ETV Bharat / state

ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ ಆರೋಪ

author img

By

Published : Sep 7, 2021, 2:09 PM IST

Bengaluru
ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ

ಭಾರತೀಯ ಜನತಾ ಪಕ್ಷದವರು ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಕೊರೊನಾಗೆ ಐದರಿಂದ ಆರು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಇವರು ವಿಫಲವಾಗಿದ್ದಾರೆ. ಎರಡು ವರ್ಷಗಳಲ್ಲಿ 1 ಲಕ್ಷ 45 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು: ಗಣೇಶ ಹಬ್ಬದ ನಿಮಿತ್ತ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ, ಶಾಸಕರಾದ ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಲ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, "ನಾನು ತಿಹಾರ್ ಜೈಲಿನಿಂದ ಬಂದ ವೇಳೆ ಬ್ಯಾಟರಾಯನಪುರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನತೆ ನನಗೆ ನೀಡಿದ ಸ್ವಾಗತವನ್ನು ಜೀವನ ಪೂರ್ತಿ ಮರೆಯಲಾಗದು. ಏಕೆಂದರೆ, ಇಡಿ ಕೇಸ್ ವಿಚಾರದಲ್ಲಿ ನಾನು ಜೈಲ್​ನಲ್ಲಿ ಇದ್ದ ವೇಳೆ ನನ್ನ ರಾಜಕೀಯ ವಿರೋಧಿಗಳು ಸಾಕಷ್ಟು ಟೀಕೆ ಮಾಡಿದ್ದರು. ಅದ್ಯಾವುದನ್ನು ಲೆಕ್ಕಕ್ಕೆ ಇಟ್ಕೊಳದೇ ನನಗೆ ಅದ್ಧೂರಿಯಾಗಿ ಸ್ವಾಗತ ನೀಡಿದ್ದೀರಿ" ಎಂದರು.

Bengaluru
ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ

ಬಿಜೆಪಿಯವರು ಜನರ ದಾರಿ ತಪ್ಪಿಸುತ್ತಿದ್ದಾರೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, "ಭಾರತೀಯ ಜನತಾ ಪಕ್ಷದವರು ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಜನರಿಗೆ ಅರ್ಥ ಮಾಡಿಸಬೇಕು. ಹಿಂಬಾಗಿಲಿನಿಂದ ಬಂದ ಯಡಿಯೂರಪ್ಪ ಅವರನ್ನ ಬಿಜೆಪಿ ಅವರೇ ಕಳಿಸಿದ್ದಾರೆ. ಯಡಿಯೂರಪ್ಪ ಕೃತ್ಯದಲ್ಲಿ ಭಾಗವಹಿಸಿದ್ದ ಬೊಮ್ಮಯಿ ಅವರೇ ಸಿಎಂ ಆಗಿದ್ದಾರೆ.

ಇವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಏನು ಕೇಳಿದ್ರು ಕೊರೊನಾ ನೆಪ ಹೇಳ್ತಾರೆ. ಕೊರೊನಾಗೆ ಐದರಿಂದ ಆರು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಇವರು ವಿಫಲವಾಗಿದ್ದಾರೆ. ಎರಡು ವರ್ಷಗಳಲ್ಲಿ 1 ಲಕ್ಷ 45 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾ ಕ್ಯಾಂಟೀನ್​ ಮುಚ್ಚಲು ಹೊರಟಿದ್ದಾರೆ: ಸಿದ್ದರಾಮಯ್ಯ ಆಕ್ರೋಶ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಪ್ರಸ್ತಾಪಿಸಿ, ಬಡವರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಅವುಗಳನ್ನು ಮುಚ್ಚಲು ಹೊರಟಿದ್ದಾರೆ. ಅಲ್ಲದೆ ಹೆಸರು ಬದಲಾವಣೆ ಮಾಡ್ತೇವೆ ಎಂದು ಹೇಳ್ತಾರೆ. ಅವನು ಯಾರೋ ಸಿ.ಟಿ ರವಿ ಅಂತ ಇದ್ದಾನೆ. ಅವನಿಗೆ ಮಾನ ಮರ್ಯಾದೆ ಇಲ್ಲ. ಇಂದಿರಾ ಗಾಂಧಿ ಗರೀಬಿ ಹಠಾವೂ ಮಾಡಿದ್ದರು. ಅಂತವರ ವಿರುದ್ಧ ಮಾತನಾಡುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದಲ್ಲಿ ನೀನು ಮಾಲೀಕ ನೀನು ಹೇಳಬಹುದು

ಸಮಾರಂಭದಲ್ಲಿ ಸಿ.ಟಿ ರವಿಯನ್ನು ಅಯೋಗ್ಯ ಎಂದ ಕಾರ್ಯಕರ್ತನಿಗೆ ಪ್ರತಿಕ್ರಿಯೆ ನೀಡಿ, "ಆ ಪದ ನಾನು ಬಳಸುವಂತಿಲ್ಲ. ಪ್ರಜಾಪ್ರಭುತ್ವದಲ್ಲಿ ನೀನು ಮಾಲಿಕ ನೀನು ಹೇಳಬಹುದು. ಇವರ ನಾಯಕರ ಹೆಸರು ಮಾತ್ರ ಇಡಬಹುದು. ನಮ್ಮ ನಾಯಕರ ಹೆಸರು ಇಟ್ರೆ ಇವರಿಗೆ ಅಸೂಯೆ ಹುಟ್ಟುತ್ತೆ.

ಇನ್ನೊಬ್ಬ ಆಹಾರ ಸಚಿವ ಉಮೇಶ್​ ಕತ್ತಿ, ನಾಲ್ಕು ಕೆ.ಜಿ ಸಕ್ಕರೆ ಸಾಕು ಎನ್ನುತ್ತಾನೆ. ಆದರೆ, ಬೇರೆಯವರಿಗೆ ನಾಲ್ಕು ಕೆಜಿ ಸಾಕಾಗುತ್ತಾ? ಇನ್ನು ಆರೋಗ್ಯ ಸಚಿವ ಬೆಡ್ ಸಹ ಕೊಡಲು ಹಿಂದೇಟು ಹಾಕುತ್ತಿದ್ದಾನೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಜನರು ಸಾವನ್ನಪ್ಪಿದರೆ, ಅದರ ಬಗ್ಗೆ ಸಹ ಸುಳ್ಳು ಮಾಹಿತಿ ಕೊಟ್ಟಿದ್ದಾನೆ. ಕೋರ್ಟ್ ಛೀಮಾರಿ ಹಾಕಿತು ಎಂದು ಕತ್ತಿ, ಸುಧಾಕರ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಆಹಾರ ಕಿಟ್ ವಿತರಣೆ ಮಾಡುವ ಕೆಲಸ ಸರ್ಕಾರ ಮಾಡಬೇಕು. ಅವರು ಮಾಡದಿರುವ ಕೆಲಸ ನಾವು ಮಾಡ್ತಿದ್ದೇವೆ. ನಾವು ಶಾಸಕರಿಗೆ ಸೂಚನೆ ನೀಡಿದ್ದೇವೆ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಫುಡ್ ಕಿಟ್ ವಿತರಣೆ ಮಾಡಿ ಎಂದು. ಅದರ ಅನುಸಾರ ಇಂದು ನಮ್ಮ ಶಾಸಕರು ಕಿಟ್ ವಿತರಣೆ ಮಾಡ್ತಿದ್ದಾರೆ. ಜನರ ಹಣ ಜನರಿಗೆ ಕೊಡೋದಕ್ಕೆ ನಿಮಗೆ ಹೊಟ್ಟೆ ಉರಿಯಾಕೆ? ಎಂದು ಇದೇ ವೇಳೆ ಮಾಜಿ ಸಿಎಂ ಖಾರವಾಗಿ ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.