ETV Bharat / state

ಬಯೋ ಮಾಂಗೇ ಮೋರ್; ಜೈವಿಕ ವಿಜ್ಞಾನವು ದೇಶದ ಜೈವಿಕ ಆರ್ಥಿಕತೆಯಾಗಬೇಕು; ರಾಜೇಶ್​ ಗೋಖಲೆ

author img

By ETV Bharat Karnataka Team

Published : Nov 29, 2023, 9:21 PM IST

Bengaluru Tech Summit 2023: 2022ರಲ್ಲಿ 80 ಶತಕೋಟಿ ಡಾಲರ್‌ನಷ್ಟಿದ್ದ ಜೈವಿಕ ಆರ್ಥಿಕತೆಯು 2030ರ ವೇಳೆಗೆ 300 ಶತಕೋಟಿ ಡಾಲರ್ ತಲಪುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ರಾಜೇಶ್ ಗೋಖಲೆ ತಿಳಿಸಿದರು.

Biosciences should be transformed into the bioeconomy of the country says rajesh gokhale
ಬಯೋ ಮಾಂಗೇ ಮೋರ್; ಜೈವಿಕ ವಿಜ್ಞಾನವು ದೇಶದ ಜೈವಿಕ ಆರ್ಥಿಕತೆಯಾಗಬೇಕು

ಬೆಂಗಳೂರು: ಬಯೋ ಮಾಂಗೇ ಮೋರ್.. ಇದು ನಮ್ಮ ಮಂತ್ರವಾಗಬೇಕು. ಜೈವಿಕ ವಿಜ್ಞಾನವು ದೇಶದ ಜೈವಿಕ ಆರ್ಥಿಕತೆಯಾಗಿ ಬದಲಾಗಬೇಕಿದೆ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ರಾಜೇಶ್ ಗೋಖಲೆ ಹೇಳಿದ್ದಾರೆ.

ನಗರದ ಅರಮನೆ ಆವರಣದಲ್ಲಿ ಇಂದು ಆರಂಭಗೊಂಡ 'ಬೆಂಗಳೂರು ಟೆಕ್ ಶೃಂಗಸಭೆ 2023'ರ ನಿಮಿತ್ತ ನಡೆದ ಭಾರತ ಜೈವಿಕ ಉತ್ಪಾದನೆ ಉಪಕ್ರಮ ವಿಷಯದ ಕುರಿತು ಡಾ.ಗೋಖಲೆ ವರ್ಚುಯಲ್ ಆಗಿ ದಿಕ್ಸೂಚಿ ಭಾಷಣ ಮಾಡಿದರು. ಜೀವಶಾಸ್ತ್ರವು ಮುಂದಿನ ತಂತ್ರಜ್ಞಾನ ಕ್ರಾಂತಿ ರೂಪಿಸಲಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಲಿದೆ. ಜೈವಿಕ ಉತ್ಪಾದನೆ ಸಂಶೋಧನೆ ಹಾಗೂ ಮಾರುಕಟ್ಟೆ ಇವೆರಡರಲ್ಲೂ ಯೋಜಿತ, ಸಂಘಟಿತ ಪ್ರಯತ್ನ ನಡೆಸುವುದರಿಂದ ಇದು ಸಾಧ್ಯವಿದೆ ಎಂದರು.

300 ಶತಕೋಟಿ ಆರ್ಥಿಕತೆ ಗುರಿ: 2022ರಲ್ಲಿ 80 ಶತಕೋಟಿ ಡಾಲರ್‌ನಷ್ಟಿದ್ದ ಜೈವಿಕ ಆರ್ಥಿಕತೆಯು 2030ರ ವೇಳೆಗೆ 300 ಶತಕೋಟಿ ಡಾಲರ್ ತಲಪುವ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಜೈವಿಕ ಫಾರ್ಮಾಸ್ಯುಟಿಕಲ್ ಕ್ಷೇತ್ರವು ಶೇ.68ರಷ್ಟು ಸಿಂಹಪಾಲು ಹೊಂದಲಿದೆ. ಜೈವಿಕ ಫಾರ್ಮಾ, ಜೈವಿಕ ಕೃಷಿ, ಜೈವಿಕ ಉದ್ಯಮ, ಜೈವಿಕ ಇಂಧನ, ಜೈವಿಕ ಸೇವೆ, ಜೈವಿಕ ಮೆಡ್‌ಟೆಕ್ ಹಾಗೂ ಜೈವಿಕ ಎಐ ಹೀಗೆ.. ಏಳು ವಿಭಾಗಗಳಲ್ಲಿ ಜೈವಿಕ ಉತ್ಪಾದನೆ ಭವಿಷ್ಯದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅವರು ಹೇಳಿದರು.

ಶೀಘ್ರ ಜೈವಿಕ ವಿಷನ್ ಬಿಡುಗಡೆ: ದೇಶದ ಜೈವಿಕ ವಿಷನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಜೈವಿಕ ಉತ್ಪಾದನಾ ಕ್ಷೇತ್ರದ ಅಡಿಗಲ್ಲಾಗಲಿದೆ. ಬಯೋಹಬ್ ಸ್ಥಾಪಿಸುವತ್ತ ನಾವು ಯೋಚಿಸಬೇಕು. ಸುಸ್ಥಿರ, ನವೀನ ಹಾಗೂ ಜವಾಬ್ದಾರಿಯುತ ಜೈವಿಕ ಉತ್ಪಾದನೆಯ ಪರಿಹಾರವನ್ನು ನಾವು ಜಗತ್ತಿಗೆ ನೀಡಬೇಕಿದೆ. ಇದರೊಂದೆಗ ಅಪಾರ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ನುಡಿದರು.

ಇದನ್ನೂ ಓದಿ: 2030ರ ವೇಳೆಗೆ ಇಂಗಾಲ ಹೊರಸೂಸುವಿಕೆ ಶೇ. 45ರಷ್ಟು ತಗ್ಗಿಸುವ ಗುರಿ: ಡಾ. ಎಜಿಲ್ ಸುಬ್ಬಿಯಾನ್

ಭಾರತೀಯ ಬಯೋಲಾಜಿಕಲ್ ಡೇಟಾ ಸೆಂಟರ್ ​​ಅನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಇದರ ಪ್ರಯೋಜನವನ್ನು ಉದ್ಯಮ ಪಡೆದುಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಇವೆರಡನ್ನೂ ಬೆಸದ 'ಹೀಲ್ ವಿತ್ ದವಾ ಎಐ'ಅನ್ನು ಅಭಿವೃದ್ಧಿಪಡಿಸುವ ಉದ್ದೇಶ ಸರ್ಕಾರದ್ದಾಗಿದೆ. ಜೈವಿಕ ಉತ್ಪಾದನಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ 6,300 ಕೋಟಿ ರೂ. ಹೂಡಿಕೆ ನಡೆಸಿದೆ. ವಿದ್ಯಾರ್ಥಿಗಳಿಗೆ ಫೆಲೋಶಿಪ್‌ನಿಂದ ತೊಡಗಿ 7 ಕೋಟಿ ರೂ. ತನಕ ಜೈವಿಕ ನವೋದ್ಯಮಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯಗಳನ್ನು ವಿವರಿಸಿದರು.

ಕರ್ನಾಟಕದಲ್ಲಿ ಜೈವಿಕ ಉತ್ಪಾದನಾ ಹಬ್ ನಿರೀಕ್ಷೆ: ಜೈವಿಕ ಉತ್ಪಾದನಾ ಹಬ್‌ ಸ್ಥಾಪನೆಗಾಗಿ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸರ್ಕಾರದ ಭೂಮಿ ಒದಗಿಸಲಿದೆ. ಇದು ಜೈವಿಕ ಉತ್ಪಾದನಾ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡಲಿದೆ ಎಂದು ಜೈವಿಕ ತಂತ್ರಜ್ಞಾನ ಉದ್ಯಮ ಸಂಸ್ಥೆಗಳ ಅಸೋಸಿಯೇಶನ್ ಅಧ್ಯಕ್ಷ ಜಿ.ಎಸ್.ಕೃಷ್ಣನ್ ಹೇಳಿದರು.

ಕಾರ್ಯಕ್ರಮದಲ್ಲಿ ಪರಿಚಯ ಭಾಷಣ ಮಾಡಿದ ಅವರು, ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ ವ್ಯಾಕ್ಸಿನ್ ಮೂಲಕ ಭಾರತದ ಜೈವಿಕ ತಂತ್ರಜ್ಞಾನದ ನಾವೀನ್ಯತೆಯ ಸಾಮರ್ಥ್ಯ ಜಗತ್ತಿಗೆ ಪರಿಚಯಗೊಂಡಿತು. ಜಿ20 ಶೃಂಗಸಭೆಯಲ್ಲಿ ಭಾರತ ಜೈವಿಕ ಇಂಧನದ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಭವಿಷ್ಯದಲ್ಲಿ ಎಥೆನಾಲ್ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿದೆ. ಬಯೋಟೆಕ್ ಕ್ಷೇತ್ರದಲ್ಲಿ ನವೋದ್ಯಮಗಳ ಸಂಖ್ಯೆ ಹೆಚ್ಚುತ್ತಿದ್ದು, ಇವುಗಳ ಸವಾಲುಗಳೇನು?, ಅವುಗಳಿಗೆ ಅಗತ್ಯವಾಗಿರುವ ಹೂಡಿಕೆ, ಸಂಸ್ಥೆಯ ಪ್ರಗತಿಯನ್ನು ಪ್ರೋತ್ಸಾಹಿಸುವುದು ಹೇಗೆ ಎಂಬುದರ ಕುರಿತು ಚಿಂತಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಿಎಸ್ಆರ್ ನಿಧಿ ಮೀಸಲಿಡಿ: ಉದ್ಯಮಿಗಳಿಗೆ ಡಿಕೆಶಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.