ETV Bharat / state

ಮಹಾಘಟಬಂಧನ್ ಸಭೆಗೂ ಮುನ್ನ ಅನುಮತಿ ಪಡೆಯದೇ ಫ್ಲೆಕ್ಸ್ ಅಳವಡಿಸಿದ್ದ ಮೂವರ ಬಂಧನ

author img

By

Published : Jul 22, 2023, 4:52 PM IST

Updated : Jul 22, 2023, 5:34 PM IST

Mahaghatabandhan meeting
ಅನುಮತಿ ಪಡೆಯದೇ ಫ್ಲೆಕ್ಸ್ ಅಳವಡಿಸಿದ್ದ ಮೂವರ ಬಂಧನ

ಮಹಾಘಟಬಂಧನ್ ಸಭೆಗೂ ಮುನ್ನ ಅನುಮತಿ ಪಡೆಯದೇ ಫ್ಲೆಕ್ಸ್ ಅಳವಡಿಸಿದ್ದ ಮೂವರನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ

ಬೆಂಗಳೂರು: ನಗರದಲ್ಲಿ ನಡೆದ ಮಹಾಘಟಬಂಧನ್ ಸಭೆಗೂ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕುರಿತು ಅವಹೇಳನಕಾರಿಯಾಗಿ ಫ್ಲೆಕ್ಸ್ ಅಳವಡಿಸಿದ್ದ ಮೂವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರಂ ನಿವಾಸಿಗಳಾದ ಶ್ರೀರಾಮ್, ಮೋಹನ್ ಹಾಗೂ ನಂದ ಕುಮಾರ್ ಬಂಧಿತ ಆರೋಪಿಗಳು.

ಆರೋಪಿ ಶ್ರೀರಾಮ್​ನ ಆಜ್ಞೆಯಂತೆ ನಗರದ ಹಲವು ಕಡೆಗಳಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಆರೋಪಿಗಳು ನಂದ ಕುಮಾರ್​ಗೆ ಸೇರಿದ ಪ್ರಿಂಟಿಂಗ್ ಪ್ರೆಸ್​ನಲ್ಲಿ‌ ಫ್ಲೆಕ್ಸ್​ಗಳನ್ನು ಮುದ್ರಿಸಿ ಮೋಹನ್​ಗೆ ಸೇರಿದ ಮಿನಿ ಟೆಂಪೋದಲ್ಲಿ ತೆರಳಿ ಫ್ಲೆಕ್ಸ್​ಗಳನ್ನು ಅಳವಡಿಸಿದ್ದರು. ರೇಸ್‌ಕೋರ್ಸ್ ರಸ್ತೆಯ ಖನಿಜ ಭವನ ಹಾಗೂ ಶಕ್ತಿ ಭವನದ ಮುಂಭಾಗ, ಟ್ರಿಲೈಟ್ ಜಂಕ್ಷನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ, ಚಾಲುಕ್ಯ ವೃತ್ತ ಹಾಗೂ ಇತರ ಕಡೆಗಳಲ್ಲಿ 'ಪ್ರಧಾನಿ ಹುದ್ದೆಯ ಅನಿಶ್ಚಿತ ಆಕಾಂಕ್ಷಿ' ಎಂಬ ಬರಹವಿದ್ದ ಪ್ಲೆಕ್ಸ್‌ ಹಾಕಲಾಗಿತ್ತು.

ಅದರಲ್ಲಿ ನಿತೀಶ್‌ ಕುಮಾರ್ ಭಾವಚಿತ್ರ, ಸುಲ್ತಾನ್ ಗಂಜ್ ಸೇತುವೆ ಕುಸಿತದ ಚಿತ್ರಗಳಿದ್ದವು. ಅನುಮತಿ ಪಡೆಯದೇ ಫ್ಲೆಕ್ಸ್ ಅಳವಡಿಕೆ ಮಾಡಿದ್ದಲ್ಲದೇ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ಸ್ ಪೊಲೀಸರು ಮೂವರು ಆರೋಪಿಗಳು ಹಾಗೂ ಒಂದು ಮಿನಿ ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Oppositions party's meet: ವಿಪಕ್ಷಗಳ ಮಹತ್ವದ ಸಭೆ ಮುಕ್ತಾಯ.. 26 ಪಕ್ಷಗಳ 40 ನಾಯಕರಿಂದ ಒಗ್ಗಟ್ಟು ಪ್ರದರ್ಶನ

ಇತ್ತೀಚೆಗೆ (ಜುಲೈ 17& 18) ತಾಜ್​ವೆಸ್ಟ್​ಎಂಡ್​ ಸಭೆ ನಡೆಸಿದ ವಿಪಕ್ಷಗಳು ಮಹಾಘಟಬಂಧನಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಸುಮಾರು ನಾಲ್ಕು ತಾಸುಗಳ ಸುದೀರ್ಘ ಸಭೆಯಲ್ಲಿ 26 ವಿವಿಧ ಪಕ್ಷಗಳ ನಾಯಕರು ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಯೋಜನೆಗೆ ಉಪ ಸಮಿತಿ ರಚನೆ, ಸೀಟು ಹಂಚಿಕೆ, ಇವಿಎಂ ಸಮಸ್ಯೆ ಸೇರಿದಂತೆ ಪ್ರಮುಖ 6 ಅಂಶಗಳ ಮೇಲೆ ಚರ್ಚೆ ನಡೆದಿತ್ತು.

ಸಭೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಮಾಜಿ ಸಂಸದ ರಾಹುಲ್​ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಶಿವಸೇನೆ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಅಖಿಲೇಶ್ ಯಾದವ್, ಸಿಪಿಐ - ಎಂ ನಾಯಕ ಸೀತಾರಾಮ್ ಯೆಚೂರಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ: ಮೋದಿ v/s ಇಂಡಿಯಾ ಕದನ ಎಂದ ರಾಹುಲ್​: ಭಾರತ ಗೆಲ್ಲುತ್ತೆ ಬಿಜೆಪಿ ಸೋಲುತ್ತೆ ಎಂದು ಭವಿಷ್ಯ ನುಡಿದ ಮಮತಾ

Last Updated :Jul 22, 2023, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.