ETV Bharat / state

ಕೃಷಿ ಭೂಮಿಯಲ್ಲಿ ಅನಧಿಕೃತ ಹೋಂ ಸ್ಟೇ ನಡೆಸಲು ಅವಕಾಶವಿಲ್ಲ: ರೆಡ್ಡಿ ಪ್ರಶ್ನೆಗೆ ಸಚಿವ ಭೈರತಿ ಸುರೇಶ್ ಸ್ಪಷ್ಟನೆ

author img

By

Published : Jul 10, 2023, 4:10 PM IST

ರಾಜ್ಯದಲ್ಲಿ ಡ್ರಗ್​ ಮಾಫಿಯ ಮಟ್ಟ ಹಾಕಲು ಪೊಲೀಸ್​ ಇಲಾಖೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ನಿಯಂತ್ರಿಸಬೇಕು ಎಂದು ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಸೂಚಿಸಿದ್ದಾರೆ.

ಸಚಿವ ಭೈರತಿ ಸುರೇಶ್
ಸಚಿವ ಭೈರತಿ ಸುರೇಶ್

ಸಚಿವ ಭೈರತಿ ಸುರೇಶ್

ಬೆಂಗಳೂರು : ಹಂಪಿ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಆನೆಗೊಂದಿ ಪ್ರದೇಶದಲ್ಲಿ ಕೃಷಿ ಭೂಮಿಯಲ್ಲಿ ಅನಧಿಕೃತ ಹೋಂ ಸ್ಟೇ ನಡೆಸಲು ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿಧಾನಸಭೆಗೆ ಸ್ಪಷ್ಟಪಡಿಸಿದ್ದಾರೆ. ಇಂದು ಶೂನ್ಯವೇಳೆಯಲ್ಲಿ ಸದಸ್ಯ ಜಿ ಜನಾರ್ದನರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಹಂಪಿ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ 15 ಗ್ರಾಮಗಳು ಬರುತ್ತವೆ. 2008ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಹಂಪಿ ಪ್ರಾಧಿಕಾರದ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ 58 ಅನಧಿಕೃತ ಹೋಂ ಸ್ಟೇಗಳಿವೆ. ಇದರ ಬಗ್ಗೆ ಹೈಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. 27 ಅನಧಿಕೃತ ಹೋಂಸ್ಟೇ ತೆರವುಗೊಳಿಸಲಾಗಿದೆ. 31 ಹೋಂಸ್ಟೇಗೆ ಬೀಗಮುದ್ರೆ ಹಾಕಲಾಗಿದೆ. 21 ಹೋಂಸ್ಟೇಗಳ ವಿಚಾರ ನ್ಯಾಯಾಲಯದಲ್ಲಿದೆ. ಭೂ ಪರಿವರ್ತನೆಯಾಗದೇ, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಅಕ್ರಮ- ಸಕ್ರಮ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಆಡಳಿತ ಪಕ್ಷದ ಸದಸ್ಯ ಬಸವರಾಜರಾಯರೆಡ್ಡಿ ಮಾತನಾಡಿ, ಅಲ್ಲಿ ಸಾಕಷ್ಟು ಡ್ರಗ್ ವ್ಯವಹಾರ ನಡೆಯುತ್ತಿದ್ದು, ನಿಯಂತ್ರಣ ಮಾಡಬೇಕು ಎಂಬ ಸಲಹೆ ಮಾಡಿದರು. ಆಗ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು ರಾಜ್ಯದಲ್ಲಿ ಡ್ರಗ್ ಮಾಫಿಯ ಮಟ್ಟ ಹಾಕಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ನಿಯಂತ್ರಿಸಬೇಕು ಎಂದು ಸೂಚಿಸಿದರು.

ಸದನಕ್ಕೆ ಪೋಸ್ಟರ್ ತರಬಾರದು : ಇನ್ನೊಂದೆಡೆ ಸದನಕ್ಕೆ ಪೋಸ್ಟರ್ ತರಬಾರದು ಹಾಗೂ ಪ್ರದರ್ಶಿಸಬಾರದು ಎಂದು ಸಭಾಧ್ಯಕ್ಷರಾದ ಯು ಟಿ ಖಾದರ್ ವಿಧಾನಸಭೆಯಲ್ಲಿ ಸೂಚಿಸಿದರು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಜೆಡಿಎಸ್‍ ಶಾಸಕ ಶರಣಗೌಡ ಕಂದಕೂರ್ ಅವರು ಪೋಸ್ಟರ್ ಒಂದನ್ನು ಪ್ರದರ್ಶಿಸಿ, ನಮ್ಮ ಕ್ಷೇತ್ರದಲ್ಲಿ ರೈತರ ಆತ್ಮಹತ್ಯೆಯಾಗಿದ್ದು, ಆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ಕೋರಲು ಮುಂದಾದರು. ಆಗ ಸಭಾಧ್ಯಕ್ಷರು, ಪೋಸ್ಟರ್ ಸದನಕ್ಕೆ ತರುವುದು ಸರಿಯಲ್ಲ. ಇದರಿಂದ ನಿಮಗೆ ಪ್ರಚಾರ ಸಿಕ್ಕರೂ ಮತ ಸಿಗುವುದಿಲ್ಲ ಎಂದು ಗರಂ ಆದರು. ಲಿಖಿತವಾಗಿ ನೋಟಿಸ್‍ ಕೊಟ್ಟರೆ ಚರ್ಚೆಗೆ ಅವಕಾಶ ಕೊಡಲಾಗುವುದು. ನೀವು ಶೂನ್ಯವೇಳೆಯನ್ನು ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದರು.

ಬಿತ್ತಿಪತ್ರ ಪ್ರದರ್ಶಿಸಬಾರದು ಎಂಬುದಕ್ಕೆ ಬಿಜೆಪಿ ಹಿರಿಯ ಸದಸ್ಯರಾದ ಸಿ ಸಿ ಪಾಟೀಲ್‍, ಅಶ್ವತ್ಥ್​ನಾರಾಯಣ ಅವರು ಆಕ್ಷೇಪಿಸಿ, ನೀವು ಶಾಸಕರಾಗಿದ್ದಾಗ ಪ್ರದರ್ಶಿಸಿಲ್ಲವೆ? ಎಂದರು. ಆಗ ಸಭಾಧ್ಯಕ್ಷರು ಹಿಂದಿನ ಸಭಾಧ್ಯಕ್ಷರು ಕೂಡ ಇದೇ ರೀತಿಯ ಸೂಚನೆ ಕೊಟ್ಟಿದ್ದರು ಎಂದು ಹೇಳಿ ಸಂತಾಪ ಸೂಚನೆ ಕಲಾಪ ಕೈಗೆತ್ತಿಕೊಂಡರು.

ರೈತರ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಬೇಕು: ಸಂತಾಪ ಸೂಚನೆ ಮುಗಿದ ಬಳಿಕ ಶರಣಗೌಡ ಕಂದಕೂರ್ ಮತ್ತೆ ಪೋಸ್ಟರ್ ಪ್ರದರ್ಶಿಸಿ ನಮ್ಮ ಜಿಲ್ಲೆಯಲ್ಲಿನ ರೈತರ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಬೇಕು. ನಮ್ಮ ದನಿ ಅಡಗಿಸಬಾರದು. ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆಗ ಸಭಾಧ್ಯಕ್ಷರು, ಶೂನ್ಯವೇಳೆಯಲ್ಲಿ ನೋಟಿಸ್‍ ನೀಡಿ ಪ್ರಸ್ತಾಪಿಸಬಹುದು. ನೀವು ಲಿಖಿತ ನೋಟಿಸ್‍ ಕೊಟ್ಟ ನಂತರ ಪರಿಗಣಿಸುವುದಾಗಿ ಶರಣಗೌಡ ಅವರಿಗೆ ತಿಳಿಸಿದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ತಪಾಸಣೆ ನಡೆಸುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.