ETV Bharat / state

ಕರ್ನಾಟಕದಲ್ಲೂ ಗುಜರಾತ್ ತಂತ್ರಕ್ಕೆ ಬಿಜೆಪಿ ಚಿಂತನೆ: 20 ಹಾಲಿ ಶಾಸಕರಿಗೆ ಟಿಕೆಟ್ ಡೌಟ್!

author img

By

Published : Dec 8, 2022, 9:06 PM IST

Updated : Dec 9, 2022, 9:50 AM IST

Gujarat model strategy
Gujarat model strategy

ಕರ್ನಾಟಕದಲ್ಲಿ ಆರು ನೂರಕ್ಕೂ ಹೆಚ್ಚು ಮಂದಿ ಪ್ರತ್ಯೇಕ ಮತದಾರ ಸಮೀಕ್ಷಾ ತಂಡಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ತಂಡ 20 ಹಾಲಿ ಬಿಜೆಪಿ ಶಾಸಕರು ಹಾಗೂ ಓರ್ವ ಸಚಿವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಇಲ್ಲ ಎಂದು ವರದಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಬೆಂಗಳೂರು: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಬಿಜೆಪಿ ಹುಮ್ಮಸ್ಸಿನಲ್ಲಿದೆ. ಕರ್ನಾಟಕದಲ್ಲಿಯೂ ಗುಜರಾತ್ ಮಾದರಿ ತಂತ್ರಗಾರಿಕೆ ಅನುಸರಿಸುವ ಮೂಲಕ ರಾಜ್ಯದ ಮುಂದಿನ ವಿಧಾನಸಭೆಗೆ ಬಿಜೆಪಿ ಚುನಾವಣೆಗೆ ಇಳಿಯಲಿದ್ದು, 20ಕ್ಕೂ ಹೆಚ್ಚು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವರಿರುವ ಕೆಲವರು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ದೆಹಲಿ ಬಿಜೆಪಿ ವರಿಷ್ಠರು ಯೋಚಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಕರ್ನಾಟಕದಲ್ಲಿ ಆರು ನೂರಕ್ಕೂ ಹೆಚ್ಚು ಮಂದಿ ಮೋದಿ-ಅಮಿತ್ ಶಾ ಅವರ ಸೂಚನೆಯಂತೆ ಪ್ರತ್ಯೇಕ ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ರವಾನಿಸುವ ವರದಿ ಪ್ರಕಾರ ಬಿಜೆಪಿಯ ಹಾಲಿ ಶಾಸಕರ ಪೈಕಿ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಮತ್ತೆ ಗೆಲ್ಲುವ ಶಕ್ತಿ ಇಲ್ಲ. ಅಂಥವರಿಗೆ ಯಾವ ಕಡೆಯಿಂದ ಶಕ್ತಿ ನೀಡಿದರೂ ಅವರ ಎದುರಾಳಿಗಳನ್ನು ಗೆಲ್ಲುವುದು ಸಾಧ್ಯವಿಲ್ಲ. ಹೀಗಾಗಿ ಅಂತ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವುದು ಉತ್ತಮ ಎಂದು ಈ ಸರ್ವೇ ಕೈಗೊಂಡಿರುವ ತಂಡಗಳು ವರದಿ ರವಾನಿಸಿವೆ.

ಮುಂದಿನ ಚುನಾವಣೆಯಲ್ಲಿ ಗೆಲ್ಲುವವರು ಯಾರು? ಸ್ವಲ್ಪ ಪುಷ್ಟಿ ತುಂಬಿದರೂ ಗೆಲ್ಲುವವರು ಮತ್ತು ಯಾವ ಕಾರಣಕ್ಕೂ ಗೆಲ್ಲದೇ ಇರುವವರು ಯಾರು ಎಂಬ ಮೂರು ವಿಭಾಗಗಳನ್ನು ಈ ಸರ್ವೇ ತಂಡಗಳು ಗುರುತಿಸಿವೆ. ಸೋಲು ಅನುಭವಿಸುವವರು ಯಾರು? ಎಂಬ ವಿವರವನ್ನು ವರಿಷ್ಠರಿಗೆ ಸಮೀಕ್ಷಾ ತಂಡಗಳು ನೀಡಿವೆ.

ಬಸವರಾಜ ಬೊಮ್ಮಾಯಿ ಸಂಪುಟದ ಒಬ್ಬ ಸಚಿವರಂತೂ ತಮ್ಮ ಕ್ಷೇತ್ರದಲ್ಲಿ ಪಂಚಾಯಿತಿಗೊಬ್ಬರಂತೆ ಆಪ್ತ ಸಹಾಯಕರನ್ನಿಟ್ಟುಕೊಂಡಿದ್ದರೂ ಈ ಆಪ್ತ ಸಹಾಯಕರ ನಡವಳಿಕೆ ಈ ಸಚಿವರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಜನರಲ್ಲಿ ಅವರ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ. ಹೀಗಾಗಿ ಹಾಲಿ ಶಾಸಕರ ಪೈಕಿ ಯಾರು ಯಾರು ತಮ್ಮ ನೆಲೆ ಕಳೆದುಕೊಂಡಿರುವವರ ಬಗ್ಗೆ ವಿವರಿಸಿರುವ ಸರ್ವೇ ತಂಡಗಳು, ಇಂಥವರಿಗೆ ಟಿಕೆಟ್ ತಪ್ಪಿಸದಿದ್ದರೆ ಪಕ್ಷ ಗೆಲುವಿನ ಆಸೆ ಹೊಂದುವಂತಿಲ್ಲ ಎಂದು ಎಂದು ಖಚಿತ ಪಡಿಸಿವೆ.

ಇವರ ಬದಲು ಕ್ಷೇತ್ರದ ಯಾರಿಗೆ ಟಿಕೆಟ್ ಕೊಟ್ಟರೆ ಅನುಕೂಲ ಎಂಬ ಬಗ್ಗೆಯೂ ಅವರು ವಿವರ ರವಾನಿಸಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ವರಿಷ್ಠರು ರವಾನಿಸಿದ್ದ ಸರ್ವೇ ತಂಡಗಳು, ಹಾಲಿ ಶಾಸಕರ ಪೈಕಿ ನಲವತ್ತರಷ್ಟು ಮಂದಿ ಗೆಲ್ಲುವುದಿಲ್ಲ ಎಂದು ವರದಿ ನೀಡಿದ್ದವು.

ಈ ವರದಿ ಆಧಾರದ ಮೇಲೆ ನಲವತ್ತು ಮಂದಿ ಶಾಸಕರಿಗೆ ಪಕ್ಷ ಚುನಾವಣೆಯ ಟಿಕೆಟ್ ನಿರಾಕರಿಸಿತ್ತು. ಹೀಗೆ ಟಿಕೆಟ್ ಕೈ ತಪ್ಪಿದವರ ಪೈಕಿ ಏಳು ಮಂದಿ ಸ್ವತ: ಅಮಿತ್ ಶಾ ಅವರ ಪರಮಾಪ್ತರು. ಆದರೆ ಗೆಲುವಿನ ಸಾಧ್ಯತೆ ಇಲ್ಲವೆಂಬ ಮನವರಿಕೆ ಬಳಿಕ ವರಿಷ್ಠರು ನಲವತ್ತು ಮಂದಿ ಹಾಲಿ ಶಾಸಕರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು.

ಬಿಜೆಪಿ ವರಿಷ್ಠರು ಕರ್ನಾಟಕದಲ್ಲೂ ಇದೇ ಸೂತ್ರ ಅನುಸರಿಸಲು ಮುಂದಾಗುತ್ತಾರೆ ಎಂಬ ವಿಶ್ಲೇಷಣೆ ಬಿಜೆಪಿ ಪಾಳೆಯದಲ್ಲಿ ಕೇಳಿ ಬಂದಿದೆ. ಈ ಬೆಳವಣಿಗೆಯೂ ವ್ಯಾಪಕ ಕುತೂಹಲಕ್ಕೂ ಸಹ ಕಾರಣವಾಗಿದೆ. ದೆಹಲಿ ವರಿಷ್ಠರು ಗುಜರಾತ್ ಮಾದರಿ ಅನುಸರಿಸುತ್ತಾರೋ ಅಥವಾ ಬೇರೆ ತಂತ್ರಗಾರಿಕೆ ಅನುಸರಿಸುತ್ತಾರೋ ಎಂಬುದು ಕಾದು ನೋಡಬೇಕು.

ಇದನ್ನೂಓದಿ: ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..

Last Updated :Dec 9, 2022, 9:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.