ETV Bharat / entertainment

ಕನ್ನಡದ ನೆಲ, ಜಲ, ಭಾಷೆಯ ಎಲ್ಲಾ ಹೋರಾಟಗಳಲ್ಲೂ ಸದಾ ನಿಮ್ಮೊಂದಿಗೆ: ಕಿಚ್ಚ ಸುದೀಪ್

author img

By ETV Bharat Karnataka Team

Published : Sep 26, 2023, 12:35 PM IST

Updated : Sep 26, 2023, 12:45 PM IST

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನಟ ಕಿಚ್ಚ ಸುದೀಪ್​ ಸುದೀರ್ಘ ಬರಹವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

kiccha sudeep
ಕಿಚ್ಚ ಸುದೀಪ್

ಚಿತ್ರಮಂದಿರಗಳು ಬಂದ್

ಕಾವೇರಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್​ ನಡೆಸುತ್ತಿವೆ. ಕನ್ನಡ ಚಿತ್ರರಂಗವೂ ಸಹ ಈ ಹೋರಾಟವನ್ನು ಬೆಂಬಲಿಸಿದೆ. ಸಿನಿಮಾ, ಕಿರುತೆರೆ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಫಿಲ್ಮ್ ಚೇಂಬರ್ ಬಾಗಿಲು ಹಾಕುವ ಮೂಲಕ ಸಾಥ್ ಕೊಟ್ಟಿದೆ.

ಚಿತ್ರಮಂದಿರಗಳು ಬಂದ್: ಬೆಂಗಳೂರಿನಲ್ಲಿ ಸಿನಿಮಾ, ಸೀರಿಯಲ್ ಶೂಟಿಂಗ್ ಸ್ಥಗಿತಗೊಂಡಿದೆ. ಬೆಳಗ್ಗೆ 6 ಗಂಟೆಯಿಂದ‌ ಸಂಜೆ 6 ಗಂಟೆವರೆಗೂ ಥಿಯೇಟರ್​​ಗಳು ಚಿತ್ರ ಪ್ರದರ್ಶನ ನಿಲ್ಲಿಸಲು ನಿರ್ಧರಿಸಿವೆ. ಸಂತೋಷ್, ನರ್ತಕಿ, ತ್ರಿವೇಣಿ, ಅನುಪಮ, ಸ್ವಪ್ನ ಚಿತ್ರಮಂದಿರಗಳು ಬಂದ್ ಆಗಿವೆ. ತಮಿಳು ಚಿತ್ರಗಳೇ ಹೆಚ್ಚಾಗಿ ಪ್ರದರ್ಶನವಾಗುವ ಊರ್ವಶಿ, ಪೂರ್ಣಿಮಾ ಥಿಯೇಟರ್​ಗಳು ಬಿಕೋ ಎನ್ನುತ್ತಿದ್ದವು.

ಕಿಚ್ಚ ಸುದೀಪ್​​ ಬೆಂಬಲ: ಕಾವೇರಿ ವಿಚಾರವಾಗಿ‌‌ ಈಗಾಗಲೇ ನಟರಾದ ಶಿವ ರಾಜ್​​ಕುಮಾರ್, ಉಪೇಂದ್ರ, ಧನಂಜಯ್, ‌ಧ್ರುವ ಸರ್ಜಾ, ದುನಿಯಾ ವಿಜಯ್, ದರ್ಶನ್ ಸೇರಿದಂತೆ ಸಾಕಷ್ಟು ಕನ್ನಡ ಕಲಾವಿದರು ರೈತರ ಪರವಾಗಿ ನಾವಿದ್ದೇವೆಂದು ತಿಳಿಸಿ, ಹೋರಾಟವನ್ನು ಬೆಂಬಲಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ರೈತರ ಪರವಾಗಿ ಹಾಗೂ ಇಂದಿನ ಹೋರಾಟದಲ್ಲಿ ನಾನು‌ ನಿಮ್ಮ ಜೊತೆ ಇರುತ್ತೇನೆ ಎಂದು ತಿಳಿಸಿದ್ದಾರೆ. ಸುದೀಪ್ ಪತ್ರದಲ್ಲಿರುವ ಸಾರಾಂಶ ಹೀಗಿದೆ..

''ಸಮಸ್ತ ಕನ್ನಡ ಜನತೆಗೆ ಸಮಸ್ಕಾರ. ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲಾ ಹೋರಾಟಗಳಲ್ಲಿಯೂ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರು ಮಳೆಯ ಅಭಾವದಿಂದ ರೈತರಿಗೆ, ಜನತೆಗೆ ಕೃಷಿ ಮಾತ್ರವಲ್ಲದೇ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ, ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ - ಕಾವೇರಿ ಸಮಿತಿಯ ತಂತ್ರಜ್ಞರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ. ಹಿಂದಿನ ಕೆಲ ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ತಮಿಳುನಾಡಿನ ಮುಖ್ಯ ಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ - ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ, ಆದರೆ ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ.

ಇದರ ಜೊತೆಗೆ, ಉತ್ತರ ಕರ್ನಾಟಕದ ಕೃಷ್ಣಾ ನದಿ - ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು. ಪ್ರೀತಿಯಿಂದ ನಿಮ್ಮ ಕಿಚ್ಚ'' ಎಂಬ ಪೋಸ್ಟ್ ಅನ್ನು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ Xನಲ್ಲಿ (ಹಿಂದಿನ ಟ್ವಿಟರ್​) ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬಂದ್​ಗೆ ಚಿತ್ರೋದ್ಯಮದಿಂದ ಬೆಂಬಲ: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್

Last Updated : Sep 26, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.