ETV Bharat / state

ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

author img

By ETV Bharat Karnataka Team

Published : Jan 10, 2024, 6:47 PM IST

ನಾನು ಮುಂಬೈ ಪ್ರಾಂತ್ಯ ಅನ್ನೋ ಬದಲು ಬಾಯಿ ತಪ್ಪಿ ಮಹಾರಾಷ್ಟ್ರ ಎಂದೆ. ಅದನ್ನು ತಪ್ಪಾಗಿ ಯಾರೂ ಅರ್ಥೈಸಬೇಡಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮನವಿ ಮಾಡಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಸಭೆ ಬಳಿಕ ಮಾತನಾಡಿದ ಸಚಿವರು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟಿಕರಣ ನೀಡಿದರು. ನಾನು ಮುಂಬೈ ಪ್ರಾಂತ್ಯ ಅನ್ನೋ ಬದಲು ಬಾಯಿ ತಪ್ಪಿ ಮಹಾರಾಷ್ಟ್ರ ಎಂದೆ. ಅದನ್ನು ತಪ್ಪಾಗಿ ಯಾರು ಅರ್ಥೈಸಬೇಡಿ. ಸ್ವಾತಂತ್ರ್ಯ ಪೂರ್ವ ಮಹಾರಾಷ್ಟ್ರ ರಾಜ್ಯವೇ ಇರಲಿಲ್ಲ‌ ಎಂದು ಸಚಿವರು ಹೇಳಿದರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕಳೆದ ಭಾನುವಾರ ನಡೆದ ಕನ್ನಡ ಸಮಾವೇಶದ ಉದ್ಘಾಟನಾ ಸಮಾರಂಭದ ವೇಳೆ ಸಚಿವರು, ಬಾಯ್ತಪ್ಪಿ ಮುಂಬೈ ಪ್ರಾಂತ್ಯ ಎನ್ನುವ ಬದಲಿಗೆ ಮಹಾರಾಷ್ಟ್ರ ಎಂದು ಉಲ್ಲೇಖಿಸಿದ್ದರು. ನಂತರ ಅದೇ ದಿನ ಸ್ಪಷ್ಟನೆಯನ್ನೂ ನೀಡಿದ್ದರು.

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಕಾರದಗಾ ಕನ್ನಡ ಸಮಾವೇಶದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಜನವರಿ -8-24) ಸ್ಪಷ್ಟಪಡಿಸಿದ್ದರು. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಭಾನುವಾರ ನಡೆದ 6ನೇ ಕನ್ನಡ ಸಮಾವೇಶದಲ್ಲಿ ಭಾಗಿಯಾಗಿದ್ದ ಸಚಿವೆ ಹೆಬ್ಬಾಳ್ಕರ್ ಅವರು ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, ನಾನು ಕಾರದಗಾದ ಕನ್ನಡ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡುತ್ತೇನೆ. ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡು ಗಡಿ ಭಾಗದಲ್ಲಿ ಇಷ್ಟೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು - ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ ಎಂದಿದ್ದರು.

ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನಾಡಿದ ಮಾತುಗಳ ಸಕಾರಾತ್ಮಕವಾಗಿ ಅರ್ಥೈಸಿಕೊಳ್ಳಬೇಕೆಂದು ಮಾಧ್ಯಮದ ಸ್ನೇಹಿತರಲ್ಲಿ ವಿನಂತಿಸುತ್ತೇನೆ. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು. ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು, ಹಿಂದಿನಿಂದಲೂ ಕನ್ನಡಿಗರು - ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಕನ್ನಡ ಸಮಾವೇಶದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.