ETV Bharat / state

'ತಮಿಳುನಾಡು ಕೇಳಿದಷ್ಟು ನಮ್ಮ ಬಳಿ ನೀರಿಲ್ಲ, ಬಿಡುವುದೂ ಇಲ್ಲ': ಡಿಸಿಎಂ ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Sep 26, 2023, 2:18 PM IST

ತಮಿಳುನಾಡಿನವರು 12,500 ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ 5 ಸಾವಿರ ಕ್ಯೂಸೆಕ್ ನೀರು ಬಿಡಲೂ ಆಗದ ಸ್ಥಿತಿಯಲ್ಲಿ ನಾವಿದ್ದೇವೆ- ಡಿಸಿಎಂ ಡಿ.ಕೆ.ಶಿವಕುಮಾರ್.

DCM DK Shivakumar
ಡಿಸಿಎಂ ಡಿ.ಕೆ.ಶಿವಕುಮಾರ್

ಕಾವೇರಿ ವಿವಾದ: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು: ತಮಿಳುನಾಡು ಕೇಳಿದಷ್ಟು ನೀರು ಬಿಡಲು ಆಗುವುದಿಲ್ಲ, ನಾವು ಬಿಡುವುದೂ ಇಲ್ಲ. ನಮ್ಮ ಬಳಿ ಅಷ್ಟು ನೀರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಾಶಿವ ನಗರದ ನಿವಾಸದ ಬಳಿ ಇಂದು ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ನಡೆಯುತ್ತಿದೆ. ತಮಿಳುನಾಡಿನವರು 12,500 ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ 5 ಸಾವಿರ ಕ್ಯೂಸೆಕ್ ನೀರು ಬಿಡಲೂ ಆಗದ ಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿದಿನ ಎಷ್ಟು ನೀರು ಬರುತ್ತಿದೆ ಮತ್ತು ಹೊರ ಹೋಗುತ್ತಿದೆ ಎನ್ನುವ ಮಾಹಿತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಬಿಳಿಗುಂಡ್ಲು ಜಲಾಶಯದಲ್ಲಿ ಪ್ರತಿಕ್ಷಣವೂ ಅದು ದಾಖಲಾಗುತ್ತದೆ.‌ ಇದನ್ನು ಎರಡೂ ರಾಜ್ಯಗಳ ಅಧಿಕಾರಿಗಳು ಗಮನಿಸುತ್ತಿರುತ್ತಾರೆ. ಅದರ ಮೇಲ್ವಿಚಾರಣೆ ರಾಜ್ಯದ ಬಳಿ ಇಲ್ಲ. ಕಾವೇರಿ ನೀರು ನಿರ್ವಹಣಾ ಸಮಿತಿಯ ಬಳಿ ಇದೆ. ಆದ ಕಾರಣ ನೀರಿನ ಹರಿವಿನ ವಿಚಾರದಲ್ಲಿ ನಾನಾಗಲಿ, ಅವರಾಗಲಿ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದರು.

ನಾವು ಸುಳ್ಳು ಹೇಳಿದರೆ ನಮ್ಮ ಮುಂದೆ ವಾಸ್ತಾವಾಂಶ ಇಡುತ್ತಾರೆ. ತಾಂತ್ರಿಕ ವಿಚಾರಗಳು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೀಡುತ್ತಾರೆ. ನಾವು ಹೇಳಿದರೆ ಕೇಳುವುದಿಲ್ಲ. ಬೆಂಗಳೂರು ಸೇರಿದಂತೆ ಸುತ್ತಮುತ್ತ ಮಳೆ ಬಿದ್ದ ಪರಿಣಾಮ ಸ್ವಲ್ಪ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಹೇಳಿದರು.

'ರಾಜಕಾರಣ ಬಿಟ್ಟು ರಾಜ್ಯದ ಹಿತ ಕಾಪಾಡಲಿ': ರಾಜ್ಯದಲ್ಲಿ ಕನ್ನಡಿಗರ ಸರ್ಕಾರವಿಲ್ಲ, ಸ್ಟಾಲಿನ್ ಸರ್ಕಾರವಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಕುಮಾರಸ್ವಾಮಿ ಅವರ ತಂದೆ ದೇವೇಗೌಡರು ಏನು ಹೇಳಿದ್ದರು?, ಈಗ ಏನು ಪತ್ರ ಬರೆದಿದ್ದಾರೆ ಎಂದು ಗೊತ್ತಿದೆಯೇ ಅವರಿಗೆ?. ನೀರಿನ ವಿಚಾರದಲ್ಲಿ ರಾಜಕಾರಣ ಬಿಟ್ಟು ರಾಜ್ಯದ ಹಿತ ಕಾಪಾಡಲಿ ಎಂದರು.

ಇಂದು ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆಯಿದೆ. ರಾಜ್ಯದ ಅಧಿಕಾರಿಗಳು ವಾಸ್ತವಾಂಶವನ್ನು ಸಮಿತಿಯ ಮುಂದೆ ಇಡಲಿದ್ದಾರೆ. ರಾಜ್ಯದ ಹಿತವೇ ನಮ್ಮ ಮೊದಲ ಆದ್ಯತೆ. ಇಂದು ಅಥವಾ ನಾಳೆ ನಾನು ಮತ್ತು ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದರು. ಇನ್ನು ಕಾವೇರಿ ನೀರಿನ ವಿಚಾರವಾಗಿ ಬಂದ್​ಗೆ ಸಹಕಾರ ನೀಡಿದ ಬೆಂಗಳೂರಿನ ನಾಗರಿಕರಿಗೆ ಅಭಿನಂದನೆಗಳು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ ಎಲ್ಲಾ ಸಂಘಟನೆಯವರಿಗೆ ಮಾಧ್ಯಮಗಳ ಮೂಲಕ ಧನ್ಯವಾದ ಎಂದು ಡಿಸಿಎಂ ತಿಳಿಸಿದರು.

ಇದನ್ನೂ ಓದಿ: ಜನಸಾಮಾನ್ಯರಿಗೆ ತೊಂದರೆಯಾಗದಂತೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಸಿಎಂ ಸಿದ್ದರಾಮಯ್ಯ

ಕಾವೇರಿ ಹೋರಾಟಕ್ಕೆ ಸುದೀಪ್ ಬೆಂಬಲ: ಕಾವೇರಿ ವಿಚಾರವಾಗಿ‌‌ ಈಗಾಗಲೇ ನಟರಾದ ಶಿವ ರಾಜ್​​ಕುಮಾರ್, ಉಪೇಂದ್ರ, ಧನಂಜಯ್, ‌ಧ್ರುವ ಸರ್ಜಾ, ದುನಿಯಾ ವಿಜಯ್, ದರ್ಶನ್ ಸೇರಿದಂತೆ ಸಾಕಷ್ಟು ಕನ್ನಡ ಕಲಾವಿದರು ರೈತರ ಪರವಾಗಿ ನಾವಿದ್ದೇವೆಂದು ತಿಳಿಸಿ, ಹೋರಾಟವನ್ನು ಬೆಂಬಲಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ರೈತರ ಪರವಾಗಿ ಹಾಗೂ ಇಂದಿನ ಹೋರಾಟದಲ್ಲಿ ನಾನು‌ ನಿಮ್ಮ ಜೊತೆ ಇರುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡದ ನೆಲ, ಜಲ, ಭಾಷೆಯ ಎಲ್ಲಾ ಹೋರಾಟಗಳಲ್ಲೂ ಸದಾ ನಿಮ್ಮೊಂದಿಗೆ: ಕಿಚ್ಚ ಸುದೀಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.