ETV Bharat / state

ಬೆಂಗಳೂರಿನ ಅಂಡರ್‌ಪಾಸ್‌ನಲ್ಲಿ ಮತ್ತೊಂದು ದುರಂತ: ಬೈಕ್ ಸವಾರ ಸಾವು

author img

By

Published : May 24, 2023, 7:48 AM IST

Etv Bharat
Etv Bharat

ಅಂಡರ್‌ಪಾಸ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬೈಕ್​ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು: ನಗರದ ಅಂಡರ್‌ಪಾಸ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯ ಕಾಚೋಹಳ್ಳಿ ಅಂಡರ್‌ಪಾಸ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸವಾರ ಫಕ್ರುದ್ದೀನ್ ಎಂಬವರು ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ಮೂಲದ ಫಕ್ರುದ್ದೀನ್ ನೆಲಮಂಗಲದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಕಾಚೋಹಳ್ಳಿ ಅಂಡರ್‌ಪಾಸ್ ಮೂಲಕ ರಾಮನಗರ ಕಡೆ ಹೋಗುತ್ತಿದ್ದರು.

ಇದೇ ವೇಳೆ ಭಾರೀ ಮಳೆ ಬೀಳುತ್ತಿದ್ದರಿಂದ ಅಂಡರ್‌ಪಾಸ್‌ನಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಫಕ್ರುದ್ದೀನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಅಂತಾ ಸಂಚಾರ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಸಿಲಿಕಾನ್​ ಸಿಟಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ವಾರ್ಡ್ ವಾಚ್​ ಗಾರ್ಡ್​ಗಳ ಕೊರತೆ..

ಭಾನುವಾರ ಸುರಿದಿದ್ದ ಭಾರಿ ಮಳೆಗೆ ಬಲಿಯಾಗಿದ್ದ ಆಂಧ್ರಪ್ರದೇಶ ಮೂಲದ ಯುವತಿ: ನಗರದ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ನಲ್ಲಿ ಮಳೆ ನೀರಲ್ಲಿ ಕಾರು ಸಿಲುಕಿ ಭಾನುರೇಖಾ ರೆಡ್ಡಿ (23) ಎಂಬ ಸಾಫ್ಟ್‌ವೇರ್ ಎಂಜಿನಿಯರ್‌ ಸಾವನ್ನಪ್ಪಿದ್ದರು. ಆಂಧ್ರದ ಕೃಷ್ಣಾ ಜಿಲ್ಲೆಯ ತೆಲಪ್ರೋಲು ಮೂಲದವರಾದ ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‌ನಿಂದ ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ದರು.

ಕೆ.ಆರ್.ಸರ್ಕಲ್ ತಲುಪುವಷ್ಟರಲ್ಲಿ ಮಳೆ ಜೋರಾಗಿತ್ತು. ಮುಂದೆ ಸಾಗುತ್ತಿದ್ದಾಗ ಅಂಡರ್ ಪಾಸ್​ಗೆ ನೀರು ತುಂಬಿಕೊಂಡಿತ್ತು. ನೀರು ಹೊರಹೋಗಲು ದಾರಿ ಇಲ್ಲದೇ ಕಾರು ಹೊರಡುವ ವೇಳೆಗೆ ಅಂಡರ್​ ಪಾಸ್​ನಲ್ಲಿ ನೀರು ತುಂಬಿಕೊಂಡಿದೆ. ಆರು ಮಂದಿ ಸಿಕ್ಕಿಬಿದ್ದಿರುವುದನ್ನು ಕಂಡು ಪೊಲೀಸರು ಮತ್ತು ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅವರನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲಿ ಭಾನುರೇಖಾ ಮೃತಪಟ್ಟಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದರು. ಕುಟುಂಬ ಸದಸ್ಯರಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದರು. ಮಳೆ ತೀವ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಇಂತಹ ತೊಂದರೆಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚೆ ನಡೆಸಿದ್ದರು.

ಭಾನುರೇಖಾ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಉದ್ಯೋಗಿಯಾಗಿದ್ದರು. ಕೆಲಸ ಸಿಗುವ ಮುನ್ನ ಹೈದರಾಬಾದ್‌ನಲ್ಲಿಯೇ ಇರುತ್ತಿದ್ದರು. ತಂದೆ ಗನ್ನವರಂ ತಾಲೂಕಿನ ವೀರಪನೇನಿಗುಡೆಂ ನಿವಾಸಿ. ಭಾನುರೇಖಾ ರೆಡ್ಡಿ ತನ್ನ ಅಜ್ಜಿಯ ಮನೆಯಲ್ಲಿ ತಾಯಿಯೊಂದಿಗೆ ಬೆಳೆದಿದ್ದರು ಎಂದು ಸಂಬಂಧಿಕರು ತಿಳಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು. ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿಕೊಂಡು ಟೆಕ್ಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.