ETV Bharat / state

ಸಿಬಿಐ ನನ್ನ ಕುಟುಂಬದವರಿಗೆಲ್ಲ ನೋಟಿಸ್ ನೀಡಿದೆ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ: ಡಿಕೆಶಿ

author img

By ETV Bharat Karnataka Team

Published : Jan 1, 2024, 3:44 PM IST

ಈ ಪ್ರಕರಣದಲ್ಲಿ ಸರ್ಕಾರ ಸಿಬಿಐ ತನಿಖೆಯನ್ನು ಹಿಂಪಡೆದಿದೆ. ಆದರೂ ಸಿಬಿಐ ನಮಗೆ ನೋಟಿಸ್​ ನೀಡಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ಹೇಳಿದರು.

dcm-d-k-shivakumar
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು : ನನ್ನ ಮಕ್ಕಳು, ಹೆಂಡತಿಗೆ ಸಿಬಿಐ ನೋಟೀಸ್ ಬಂದಿದ್ದು, ನನಗೆ ವೈಯಕ್ತಿಕವಾಗಿ ನೋಟೀಸ್ ಬಂದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಕೇರಳ ಸುದ್ದಿವಾಹಿನಿಯಲ್ಲಿ ಹೂಡಿಕೆ ಸಂಬಂಧ ಸಿಬಿಐ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಸಂಸ್ಥೆಗೆ ನೋಟಿಸ್ ಬಂದಿದೆ. ನನ್ನ ಮಕ್ಕಳು, ಹೆಂಡತಿಗೆ ನೋಟಿಸ್ ಕಳಿಸಲಾಗಿದೆ. ವೈಯಕ್ತಿಕವಾಗಿ ನೋಟಿಸ್ ಬಂದಿಲ್ಲ. ಆಮೇಲೆ ನನ್ನ ಹತ್ತಿರ ಬರ್ತಾರೆ. ಯಾವ ಆಧಾರದಲ್ಲಿ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ದಾಖಲೆ ಎಲ್ಲಾ ಕೊಟ್ಟಿದ್ದೇವೆ. ಕಿರುಕುಳ ಕೊಡಲು‌ ನೋಟಿಸ್ ನೀಡಿದ್ದಾರೆ. ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೀತಾ ಇದೆ ಎಂದು ಆರೋಪಿಸಿದ್ದಾರೆ.

ಸುದ್ದಿ ವಾಹಿನಿಗಷ್ಟೇ ನೋಟಿಸ್ ಕೊಟ್ಟಿಲ್ಲ. ಹಾಪ್ ಕಾಮ್ಸ್, ಸಬ್ ರಿಜಿಸ್ಟಾರ್ಗಳಿಗೂ ಕೊಟ್ಟಿದ್ದಾರೆ. ಸರ್ಕಾರ ಸಿಬಿಐಗೆ ಕೊಟ್ಟ ಅನುಮತಿ ಹಿಂಪಡೆದಿದೆಯಾದರೂ ಕೂಡ ಯಾವ ಲೆಕ್ಕಾಚಾರದಲ್ಲಿ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಎಲ್ಲಾ ದಾಖಲೆಗಳು ಅವರ ಬಳಿ ಇವೆ. ದೊಡ್ಡವರು ಕುಳಿತು‌ ಮಾಡುತ್ತಿದ್ದಾರೆ. ನಾನು ಏನು ತಪ್ಪು ಮಾಡಿಲ್ಲ. ಸಿಬಿಐ ಅವರು 10% ತನಿಖೆ ಮಾಡಿರಲಿಲ್ಲ. 90% ತನಿಖೆ ಮಾಡಿದ್ದೇವೆ ಎಂದು ಕೋರ್ಟ್​ಗೆ ಹೇಳಿದ್ದಾರೆ. ಅಷ್ಟು ತನಿಖೆ ಆಗಿಲ್ಲ. ಬೇಕಿದ್ರೆ ನನ್ನನ್ನು ಒಳಗೆ ಹಾಕಲಿ ಎಂದು ಡಿಕೆಶಿ ಹೇಳಿದರು.

ಈ ಪ್ರಕರಣದಲ್ಲಿ ಸರ್ಕಾರ ಅನುಮತಿ ಹಿಂಪಡೆದಿದೆ. ಆ ಪ್ರಕಾರ ಎಲ್ಲಾ ದಾಖಲೆಗಳನ್ನು ಅವರು ಲೋಕಾಯುಕ್ತಕ್ಕೆ ಕೊಡಬೇಕು. ನನಗೆ ಇರುವ ಕಾನೂನಿನ ಜ್ಞಾನ ಇದು. ನಾನೇನು ಲಾಯರ್ ಅಲ್ಲ, ನನಗಿರುವ ಕಾನೂನಿನ ಅರಿವಿನಲ್ಲಿ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಡಬೇಕು. ಈಗ ಕಿರುಕುಳ ನೀಡೋಕೆ ಅಲ್ಲಿ ಇರುವ ದೊಡ್ಡದೊಡ್ಡ ಜನ ಈ ರೀತಿ ಮಾಡುತ್ತಿದ್ದಾರೆ. ಅದೆಲ್ಲಾ ನನಗೆ ಗೊತ್ತಿದೆ. ಅವರು ಏನೂ ಬೇಕಾದರೂ ಮಾಡಲಿ. ನನ್ನ ರಾಜಕೀಯವಾಗಿ ಮುಗಿಸಬೇಕು, ತೊಂದರೆ ಮಾಡಬೇಕು ಎಂಬ ಷಡ್ಯಂತ್ರ ನಡೀತಿದೆ. ಕೆಲ ಬಿಜೆಪಿ ನಾಯಕರು ಹಿಂದೆನೇ ಹೇಳಿದ್ದರು. ನನ್ನ ಜೈಲಿಗೆ ಕಳುಸ್ತೀವಿ ಅಂತ ಭವಿಷ್ಯ ನುಡಿದಿದ್ದರು. ನಾನು ಅವರನ್ನು ಚರ್ಚೆ ಮಾಡೋಣ ಬನ್ನಿ ಅಂತ ಕರೆದಿದ್ದೆ. ಅವರು ಏನು ಬೇಕಾದರೂ ತನಿಖೆ ಮಾಡಲಿ. ಎಲ್ಲಿ ನನಗೆ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ವರ್ಷದ ಶುಭಾಶಯ ಕೋರಿದ ಡಿಕೆಶಿ : ಸರ್ಕಾರ ಮತ್ತು ಕಾಂಗ್ರೆಸ್ ಪರವಾಗಿ ನಾಡಿನ ಜನತೆಗೆ ಡಿಸಿಎಂ ಡಿ ಕೆ ಶಿವಕುಮಾರ್​ ಹೊಸ ವರ್ಷದ ಶುಭಾಶಯ ಕೋರಿದರು. ಕಳೆದ ವರ್ಷ ಬರಗಾಲ ಇತ್ತು. ಈ ವರ್ಷ ಬರಗಾಲ ಛಾಯೆ ಹೋಗಲಿ. ರೈತರ ಬದುಕು ಹಸಿರಾಗಲಿ. ಐದು ಗ್ಯಾರಂಟಿ ಕೊಟ್ಟಿದ್ದೇವೆ. ಕೊಟ್ಟ ಮಾತು‌ ಉಳಿಸಿಕೊಂಡಿದ್ದೇವೆ. ಬಸವಣ್ಣನವರ ನಾಡಿನಲ್ಲಿ ಇದ್ದೇವೆ. ಮತ ಹಾಕಿದವರ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದರು.

ಇದನ್ನೂ ಓದಿ : ಹೊಸ ವರ್ಷಕ್ಕೆ ಕಾವ್ಯಮಯವಾಗಿ ಶುಭ ಕೋರಿದ ವಿಜಯೇಂದ್ರ, ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.