ETV Bharat / state

ಮಂಗಳೂರಲ್ಲಿ ಆದಿಮಕಲೆ ನಿವೇಶನ ಪತ್ತೆ: ಕಲ್ಲುಬಂಡೆಯ ಮೇಲೆ ಮಾನವ ಪಾದದ ಚಿತ್ರ - primitive art

author img

By ETV Bharat Karnataka Team

Published : May 19, 2024, 12:46 PM IST

ನೈಸರ್ಗಿಕ ಬಂಡೆಕಲ್ಲುಗಳ ಮೇಲೆ ಕುಟ್ಟಿ, ಕೆತ್ತಿ ಮಾಡುವ ಆದಿಮ ಬಂಡೆಕಲ್ಲು ಚಿತ್ರ ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಪತ್ತೆಯಾಗಿದೆ.

ಕಲ್ಲುಬಂಡೆ ಮೇಲಿರುವ ಮಾನವ ಪಾದದ ಚಿತ್ರ
ಕಲ್ಲುಬಂಡೆ ಮೇಲಿರುವ ಮಾನವ ಪಾದದ ಚಿತ್ರ (ETV Bharat)

ಮಂಗಳೂರು: ಅನಕ್ಷರಸ್ಥ ಸಮಾಜಗಳ ಅಭಿವ್ಯಕ್ತಿ ಮಾಧ್ಯಮವೇ ಆದಿಮಕಲೆ. ಆದಿಮಕಲೆಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ರಚಿಸಿರುವ ಕಲಾತ್ಮಕ ಚಿತ್ರಗಳನ್ನು ವರ್ಣಚಿತ್ರಗಳೆಂದು, ನೈಸರ್ಗಿಕ ಬಂಡೆಕಲ್ಲುಗಳ ಮೇಲೆ ಕುಟ್ಟಿ, ಕೆತ್ತಿ ಮಾಡಿದ ಚಿತ್ರಗಳನ್ನು ಆದಿಮ ಬಂಡೆಕಲ್ಲು ಚಿತ್ರಗಳೆಂದು ಕರೆಯಲಾಗುತ್ತದೆ.

ಇದೇ ಮೊದಲ ಬಾರಿಗೆ ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ನೈಸರ್ಗಿಕ ಕಲ್ಲುಬಂಡೆಯ ಮೇಲೆ ಮಾನವ ಪಾದದ ಚಿತ್ರ ಕಂಡುಬಂದಿದೆ. ಸ್ಥಳೀಯರು ಈ ಪಾದದ ಚಿತ್ರ ಬಬ್ಬುಸ್ವಾಮಿಯ ಪಾದದ ಚಿತ್ರಗಳೆಂದು ನಂಬಿದ್ದಾರೆ ಎಂದು ಮುಲ್ಕಿ ಸುಂದರ್ರಾಮ್ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪಾದಗಳು ಒಂದು ಅಡಿ ಉದ್ದ, ಅರ್ಧ ಇಂಚು ಆಳವನ್ನು ಹೊಂದಿದ್ದು, ಸಾಮಾನ್ಯ ಮಾನವ ಪಾದಗಳ ಅಳತೆಯನ್ನು ಹೊಂದಿವೆ. ಬಬ್ಬುಸ್ವಾಮಿಯನ್ನು ಕೋಟೆದಬಬ್ಬು, ಕೋರ್ದಬ್ಬು, ಬಬ್ಬು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ.

ಪಡುಬಿದ್ರಿಯ ಮಿಂಚಿನಬಾವಿ ಕೋರ್ದಬ್ಬು ಟ್ರಸ್ಟ್​ನ ಸಹಯೋಗದೊಂದಿಗೆ ಬಬ್ಬುಸ್ವಾಮಿ ಪುರಾತತ್ವ ಅಧ್ಯಯನ ಯೋಜನೆಯನ್ನು ಮಾರ್ಚ್ ತಿಂಗಳಲ್ಲಿ ಆರಂಭಿಸಲಾಯಿತು. ಈ ಅಧ್ಯಯನ ಯೋಜನೆಯ ಭಾಗವಾಗಿ ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿದಾಗ, ಈ ದೈವಸ್ಥಾನದ ಸಮೀಪ ಆದಿಮಕಲೆಯ ನಿವೇಶನ ಪತ್ತೆಯಾಯಿತು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬುದ್ಧನಜೆಡ್ಡು ಆದಿಮಕಲೆ ನಿವೇಶನದಲ್ಲಿ ಸುಮಾರು 20 ಪಾದದ ಚಿತ್ರಗಳು ಕಂಡುಬಂದಿವೆ. ನೂತನಶಿಲಾಯುಗ ಕಾಲದ ಚಿತ್ರಗಳಿಂದ ಇತಿಹಾಸ ಆರಂಭ ಕಾಲದ ವರೆಗಿನ ಚಿತ್ರಗಳನ್ನು ಅಲ್ಲಿ ಗುರುತಿಸಲಾಗಿದೆ.

ಅಲ್ಲಿ ಕಂಡುಬಂದ ಪಾದದ ಚಿತ್ರಗಳನ್ನು ಸುಮಾರು ಕ್ರಿ.ಶ. 1 ಮತ್ತು 2ನೇ ಶತಮಾನದ ಚಿತ್ರಗಳೆಂದು ನಿರ್ಧರಿಸಲಾಗಿದೆ. ಬೋಳೂರ ಪನ್ನೆಯ ಪಾದದ ಚಿತ್ರಗಳು ಸಹ ಕ್ರಿ.ಶ. 1 ಅಥವಾ 2ನೇ ಶತಮಾನಕ್ಕೆ ಸೇರಿದ ಚಿತ್ರಗಳಾಗಿದ್ದು, ಮಂಗಳೂರಿನ ಚಾರಿತ್ರಿಕ ಅಧ್ಯಯನಕ್ಕೆ ಮತ್ತು ಬಬ್ಬುಸ್ವಾಮಿ ಅಧ್ಯಯನಕ್ಕೆ ಅತ್ಯಂತ ಮಹತ್ವದ ಪುರಾತತ್ವ ಪುರಾವೆಯಾಗಿದೆ.

ಬಬ್ಬುಸ್ವಾಮಿಯ ಪಾಡ್ದನದ ಕೊನೆಯಲ್ಲಿ ಬಬ್ಬುಸ್ವಾಮಿಯನ್ನು ಕರಾವಳಿಯ ಉತ್ತರದಲ್ಲಿ ಅಂಕೋಲೆಯಿಂದ ದಕ್ಷಿಣದಲ್ಲಿ ಕಾಸರಗೋಡಿನ ನೀಲೇಶ್ವರದವರೆಗೆ ಆರಾಧಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಮಾತ್ರವೇ ಬಬ್ಬುಸ್ವಾಮಿಯನ್ನು ಬಹುತೇಕ ಎಲ್ಲಾ ಸಮುದಾಯದವರು ಆರಾಧಿಸುವುದು ಕಂಡುಬರುತ್ತದೆ.

ಬಬ್ಬುಸ್ವಾಮಿ ಕರಾವಳಿಯ ಮುಂಡಾಲ/ಕೂಸಾಳ/ಆದಿ ದ್ರಾವಿಡರ ಆರಾಧ್ಯ ದೈವವಾಗಿದ್ದು, ಆ ಸಮುದಾಯದಲ್ಲಿ ಹುಟ್ಟಿದವನಾಗಿದ್ದಾನೆ. ಈ ಅಧ್ಯಯನಕ್ಕೆ ಮಿಂಚಿನಬಾವಿ ಕೋರ್ದಬ್ಬು ಟ್ರಸ್ಟ್ನ ಟ್ರಸ್ಟಿ ರಮೇಶ್ ಯು, ಅದರ ಅಧ್ಯಕ್ಷರಾದ ವಾಮನ ಸಾಲಿಯಾನ್, ಪಿ. ಜಗ್ಗು ಮಲ್ಲಾರ್, ಜಿ. ಸುಂದರ್ ಗುಜ್ಜರಬೆಟ್ಟು, ಬಿ.ಪಿ.ನಾರಾಯಣ, ನೇಜಾರ್ ಮತ್ತು ಆನಂದ್ ಎಲ್ಲೂರು ಸಹಕರಿಸಿದ್ದಾರೆ ಎಂದು ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ 2 ದಿನದ ‘ದೇಸಿ ಅಕ್ಕಿ ಮೇಳ' : ವಿವಿಧ ತಳಿಗಳ ಸೊಗಡಿನ ರುಚಿ ಸವಿಯಲು ಜಿಲ್ಲಾಧಿಕಾರಿ ಕರೆ - Desi akki Mela

ETV Bharat Logo

Copyright © 2024 Ushodaya Enterprises Pvt. Ltd., All Rights Reserved.