ETV Bharat / state

ಇಂದು ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್​ ದೆಹಲಿಗೆ: ಕೇಂದ್ರ ಸಚಿವರು, ಕಾಂಗ್ರೆಸ್ ನಾಯಕರ ಭೇಟಿ

author img

By

Published : Jun 28, 2023, 3:26 PM IST

Etv Bharatdcm-dk-shivakumar-will-visiting-to-delhi-this-evening
ಇಂದು ಸಂಜೆ ದೆಹಲಿಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಪ್ರಯಾಣ: ಕೇಂದ್ರ ಸಚಿವರು, ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲಿರುವ ಡಿಕೆಶಿ

ನಾಳೆಯಿಂದ ಮೂರು ದಿನ ಕಾಂಗ್ರೆಸ್​ ಪಕ್ಷದ ವರಿಷ್ಠರ ಜತೆ ಸಭೆ ನಡೆಸಲು ರಾಜ್ಯದ ಸಚಿವರು ದೆಹಲಿಗೆ ಭೇಟಿ ನೀಡಲಿದ್ದಾರೆ.

ಬೆಂಗಳೂರು: ರಾಜ್ಯದ ಎಲ್ಲ ಸಚಿವರಿಗೆ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಕೆಲವರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರದ ಸಚಿವರನ್ನು ಪಕ್ಷದ ಹೈಕಮಾಂಡ್ ಈ ಹಿಂದೆ ಬರುವಂತೆ ಸೂಚಿಸಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಬುಲಾವ್ ರದ್ದಾಗಿ, ಈಗ ಮರು ನಿಗದಿಯಾಗಿದೆ.

ನಾಳೆಯಿಂದ ಮುಂದಿನ ಮೂರು ದಿನ ದೆಹಲಿಯಲ್ಲಿ ಪಕ್ಷದ ವರಿಷ್ಠರ ಜತೆ ಸಚಿವರ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೊಳಗೆ ಕೆಲವರು, ನಾಳೆ ಬೆಳಗ್ಗೆ ಉಳಿದವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಾರದ ಹಿಂದೆ ಸಭೆ ನಿಗದಿಯಾಗಿ, ಪಕ್ಷದ ವರಿಷ್ಠ ರಾಹುಲ್​ ಗಾಂಧಿ ಅಲಭ್ಯರಾದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ ಆ ಸಂದರ್ಭ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕೆಲ ಆಪ್ತ ಸಚಿವರು ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಬಂದಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಾಗೂ ಆಹಾರ ಸಚಿವ ಪಿಯೂಷ್ ಗೋಯಲ್ ಜೊತೆ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಸಿಎಂ ಚರ್ಚಿಸಿದ್ದರು. ಆದರೆ ಅದು ಇದುವರೆಗೂ ಫಲ ಕೊಟ್ಟಿಲ್ಲ. ಇದೀಗ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯ ಸಚಿವ ಸಂಪುಟದ ಎಲ್ಲಾ ಸದಸ್ಯರೂ ತೆರಳುತ್ತಿದ್ದು, ಪಕ್ಷದ ವರಿಷ್ಠರ ಜತೆ ಸರ್ಕಾರದ ಹಿರಿಯ ಸಚಿವರನ್ನೂ ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ.

ಈ ಸಾರಿ ಹೈಕಮಾಂಡ್​ ಸಚಿವರ ಭೇಟಿಗೆ ಅವಕಾಶ ನೀಡಿದೆ. ಹಿಂದೆ ಸಚಿವರು ತಾವೆಲ್ಲ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಬೇಕೆಂದು ಕೋರಿದ್ದರು. ಆದರೆ ಇದಕ್ಕೆ ಒಂದು ಪ್ರತ್ಯೇಕ ವೇದಿಕೆ ರಚಿಸಿ ಒಂದೇ ಸಾರಿ ಎಲ್ಲರನ್ನೂ ದೆಹಲಿಗೆ ಕರೆಸಿಕೊಂಡು ಪ್ರತ್ಯೇಕವಾಗಿ ಚರ್ಚಿಸುವ ಭರವಸೆಯನ್ನು ಪಕ್ಷದ ಹೈಕಮಾಂಡ್ ನಾಯಕರು ನೀಡಿದ್ದರು. ಈ ಸಾರಿಯೂ ಎಲ್ಲ ಸಚಿವರು ದೆಹಲಿಗೆ ತೆರಳುತ್ತಿಲ್ಲ. ಕೆಲವರು ತೆರಳಿ ತಮ್ಮ ಮಾಹಿತಿಯನ್ನು ಹೈಕಮಾಂಡ್​ ನಾಯಕರಿಗೆ ತಲುಪಿಸಲಿದ್ದಾರೆ.

ಡಿ.ಕೆ. ಶಿವಕುಮಾರ್ ಇಂದು ಸಂಜೆ 5.15ಕ್ಕೆ ಹೊರಟು 8 ಗಂಟೆಗೆ ದೆಹಲಿ ತಲುಪಲಿದ್ದಾರೆ. 29 ಮತ್ತು 30ರಂದು ದೆಹಲಿಯಲ್ಲಿ ಪಕ್ಷದ ನಾಯಕರು ಹಾಗೂ ಕೆಲ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರದ ವಿವಿಧ ಯೋಜನೆಗೆ ಕೇಂದ್ರದಿಂದ ಸಿಗಬೇಕಾದ ಅನುದಾನದ ಕುರಿತು ಸಹ ಇದೇ ಸಂದರ್ಭ ಅವರು ಸಮಾಲೋಚಿಸುವ ನಿರೀಕ್ಷೆ ಇದೆ.

ವಿಧಾನ ಪರಿಷತ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ: ಈ ಹಿಂದೆ ವಿಧಾನಸಭೆ ಚುನಾವಣೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ ಪಕ್ಷ ಈಗ ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದು, ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಶಿಕ್ಷಕರ ಕ್ಷೇತ್ರದ ಮೂರು ಸ್ಥಾನ, ಪದವೀಧರ ಕ್ಷೇತ್ರದ ಮೂರು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಸ್ಪರ್ಧಿಸಿಲು ಇಚ್ಚಿಸುವವರು ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಟಿಕೆಟ್‌ಗೆ ಅರ್ಜಿ ಹಾಕಬೇಕು ಎಂದಿದೆ. ಅರ್ಜಿ ಶುಲ್ಕ 5,000 ರೂ., ಪಕ್ಷದ ‌ನಿಧಿ 2,00,000 ರೂ. ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್' ಎಂದು ಹೆಚ್​ಡಿಕೆ ಟೀಕೆ.. ರಾಮಲಿಂಗಾರೆಡ್ಡಿ ತಿರುಗೇಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.