ಬೆಂಗಳೂರು: ಯಲಹಂಕ ತಾಲೂಕಿನ ಹೊಸಹಳ್ಳಿ ಮತ್ತು ಬಿಲ್ಲಮಾರನಗಳ್ಳಿ ಗ್ರಾಮಗಳ ನಡುವಿನ ರಾಜಕಾಲುವೆ ಮತ್ತು ಸಾರ್ವಜನಿಕ ರಸ್ತೆ ಮಾರ್ಗದಲ್ಲಿ ಮೆರ್ಸೆಸ್ ಸ್ಯಾಮಿಸ್ ಡ್ರೀಮ್ ಲ್ಯಾಂಡ್ ಪ್ರೈವೇಟ್ ಲಿಮಿಟೆಡ್ ಬಡಾವಣೆ ಅಭಿವೃದ್ಧಿಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ನೀಡಿದೆ.
ಹೊಸಹಳ್ಳಿಯ ನಿವಾಸಿ ಕೆ.ಕೆಂಪಣ್ಣ ಮತ್ತು ಬಿಲ್ಲಮಾರನಹಳ್ಳಿಯ ಗ್ರಾಮದ 21 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವಿಭಾಗೀಯ ಪೀಠದಲ್ಲಿ ನಡೆಯಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ಉಪ ವಲಯದ ಉಪ ವಿಭಾಗಾಧಿಕಾರಿ, ಯಲಹಂಕ ತಹಸೀಲ್ದಾರ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಮತ್ತು ಮೆರ್ಸೆಸ್ ಸ್ಯಾಮಿಸ್ ಡ್ರೀಮ್ ಲ್ಯಾಂಡ್ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿರುವ ಕೋರ್ಟ್, ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ದಾಖಲೆಗಳ ಪ್ರಕಾರ, ಹೊಸಹಳ್ಳಿ ಗ್ರಾಮದ ಸರ್ವೇ ನಂ 10, 11, 12, 13, 134, 135, 136, 137, 138 ಮತ್ತು 139 ರಲ್ಲಿನ ಜಾಗವನ್ನು ರಾಜಕಾಲುವೆ (ಬಿ ಖರಾಜು ಜಮೀನು) ಜಾಗವೆಂದು ಗುರುತಿಸಲಾಗಿದೆ. ಆ ಜಾಗದ ಮೂಲಕವೇ ಸಾರ್ವಜನಿಕರ ಪಾದಚಾರಿ ಮಾರ್ಗ ಹಾದು ಹೋಗುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೆ, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗವಿರುವ ಸಂಗತಿ ಮರೆಮಾಚಿ ಈ ಸರ್ವೇ ನಂಬರ್ನಲ್ಲಿನ ಎಲ್ಲಾ ಜಾಗವನ್ನು ಸ್ಯಾಮೀಸ್ ಕಂಪನಿ ವಿವಿಧ ಹೆಸರುಗಳಲ್ಲಿ ಖರೀದಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ಪಡೆದುಕೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದ ಜಾಗ ಮುಚ್ಚಿ ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗಿದೆ. ಈ ಒತ್ತುವರಿ ತೆರವುಗೊಳಿಸಲು ಕೋರಿ ರಾಜ್ಯ ಸರ್ಕಾರಕ್ಕೆ 2024ರ ಏಪ್ರಿಲ್ 12 ಹಾಗೂ ಮಾರ್ಚ್ 5ರಂದು ಸರ್ಕಾರ ಮತ್ತದರ ಪ್ರಾಧಿಕಾರಗಳಿಗೆ ಮನವಿ ಪತ್ರ ನೀಡಲಾಗಿದೆ. ಮತ್ತೊಂದೆಡೆ, ಸರ್ಕಾರ ಈವರೆಗೂ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ರಾಜಕಾಲುವೆ ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ರಾಜಕಾಲುವೆ ಜಾಗದಲ್ಲಿ ಅಭಿವೃದ್ಧಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗ ಜಾಗದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಸ್ಯಾಮಿಸ್ ಕಂಪನಿಗೆ ನೀಡಲಾಗಿರುವ ಅನುಮೋದನೆ ರದ್ದುಪಡಿಸಬೇಕು ಮತ್ತು ಕಂಪನಿಯಿಂದ ನಡೆದಿರುವ ಒತ್ತುವರಿ ತೆರವುಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯಗಳ ಇತ್ಯರ್ಥ ವಿಚಾರ; ಹೈಕೋರ್ಟ್ ಗರಂ - High Court Object