ETV Bharat / health

ನಿಮಗೆ ಶುಗರ್​ ಇದೆಯೇ?: ಇಂದಿನಿಂದಲೇ ಇಂಥ ಆಹಾರ ಸೇವನೆ ನಿಲ್ಲಿಸಿ! - Diabetes Friendly Breakfast

author img

By ETV Bharat Karnataka Team

Published : May 9, 2024, 9:32 AM IST

ಮಧುಮೇಹಿಗಳ ಉಪಹಾರ
ಮಧುಮೇಹಿಗಳ ಉಪಹಾರ (ETV Bharat)

ಮಧುಮೇಹದಿಂದ (ಶುಗರ್) ಬಳಲುತ್ತಿರುವವರು ಬೆಳಗಿನ ಉಪಹಾರಕ್ಕೆ ಏನನ್ನು ಸೇವಿಸಬೇಕು ಮತ್ತು ಯಾವ ಪದಾರ್ಥದಿಂದ ದೂರವಿರಬೇಕು ಎಂಬುದರ ಬಗ್ಗೆ ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ಮಧುಮೇಹ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ದೇಹದ ಮೆದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾಗಿ ಕಡಿಮೆ ಪ್ರಮಾಣದ ಇನ್ಸುಲಿನ್​ ಉತ್ಪತ್ತಿಯಾಗುವುದರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿ ಉಂಟಾಗುವುದೇ ಈ ಮಧುಮೇಹ.

ಇಂತಹ ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಊಟ, ಉಪಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಸಕ್ಕರೆ ಕಾಯಿಲೆ ಇರುವವರು ಕೆಲವು ಆಹಾರಗಳನ್ನು ಸೇವಿಸಲೂಬಾರದು ಎಂದು ಹೇಳುತ್ತಾರೆ. ಏಕೆಂದರೆ, ಅಂತಹ ಆಹಾರ ಸೇವಿಸುವುದರಿಂದ ಶುಗರ್ ಕಂಟ್ರೋಲ್ ಆಗುವುದಿಲ್ಲ. ಇದರ ಬದಲು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಹಾಗಾಗಿ, ಮಧುಮೇಹ ಇರುವವರು ಬೆಳಗಿನ ಉಪಹಾರದಲ್ಲಿ ಯಾವೆಲ್ಲ ಪದಾರ್ಥಗಳನ್ನು ಸೇವನೆ ಮಾಡಬಾರದು ಎಂಬುದನ್ನು ನೋಡೋಣ.

ಹಣ್ಣಿನ ರಸ ಅಥವಾ ಜ್ಯೂಸ್: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ವೇಗವಾಗಿ ಹೆಚ್ಚತೊಡಗುತ್ತದೆ. ಏಕೆಂದರೆ ಹಣ್ಣಿನ ರಸದಲ್ಲಿ ನಾರಿನಂಶ ಕಡಿಮೆ ಮತ್ತು ಸಕ್ಕರೆ ಹೆಚ್ಚು. ಹಾಗಾಗಿ ಅದರಿಂದ ದೂರವಿರಲು ವೈದ್ಯರು ಹೇಳುತ್ತಾರೆ. 2008ರಲ್ಲಿ 'ಡಯಾಬಿಟಿಸ್ ಕೇರ್' ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, ಅಮೆರಿಕದ ಮಿನ್ನೇಸೋಟ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ, ಸಕ್ಕರೆ ಕಾಯಿಲೆ ಇರುವವರು ಮುಂಜಾನೆ ಹಣ್ಣಿನ ಜ್ಯೂಸ್​ ಸೇವನೆ ಮಾಡುವುದರಿಂದ ಅದು ಸಕ್ಕರೆ ಮಟ್ಟ ಹೆಚ್ಚಿಸುತ್ತದೆ ಎಂದು ತಿಳಿದುಬಂದಿತ್ತು.

ಬ್ರೆಡ್ ಮತ್ತು ಬನ್: ಮಾರುಕಟ್ಟೆಯಲ್ಲಿ ಲಭ್ಯವಿರುವ ತರಹೇವಾರಿ ಬ್ರೆಡ್ ಮತ್ತು ಬನ್‌ಗಳಲ್ಲಿ ಹೆಚ್ಚಿನ ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಹೈಡ್ರೋಜನೀಕರಿಸಿದ ತೈಲಗಳಂತಹ ವಿವಿಧ ಪದಾರ್ಥಗಳಿವೆ. ಆದಾಗ್ಯೂ, ಮಧುಮೇಹ ಇರುವವರು ಬೆಳಗಿನ ಉಪಾಹಾರಕ್ಕಾಗಿ ಬ್ರೆಡ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕಾರ್ನ್ ಫ್ಲೇಕ್ಸ್/ಸಿರಿಲ್ ಬಾರ್‌ಗಳು/ಮುಯೆಸ್ಲಿ: ಕೆಲವರು ಬೆಳಿಗ್ಗೆ ಕಾರ್ನ್ ಫ್ಲೇಕ್ಸ್ ಮತ್ತು ಹಾಲಿನಲ್ಲಿ ಮುಸ್ಲಿ ತಿನ್ನುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕವುಗಳಲ್ಲಿ ಸಕ್ಕರೆ ಅಂಶ ಹೆಚ್ಚು. ಅದಕ್ಕಾಗಿಯೇ ಮಧುಮೇಹದಿಂದ ಬಳಲುತ್ತಿರುವವರು ಬೆಳಗಿನ ಉಪಹಾರದಲ್ಲಿ ಅವುಗಳನ್ನು ತಿನ್ನಬಾರದು ಎಂದು ತಜ್ಞರು ಸೂಚಿಸುತ್ತಾರೆ.

ಹಾಗಿದ್ದರೆ, ಉಪಹಾರದಲ್ಲಿ ಏನು ಸೇವನೆ ಮಾಡಬೇಕು?: ಮಧುಮೇಹ ಇರುವವರು ಬೆಳಗಿನ ಉಪಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್‌ಭರಿತ ಆಹಾರವನ್ನು ಸೇವಿಸಬೇಕು.

ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕ. ಆದ್ದರಿಂದ, ಉಪಹಾರಕ್ಕಾಗಿ ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ತಿನ್ನಬಹುದು.

ಸಿರಿಧಾನ್ಯಗಳಿಂದ ಮಾಡಿದ ಆಹಾರ ಸೇವಿಸುವುದು ಉತ್ತಮ ಎಂದೂ ಸಹ ಹೇಳಲಾಗುತ್ತದೆ.

ಓಟ್​ಮೀಲ್ ತಿನ್ನುವುದರಿಂದ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ.

ವಿಶೇಷ ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಡಯಟ್​ನಿಂದಲೇ ಶೇ.56.4 ರಷ್ಟು ಜನರಿಗೆ ಅನಾರೋಗ್ಯ: ಭಯಾನಕ ಸತ್ಯ ಬಿಚ್ಚಿಟ್ಟ ಐಸಿಎಂಆರ್​ ಅಧ್ಯಯನ - Unhealthy Diets

ETV Bharat Logo

Copyright © 2024 Ushodaya Enterprises Pvt. Ltd., All Rights Reserved.