ETV Bharat / state

ಕಾವೇರಿ ನಮ್ಮ ಜೀವನದ ಪ್ರಶ್ನೆ, ಮೇಕೆದಾಟು ಅಣೆಕಟ್ಟೆಗೆ ಅವಕಾಶ ನೀಡಲ್ಲ: ತಮಿಳುನಾಡು ಸಚಿವ

author img

By

Published : Jul 6, 2023, 12:44 PM IST

ಕಾವೇರಿ ವಿಚಾರ ನಮ್ಮ ಜೀವನದ ಪ್ರಶ್ನೆಯಾಗಿದ್ದು, ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ.

Cauvery river
Cauvery river

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆಯ ವಿಚಾರ ಯಾವುದೋ ಸಣ್ಣ ವಿಷಯವಲ್ಲ, ಇದು ನಮ್ಮ ಜೀವನದ ಪ್ರಶ್ನೆಯಾಗಿದೆ. ಎರಡು ರಾಜ್ಯಗಳಲ್ಲಿ ಹರಿಯುವ ಕಾವೇರಿ ನದಿಗೆ ಮೇಕೆದಾಟು ಬಳಿ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕಕ್ಕೆ ತಮಿಳುನಾಡು ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಸಚಿವ ದುರೈಮುರುಗನ್ ಗುರುವಾರ ಇಲ್ಲಿ ಹೇಳಿದ್ದಾರೆ.

ಕಾವೇರಿ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನು ಭೇಟಿ ಮಾಡಿದ ಇಂದು ಮುಂಜಾನೆ ದೆಹಲಿಯಿಂದ ಆಗಮಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಂತಾರಾಜ್ಯ ನದಿ ನೀರಲ್ಲಿ ತನಗೆ ಕಡಿಮೆ ಪಾಲು ಸಿಗುತ್ತಿದೆ ಎಂಬ ವಿಷಯವನ್ನು ತಮಿಳುನಾಡು ಕೇಂದ್ರ ಸರ್ಕಾರದ ಮುಂದೆ ಮನವರಿಕೆ ಮಾಡಿದೆ.

ಜುಲೈ 3 ರಲ್ಲಿದ್ದಂತೆ ತಮ್ಮ ರಾಜ್ಯಕ್ಕೆ ಕಾವೇರಿ ನದಿಯಿಂದ ಕಡಿಮೆ ಪ್ರಮಾಣದ ನೀರನ್ನು ಬಿಡಲಾಗಿದೆ ಮತ್ತು ಇದೇ ಪರಿಸ್ಥಿತಿ ಮುಂದುವರಿದರೆ ನದಿ ಪಾತ್ರದ ಜಿಲ್ಲೆಗಳಲ್ಲಿ ಅಲ್ಪಾವಧಿಯ 'ಕುರುವಾಯಿ ಬೆಳೆಗಳು' ನಾಶವಾಗಬಹುದು ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವರಾದ ದುರೈಮುರುಗನ್ ಹೇಳಿದರು.

ರಾಜ್ಯದ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿನ ಬೆಳೆಗಳನ್ನು ರಕ್ಷಿಸಲು ಕರ್ನಾಟಕ ಕಾವೇರಿಯಿಂದ ನೀರು ಬಿಡಬೇಕು ಮತ್ತು ಈ ಉದ್ದೇಶಕ್ಕಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ಕರ್ನಾಟಕದೊಂದಿಗೆ ಮಾತುಕತೆ ನಡೆಸಬೇಕು ಅಥವಾ ಹಾಗೆ ಮಾಡಲು ಆದೇಶಿಸಬೇಕು ಎಂದು ಕೇಂದ್ರ ಸಚಿವ ಶೇಖಾವತ್ ಅವರಿಗೆ ಮನವಿ ಮೂಲಕ ತಿಳಿಸಲಾಯಿತು ಎಂದು ದುರೈಮುರುಗನ್ ತಿಳಿಸಿದರು.

ನಮ್ಮ ಮನವಿಯನ್ನು ಆಲಿಸಿದ ಕೇಂದ್ರ ಸಚಿವರು ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ದುರೈಮುರುಗನ್ ಹೇಳಿದರು. ಕಾವೇರಿ ನೀರಿನ ವಿಚಾರ ಸಾಮಾನ್ಯ ಸಮಸ್ಯೆಯಲ್ಲ, ಇದು ನಮ್ಮ ಜೀವನದ ಪ್ರಶ್ನೆಯಾಗಿದೆ ಮತ್ತು ನಾನು ಇದನ್ನು ಕೇಂದ್ರ ಸಚಿವರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಮೇಕೆದಾಟಿನಲ್ಲಿ ಕಾವೇರಿಗೆ ಅಡ್ಡಲಾಗಿ ಬ್ಯಾಲೆನ್ಸಿಂಗ್ ಜಲಾಶಯ ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆ ಕುರಿತು ಕೇಳಿದ ಪ್ರಶ್ನೆಗೆ- ಮಾತುಕತೆ ನಡೆಸಿದರೂ ಅಥವಾ ನಮಗೆ ಪತ್ರ ಬರೆದರೂ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಒಪ್ಪಿಗೆ ನೀಡುವುದಿಲ್ಲ ಎಂದರು.

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಭಾಗವಹಿಸಿದರೆ ರಾಜ್ಯ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿಕೆಗೆ ಪ್ರತಿಕ್ರಿಯಿಸಿದ ದುರೈಮುರುಗನ್, ಅದು ಅವರ ಆಸೆ ಎಂದಷ್ಟೇ ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಳೆದ ಹಲವಾರು ದಶಕಗಳಿಂದ ವಿವಾದ ನಡೆದಿದೆ. 2019 ರಲ್ಲಿ, ಕರ್ನಾಟಕ ಸರ್ಕಾರವು ಬೆಂಗಳೂರಿನಿಂದ 90 ಕಿಮೀ ಮತ್ತು ಕರ್ನಾಟಕ-ತಮಿಳುನಾಡು ಗಡಿಯಿಂದ 4 ಕಿಮೀ ದೂರದಲ್ಲಿರುವ ರಾಮನಗರ ಜಿಲ್ಲೆಯ ಮೇಕೆದಾಟು ಎಂಬಲ್ಲಿ ಜಲಾಶಯವನ್ನು ನಿರ್ಮಿಸುವ ಯೋಜನೆ ಕುರಿತು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.

ಇದನ್ನೂ ಓದಿ : ಅಗ್ನಿಸಾಕ್ಷಿಯಲ್ಲ, ChatGPT ಸಾಕ್ಷಿಯಾಗಿ ನಡೆಯಿತು ಮದುವೆ; ಇದು ಚಾಟ್​ಬಾಟ್​ ಪೌರೋಹಿತ್ಯದ ವಿವಾಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.