ETV Bharat / state

'ಕನ್ನಡ ಸಮಾವೇಶದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ'

author img

By ETV Bharat Karnataka Team

Published : Jan 8, 2024, 2:21 PM IST

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.​

ಬೆಂಗಳೂರು: ಕಾರದಗಾ ಕನ್ನಡ ಸಮಾವೇಶದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಭಾನುವಾರ ನಡೆದ 6ನೇ ಕನ್ನಡ ಸಮಾವೇಶದಲ್ಲಿ ಭಾಗಿಯಾಗಿದ್ದ ಸಚಿವೆ ಹೆಬ್ಬಾಳ್ಕರ್ ಅವರು ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಕಾರದಗಾದ ಕನ್ನಡ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡುತ್ತೇನೆ. ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡು ಗಡಿ ಭಾಗದಲ್ಲಿ ಇಷ್ಟೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು - ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ ಎಂದಿದ್ದಾರೆ.

ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನಾಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕೆಂದು ಮಾಧ್ಯಮದ ಸ್ನೇಹಿತರಲ್ಲಿ ವಿನಂತಿಸುತ್ತೇನೆ. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು. ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು, ಹಿಂದಿನಿಂದಲೂ ಕನ್ನಡಿಗರು - ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ತಿತ್ವದಲ್ಲೇ ಇಲ್ಲದ್ದರಿಂದ ಅಂತಹ ಅರ್ಥ ಕಲ್ಪಿಸುವ ಪ್ರಶ್ನೆಯೇ ಬರುವುದಿಲ್ಲ. ಕಾರದಗಾ ಕನ್ನಡ ಸಮಾವೇಶಕ್ಕೆ ಮುಂದಿನ ವರ್ಷದಿಂದ ರಾಜ್ಯ ಸರಕಾರದ ಆರ್ಥಿಕ ಸಹಾಯ ಒದಗಿಸುವ ಮತ್ತು ಅಲ್ಲಿನ ಸಂಘಟನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುವ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ. ಅವರ ಉತ್ಸಾಹವನ್ನು ನಾವು, ನೀವೆಲ್ಲ ಸೇರಿ ಇನ್ನಷ್ಟು ಹೆಚ್ಚಿಸೋಣ, ಬರುವ ವರ್ಷಗಳಲ್ಲಿ ಈ ಸಮಾವೇಶ ಇನ್ನಷ್ಟು ಅದ್ಧೂರಿಯಾಗಿ ನಡೆಯುವಂತೆ ಮಾಡೋಣ ಎಂದು ವಿನಂತಿಸಿಕೊಂಡಿದ್ದಾರೆ.

ಹೆಬ್ಬಾಳ್ಕರ್​ ರಾಜೀನಾಮಗೆ ಯಲಹಂಕ ಶಾಸಕ​ ಆಗ್ರಹ: ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೆಳಗಾವಿ ಮಹಾರಾಷ್ಟ್ರದಲ್ಲಿತ್ತು ಎನ್ನುವ ಹೇಳಿಕೆ ನೀಡಿ ಕನ್ನಡಿಗರಿಗೆ ಅವಮಾನವಾಗುವಂತೆ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ನಗರದ ರಮಾಡ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಿಶಾಲ ಕರ್ನಾಟಕಕ್ಕೆ ಸೇರಿ ಅನೇಕ ವರ್ಷಗಳಾಗಿದೆ. ಅದು ಮಗಿದ ಕತೆ. ಓಟಿನ ರಾಜಕಾರಣಕ್ಕೆ‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಷಾದಕರ. ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಕಾಂಗ್ರೆಸ್‌ನವರು ಹೇಳ್ತಾರೆ. ಸಿಎಂ ಸಿದ್ದರಾಮಯ್ಯ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಸಚಿವ ಸಂಪುಟದಿಂದ ಹೊರಗೆ ಇಡಬೇಕು. ಆರೂವರೆ ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ, ಬೆಳಗಾವಿ ಕರ್ನಾಟಕಕ್ಕೆ ಸೇರಿದೆ. ಹಾಗಾಗಿಯೇ ಬೆಳಗಾವಿ ಅಧಿವೇಶನ ಮಾಡಲಾಗ್ತಿದೆ. ಅವರ ಹೇಳಿಕೆ ಬೇರೆಯವರನ್ನ ಕೆರಳಿಸಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಶಾಸಕ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಪ್ರೇರಿತ ಹೇಳಿಕೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ. ಕರ್ನಾಟಕ ವಿವಿಧ ರಾಜ್ಯದಲ್ಲಿ ಹಂಚಿಹೋಗಿತ್ತು. ಅದಕ್ಕೆ‌ ಕರ್ನಾಟಕ ಏಕೀಕರಣವಾಗಿದ್ದು. ಇಂತಹ ಸಂದರ್ಭದಲ್ಲಿ ಹಿಂದಕ್ಕೆ‌ ಹೋಗೋ ಅವಶ್ಯಕತೆ ಇರಲಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆ ಗೊತ್ತಿಲ್ಲ. ಈ ಸಂದರ್ಭದಲ್ಲಿ ಇದು ಅವಶ್ಯಕತೆ ಇರಲಿಲ್ಲ, ಬೆಳಗಾವಿ ಈಗ ಕರ್ನಾಟಕಕ್ಕೆ ಸೇರಿದೆ. ರಾಜಕೀಯ ಪ್ರೇರಿತ ಹುನ್ನಾರ ಆಗಬಾರದು, ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕು. ಕನ್ನಡಿಗರು ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಖಂಡಿಸ್ತೇವೆ. ಇವರ ಹೇಳಿಕೆಯನ್ನು ಮರಾಠಿಗರಾಗಲಿ, ಕನ್ನಡಿಗರಾಗಲಿ ಬೆಂಬಲಿಸಲ್ಲ ಎಂದರು.

ಅನ್ನಭಾಗ್ಯ ಅಕ್ಕಿಯಿಂದಲೇ ಮಂತ್ರಾಕ್ಷತೆ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲೂ ಮಂತ್ರಾಕ್ಷತೆ ತಲುಪಿಸೋ ಕೆಲಸ ಮಾಡಲಾಗ್ತಿದೆ. ಹಿಂದೂ ಧರ್ಮದ ವ್ಯಕ್ತಿ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಇದು ಕೀಳು ಮಟ್ಟದ ಹೇಳಿಕೆ. ಅಗೌರವ ಆಗಿದ್ದರೆ ಅಂತವರನ್ನ ಬಂಧಿಸಿ. ಅದು ಬಿಟ್ಟು ಧರ್ಮವನ್ನ ಅಗೌರವಿಸೋದು ಸರಿಯಲ್ಲ. ಭಗವಂತನನ್ನ ಪೂಜಿಸೋರು, ಈ ರೀತಿಯ ಹೇಳಿಕೆ ನೀಡಬಾರದು. ಕೂಡಲೇ ಕ್ಷಮೆಯಾಚಿಸಿ, ಗೌರವದಿಂದ ನಡೆದುಕೊಳ್ಳಿ. ನಿಮ್ಮ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಬೇಡಿ ಎಂದರು.

ಇದನ್ನೂ ಓದಿ: ಅಲ್ಪಸಂಖ್ಯಾತರು ಮಾತ್ರ ಕಾಂಗ್ರೆಸ್‌ ಸರ್ಕಾರದ ಆದ್ಯತೆ: ಬಿ.ವೈ.ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.