ETV Bharat / state

ಸರ್ಕಾರಿ ಭೂಮಿ ಒತ್ತುವರಿ ತೆರವು, ಆಗಸ್ಟ್​ 7ರಂದು ಉನ್ನತ ಮಟ್ಟದ ಸಭೆ: ಸಚಿವ ಕೃಷ್ಣ ಬೈರೇಗೌಡ

author img

By

Published : Aug 4, 2023, 6:05 PM IST

ಆಗಸ್ಟ್ 7ರಂದು, ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಿರುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Krishna Byre Gowda
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಿರುವ ಸರ್ಕಾರ ಆಗಸ್ಟ್ 7ರಂದು ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಕಾಸಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಗುರಿ ನಿಗದಿ ಮಾಡಲಾಗುವುದು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಪ್ರಮಾಣದ ಬಗ್ಗೆ ಎ.ಟಿ.ರಾಮಸ್ವಾಮಿ ವರದಿ, ಬಾಲಸುಬ್ರಹ್ಮಣ್ಯ ವರದಿ ಸೇರಿದಂತೆ ಹಲವು ವರದಿಗಳು ನಮ್ಮ ಮುಂದಿವೆ. ಅದನ್ನು ಆಧಾರವಾಗಿಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು" ಎಂದು ಹೇಳಿದರು.

"ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದ ಒತ್ತುವರಿಯನ್ನು ತೆರವು ಮಾಡಲು ಗುರಿ ನಿಗದಿ ಮಾಡುವುದು ನಮ್ಮ ಯೋಚನೆ. ಈ ಸಂಬಂಧ ವಿಭಾಗ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸರಣಿ ಸಭೆಗಳನ್ನು ನಡೆಸಲಾಗುವುದು. ಆಗಸ್ಟ್ 7 ರ ಸೋಮವಾರ ನಡೆಯಲಿರುವ ಸಭೆಯ ನಂತರ ಮಂಗಳವಾರ ಮೈಸೂರು ವಿಭಾಗದ ಸಭೆಯನ್ನು ನಡೆಸಲಾಗುವುದು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವುದು ಮತ್ತು ತೆರವಾದ ಭೂಮಿಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಿದ ನಂತರ ರೆವೆನ್ಯೂ ಇನ್ಸ್​ಪೆಕ್ಟರ್​ಗಳು ಈ ಭೂಮಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಮರಳಿ ಈ ಭೂಮಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು" ಎಂದರು.

"ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಉಳಿದಂತೆ ರಾಜ್ಯದಾದ್ಯಂತ ಗಣನೀಯ ಪ್ರಮಾಣದ ಭೂಮಿ ಒತ್ತುವರಿಯಾಗಿದೆ.‌ ಈ ಮಧ್ಯೆ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಭಾಗಶ: ಶಿವಮೊಗ್ಗ ಜಿಲ್ಲೆಗಳಲ್ಲಿ ಒತ್ತುವರಿ ಕಾಫಿ ಭೂಮಿಯನ್ನು ಗುತ್ತಿಗೆಗೆ ಕೊಡುವ ಸಂಬಂಧ ಹಿಂದಿನ ಸರ್ಕಾರ ಕೈಗೊಂಡ ತೀರ್ಮಾನವನ್ನು ಯಥಾವತ್ತಾಗಿ ಜಾರಿಗೊಳಿಸಲಾಗುವುದು" ಎಂದು ತಿಳಿಸಿದರು.

"ಆದರೆ ಈ ಭೂಮಿಯನ್ನು ಗುತ್ತಿಗೆಗೆ ನೀಡುವ ಸಂಬಂಧ ಹಿಂದಿನ ಸರ್ಕಾರ ಕಾಯ್ದೆ ಮಾಡಿದೆ. ಆದರೆ ನಿಯಮಾವಳಿಗಳನ್ನು ಮಾಡಿಲ್ಲ. ಹೀಗಾಗಿ ಈ ನಿಯಮಾವಳಿಗಳನ್ನು ರೂಪಿಸಿದ ನಂತರ ಈ ಜಿಲ್ಲೆಗಳಲ್ಲಿ ಒತ್ತುವರಿ ಭೂಮಿಯನ್ನು ಗುತ್ತಿಗೆಗೆ ಕೊಡುವ ಕಾರ್ಯ ಆರಂಭವಾಗಲಿದೆ. ಈ ಸಂಬಂಧದ ನಿಯಮಾವಳಿಗಳನ್ನು ರೂಪಿಸುವ ಕಾರ್ಯ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ನಿಯಮಾವಳಿಗಳ ರಚನೆಯಾದ ನಂತರ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ‌" ಎಂದು ತಿಳಿಸಿದರು.

"ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಭೂಮಿಯ ಕುರಿತು ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಮಾಹಿತಿ ಬಂದ ನಂತರ ಎಷ್ಟು ಮಂಜೂರಾತಿ ಪ್ರಕರಣಗಳು ಕ್ರಮಬದ್ಧವಾಗಿವೆ, ಎಷ್ಟು ಕ್ರಮಬದ್ಧವಾಗಿಲ್ಲ ಎಂಬುದನ್ನು ಪರಿಶೀಲನೆ ಮಾಡುತ್ತೇವೆ. ಮಂಜೂರಾತಿ ಪ್ರಕ್ರಿಯೆ ಕ್ರಮಬದ್ಧವಾಗಿದ್ದರೆ ಅದಕ್ಕೆ ತಡೆ ನೀಡುವುದಿಲ್ಲ. ಈ ಹಿಂದಿನ ಆರು ತಿಂಗಳ ಅವಧಿಯ ಮಂಜೂರಾತಿಯನ್ನು ಮಾತ್ರ ಪರಿಗಣಿಸಲಾಗುವುದು" ಎಂದು ಹೇಳಿದರು.

ಬಗರ್ ಹುಕುಂ ಸಮಿತಿ ರಚನೆ: ರಾಜ್ಯಾದ್ಯಂತ ಬಗರ್ ಹುಕುಂ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ರಾಜ್ಯದಲ್ಲಿ ಖಾಲಿ ಇರುವ ತಹಸೀಲ್ದಾರ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಲ್ಲಿ ಈ ಹುದ್ದೆಗಳು ಖಾಲಿ ಇವೆ ಎಂಬುದರ ವಿವರ ಪಡೆದು ನಂತರ ಅದನ್ನು ಭರ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Gruha Jyothi Scheme: ನಾಳೆ ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ; ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.