ETV Bharat / state

ರಾಹುಲ್ ಪಾದಯಾತ್ರೆ ಎಫೆಕ್ಟ್: ಬಿಜೆಪಿಯಲ್ಲಿ ಬಿರುಸುಗೊಂಡ ತಂತ್ರಗಾರಿಕೆ ಪ್ರಯೋಗ, ಕಾಂಗ್ರೆಸ್​​ಗೆ ಶಾಕ್​ ಮೇಲೆ ಶಾಕ್

author img

By

Published : Oct 9, 2022, 12:35 PM IST

ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಗೆ ಕೌಂಟರ್ ಕೊಡಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ.

ರಾಹುಲ್ ಪಾದಯಾತ್ರೆ ಎಫೆಕ್ಟ್
ರಾಹುಲ್ ಪಾದಯಾತ್ರೆ ಎಫೆಕ್ಟ್

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಮತ್ತು ಅದಕ್ಕೆ ಸಿಗುತ್ತಿರುವ ಜನಸ್ಪಂದನೆ ಆಡಳಿತ ಪಕ್ಷ ಬಿಜೆಪಿಯನ್ನು ಕಸಿವಿಸಿಗೊಳಿಸಿದೆ. ರಾಹುಲ್ ಗಾಂಧಿ ಯಾತ್ರೆಗೆ ಕೌಂಟರ್ ನೀಡದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ದುಬಾರಿ ಬೆಲೆ ತೆರಬೇಕಾಗುತ್ತದೆ ಎನ್ನುವ ಅಪಾಯದ ಮುನ್ಸೂಚನೆ ಅರಿತ ಬಿಜೆಪಿ, ರಾಜ್ಯದ ಜನರ ಗಮನ ರಾಹುಲ್ ಯಾತ್ರೆ ಕಡೆ ಹೋಗದಂತೆ ಮತದಾರರ ಮನಸ್ಸನ್ನು 'ಡೈವರ್ಟ್' ಮಾಡಲು ತೀವ್ರ ತರಹದ ಕಸರತ್ತು ನಡೆಸಿದೆ.

ಪಿಎಫ್​ಐ ಮತ್ತು ಅದರ ಅಂಗಸಂಸ್ಥೆಗಳಿಗೆ ಬ್ರೇಕ್​.. ಕಾಂಗ್ರೆಸ್ ಯಾತ್ರೆಯ ಪರಿಣಾಮವಾಗಿ ಬಿಜೆಪಿಯಲ್ಲಿ ಈಗ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ. ಸದಾ ಒಂದಿಲ್ಲೊಂದು ತಂತ್ರಗಾರಿಕೆಗಳ ಪ್ರಯೋಗ ನಡೆಸಿ ಕಾಂಗ್ರೆಸ್ ಪಕ್ಷವೇ ಬೆಚ್ಚಿಬೀಳಿಸುವಂತೆ ಮಾಡಿದೆ. ಪಿಎಫ್​​ಐ ನಿಷೇಧ ಮತ್ತು ನೂರಾರು ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡರ ಬಂಧನವು ರಾಹುಲ್ ಗಾಂಧಿ ಯಾತ್ರೆಗೆ ಬಿಜೆಪಿ ನೀಡಿದ ಮೊದಲ ಬಿಗ್ ಕೌಂಟರ್ ಎನ್ನಲಾಗ್ತಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಿಎಫ್​​ಐ ನಿಷೇಧಿಸುವ ಮೂಲಕ ದೇಶಾದ್ಯಂತ ಪರ - ವಿರೋಧದ ಚರ್ಚೆಯನ್ನೇ ಹುಟ್ಟು ಹಾಕಿತು. ರಾಹುಲ್ ಗಾಂಧಿಯ ಭಾರತ ಜೋಡೋ ಯಾತ್ರೆ ಬಗ್ಗೆ ಮಾತನಾಡುತ್ತಿದ್ದವರು ಪಿಎಫ್​​ಐ ನಿಷೇಧದ ಸರಿ ತಪ್ಪುಗಳ ಬಗ್ಗೆ ಅವಲೋಕನ ಮಾಡುವಂತ ವಾತಾವರಣ ನಿರ್ಮಾಣ ಮಾಡಲಾಯಿತು. ಇದಿಷ್ಟೇ ಸಾಲದೆಂಬಂತೆ ರಾಜ್ಯದಲ್ಲಿ ಆಡಳಿತದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಮತ್ತೊಂದು ಬಿಗ್ ಶಾಕ್​ ನೀಡಿದೆ.

(ಓದಿ: ಗಂಧದ ಗುಡಿ ಟ್ರೈಲರ್ ಮೆಚ್ಚಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ)

ಈ ವಿದ್ಯಮಾನಗಳ ನಡುವೆ ಬೆಂಗಳೂರು - ಮೈಸೂರು ನಡುವೆ ಸಂಚರಿಸುತ್ತಿದ್ದ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಕೇಂದ್ರದ ಬಿಜೆಪಿ ಸರ್ಕಾರ ಬದಲಾವಣೆ ಮಾಡಿ ಟಿಪ್ಪು ಬದಲಿಗೆ ಮೈಸೂರು ರಾಜಮನೆತನದ "ಒಡೆಯರ್" ಅವರ ಹೆಸರನ್ನು ನಾಮಕರಣ ಮಾಡಿರುವುದು ಸಹ ಕಾಂಗ್ರೆಸ್​​ಗೆ ಮತ್ತೊಂದು ಶಾಕ್​ಅನ್ನು ಭಾರತೀಯ ಜನತಾ ಪಕ್ಷ ನೀಡಿದೆ.

ಮೀಸಲಾತಿ ಹೆಚ್ಚಳ.. ಪಿಎಫ್​​ಐ ನಿಷೇಧ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಟಿಪ್ಪು ರೈಲಿನ ಹೆಸರು ಬದಲಿಸಿ ಬಿಜೆಪಿಯು ಚಾಣಾಕ್ಷತನದಿಂದ ಕಾಂಗ್ರೆಸ್ ಪಕ್ಷವನ್ನ ಕಟ್ಟಿ ಹಾಕುವಂತೆ ಮಾಡಿದೆ. ಹಿಂದುತ್ವದ ಮತ್ತು ವೋಟ ಬ್ಯಾಂಕ್ ರಾಜಕೀಯದ ಜೊತೆಗೆ ಕಾಂಗ್ರೆಸ್ ಯಾತ್ರೆಗೆ ಕೌಂಟರ್ ಆಗಿ ಪಕ್ಷ ಸಂಘಟನೆಗೂ ಭಾರತೀಯ ಜನತಾ ಪಕ್ಷ ಹೆಚ್ಚಿನ ಆದ್ಯತೆ ನೀಡಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಕರಾವಳಿ ಭಾಗದಲ್ಲಿ ಎಸ್ಸಿ ಸಮಾವೇಶ, ಎಸ್ಟಿ ಸಮಾವೇಶ, ಯುವಕರ ಸಮಾವೇಶ, ಮಹಿಳಾ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

ಜನ ಸಂಕಲ್ಪ ಯಾತ್ರೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಸಾರಥ್ಯದಲ್ಲಿ ಇದೇ 11ರಿಂದ ಜನ ಸಂಕಲ್ಪ ಯಾತ್ರೆಯನ್ನು ಬಿಜೆಪಿ ನಡೆಸಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವದಲ್ಲಿ ಮತ್ತೊಂದು ತಂಡವು ಜನಸಂಕಲ್ಪ ಯಾತ್ರೆ ಕೈಗೊಳ್ಳಲಿದ್ದು, ಇದು ಸಹ ರಾಹುಲ್ ಯಾತ್ರೆಗೆ ಕೌಂಟರ್ ನೀಡುವ ಪ್ರಯತ್ನವಾಗಿದೆ.

ಸಿಎಂ ಬೊಮ್ಮಾಯಿ-ಮಾಜಿ ಸಿಎಂ ಯಡಿಯೂರಪ್ಪ ಜಂಟಿಯಾಗಿ ಅಕ್ಟೋಬರ್ 11ರಂದು ರಾಯಚೂರು ಗ್ರಾಮಾಂತರ ಕ್ಷೇತ್ರದಿಂದ ಜನಸಂಕಲ್ಪ ಯಾತ್ರೆ ಆರಂಭಿಸಲಿದ್ದು, ಇದು ಡಿಸೆಂಬರ್ 25ರವರೆಗೆ ಮುಂದುವರಿಯಲಿದೆ. 50 ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್​​ವೈ ಜಂಟಿಯಾಗಿ ಪ್ರವಾಸ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ 25 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

(ಓದಿ: ಕನ್ನಡದಲ್ಲೇ ಪ್ರಧಾನಿ ಮೋದಿ ಟ್ವೀಟ್.. ಅಹಮದಾಬಾದ್‌ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಮೆಚ್ಚುಗೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.