೆ ಮಾತು ಮುಂದುವರೆಸಿದ ಪ್ರತಾಪ್ ಸಿಂಹ ನಾಯಕ್​, ಸಮಾಧಾನ ಅಂದರೆ ಈ ಬಾರಿ ಇವಿಎಂ ಸರಿಯಿದೆ, ಚುನಾವಣಾ ಆಯೋಗ ಸರಿ ಇದೆ. ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದು ಈ ಚುನಾವಣೆ‌ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್​ ಪಕ್ಷದ ಬಗ್ಗೆ ವ್ಯಂಗ್ಯವಾಡಿದರು. ಸಂವಿಧಾನದ ಚೌಕಟ್ಟಿನಲ್ಲಿ ಮಾತನಾಡುವ ಸಂಯಮ ಬೆಳೆಸಿಕೊಳ್ಳಬೇಕು. ನಾವು ಪ್ರತಿಪಕ್ಷ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಅದನ್ನು ತಡೆಯಬಾರದು. ನಾವು ಆಡಳಿತ ಮಾಡಲಿಕ್ಕೇ ಇರುವುದು ಎಂಬ ಭಾವನೆ ಕಾಂಗ್ರೆಸ್​ನವರದ್ದು ಎಂದು ಟೀಕಿಸಿದರು.

ರಾಜ್ಯಪಾಲರ ಭಾಷಣದಲ್ಲಿ ದಾರ್ಶನಿಕರ ಪದ ಬಳಸಿದ್ದಾರೆ. ನೋಡಲು ಬಜೆಟ್ ಪುಸ್ತಕ ಆಕರ್ಷಕವಾಗಿದೆ. ಮಧುಚಂದ್ರ ಅವಧಿಯನ್ನು ಸರ್ಕಾರ ಅನುಭವಿಸಲು ನಾವು ಬಿಡುತ್ತೇವೆ. ಆದರೆ, ಇವರು ಘೋಷಿಸಿದ್ದ ಗ್ಯಾರಂಟಿಗಳ ಬಗ್ಗೆ ಜನ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಐದು ಗ್ಯಾರಂಟಿ ಚಿಂತನೆಯಲ್ಲಿ ಜನ ರಾಜ್ಯದ ಬೇರೆ ಅಭಿವೃದ್ಧಿ ಕೆಲಸದತ್ತ ಗಮನ ಹರಿಸುತ್ತಿಲ್ಲ. ಇಂದು ಸರ್ಕಾರ ನುಡಿದಂತೆ ನಡೆಯುತ್ತಿದೆಯಾ?. ಇವರು ಕೊಟ್ಟ ನಿರೀಕ್ಷೆ ದೊಡ್ಡದಾಗಿದೆ. ಇಂದು ಉಚಿತವಾಗಿ ಗ್ಯಾರಂಟಿಗಳನ್ನು ನೀಡುವ ಬದಲು ಒಂದಲ್ಲಾ ಒಂದು ನಿಯಮ ಹೇರಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ರಾಜ್ಯದ ಜನ ಕಾಂಗ್ರೆಸ್ ಗ್ಯಾರಂಟಿ ಮೆಚ್ಚಿದ್ದಾರೆ. ಬಿಜೆಪಿಯವರು ಯಾವತ್ತೂ ಕೊಟ್ಟ ಭರವಸೆ ಈಡೇರಿಸಿಲ್ಲ. ಆದರೆ, ನಾವು ಗ್ಯಾರಂಟಿ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದೇಶದಲ್ಲಿ ಇದುವರೆಗೂ ಆಗಿರುವ ಅಭಿವೃದ್ಧಿಯನ್ನು ಕಾಂಗ್ರೆಸ್ ಮಾಡಿದೆ. ತಾವು ನೀಡಲಾಗದ್ದನ್ನು ಕಾಂಗ್ರೆಸ್ ಮಾಡುತ್ತಿರುವುದು ಸಹಿಸಲು ಆಗುತ್ತಿಲ್ಲ. ಸಾಧ್ಯವಾದಷ್ಟು ಜಿಲ್ಲಾಸ್ಪತ್ರೆಗೆ ಸೌಲಭ್ಯ ಕಲ್ಪಿಸಿ. 108 ಆಂಬ್ಯುಲೆನ್ಸ್ ಗ್ರಾಮೀಣ ಭಾಗದಲ್ಲಿ ದುರಸ್ತಿಯಲ್ಲಿದೆ. ಅದನ್ನು ಸರಿಪಡಿಸುವಂತೆ ಸಿಎಂಗೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಕೃಷಿ ಭೂಮಿಯಲ್ಲಿ ಅನಧಿಕೃತ ಹೋಂ ಸ್ಟೇ ನಡೆಸಲು ಅವಕಾಶವಿಲ್ಲ: ರೆಡ್ಡಿ ಪ್ರಶ್ನೆಗೆ ಸಚಿವ ಭೈರತಿ ಸುರೇಶ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.