ETV Bharat / state

ಸುಳ್ಳು ಕಾಂಗ್ರೆಸ್ ಪಕ್ಷದ ಮನೆ ದೇವರು.. ನಿತ್ಯ ಸುಳ್ಳು ಹೇಳುವ ಕಾಯಕ ಸಿದ್ದರಾಮಯ್ಯ ಅವರದ್ದು: ಸಿಟಿ ರವಿ ವಾಗ್ದಾಳಿ

author img

By

Published : Jan 6, 2023, 10:23 PM IST

CT Ravi
ಸಿ.ಟಿ ರವಿ

ನಾಯಿ ನಿಯತ್ತಿನ ಪ್ರಾಣಿ, ತುತ್ತು ಅನ್ನ ಹಾಕಿದ್ರೆ ಜೀವನ ಪರ್ಯಂತ ನಿಯತ್ತಲ್ಲಿರಲಿದೆ - ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್​​ನವರು. - ಉಂಡ ಮನೆಗೆ ದ್ರೋಹ ಬಗೆಯುವವರು ಯಾರು ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತು - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ. ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ..

ದೇವನಹಳ್ಳಿ(ಬೆಂಗಳೂರು ಗ್ರಾ.): ಸುಳ್ಳು ಕಾಂಗ್ರೆಸ್ ಪಕ್ಷದ ಮನೆ ದೇವರು. ನಿತ್ಯ ಸುಳ್ಳು ಹೇಳುವ ಕಾಯಕ ಸಿದ್ದರಾಮಯ್ಯನವರದ್ದು ಎಂದು ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು. ದೇವನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹತ್ಯೆಗೂ ಆರ್​​ಎಸ್​ಎಸ್​​ಗೂ ಸಂಬಂಧ ಇಲ್ಲ ಅಂತಾ 1950ರಲ್ಲಿ ಸಾಬೀತಾಗಿದೆ. ನೆಹರು ಪ್ರಧಾನಿ ಆಗಿದ್ದಾಗಲೇ ಆರ್​​ಎಸ್​ಎಸ್​​ ಮೇಲಿನ ನಿಷೇಧವನ್ನ ವಾಪಸ್ ಪಡೆಯಲಾಗಿದೆ. ಗಾಂಧಿ ಹತ್ಯೆಗೂ ಆರ್​ಎಸ್​ಎಸ್​​ಗೂ ಸಂಬಂಧ ಇದ್ದರೆ ನಿಷೇಧ ಯಾಕೆ ವಾಪಸ್ ಪಡೆದರು. ಇದು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರೋದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ನಾವು ಭಯೋತ್ಪಾದನೆ ಹುಟ್ಟಿಸುವವರಾಗುವುದಾದರೆ ಎಸ್​ಡಿಪಿಐ ಹಾಗೂ ಪಿಎಫ್​ಐ ಬ್ಯಾನ್ ಮಾಡ್ತಿದ್ದೀವಾ?. ಎಸ್​ಡಿಪಿಐ ಹಾಗೂ ಪಿಎಫ್​​ಐ ಕೇಸ್ ವಾಪಸ್ ಪಡೆದವರು ಸಿದ್ದರಾಮಯ್ಯ ಅವರು. ರಾಜಕೀಯ ಕಾರಣಕ್ಕೆ ಭಯೋತ್ಪಾದಕರನ್ನು ಬೆಂಬಲಿಸಿ ಬಲಗೊಳಿಸುವ ಕೆಲಸ ಕಾಂಗ್ರೆಸ್ ನದ್ದು ಎಂದು ಅವರು ಆರೋಪಿಸಿದರು. ಸಿಎಂ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ನಾಯಿ ನಿಯತ್ತಿನ ಪ್ರಾಣಿ. ತುತ್ತು ಅನ್ನ ಹಾಕಿದರೆ ಜೀವನ ಪರ್ಯಂತ ನಿಯತ್ತಲ್ಲಿರಲಿದೆ. ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್​​‌ನವರು. ಉಂಡ ಮನೆಗೆ ದ್ರೋಹ ಬಗೆಯುವವರು ಯಾರು ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತು ಎಂದು ಸಿಟಿ ರವಿ ಟಾಂಗ್ ನೀಡಿದರು.

ಆತ್ಮ ಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ: ಸುಳ್ಳು ಹೇಳೋದನ್ನ ಬಿಡದೆ ಇದ್ದರೆ ಅತಿ ಹೆಚ್ಚು ಸುಳ್ಳು ಹೇಳಿದ ದಾಖಲೆ ಸಿದ್ದರಾಮಯ್ಯ ಅವರಿಗೆ ಸಿಗಲಿದೆ. ಜೆಡಿಎಸ್​​ನಲ್ಲಿದ್ದು ಅವರಿಗೆ ದ್ರೋಹ ಬಗೆದವರು ಯಾರು?. ಜಿ.ಪರಮೇಶ್ವರ್ ಸಿಎಂ ಆಗಿಬಿಡ್ತಾರೆ ಅಂತಾ ಸೋಲಿಸದವರು ಯಾರು?, ಸಿದ್ದರಾಮಯ್ಯ ಅವರು ತಮ್ಮ ಆತ್ಮ ಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ. ಆಗ ನಿಯತ್ತು ಯಾರಿಗೆ ಇದೆ, ಯಾರಿಗೆ ಇಲ್ಲ ಅನ್ನೋದು ಸ್ಪಷ್ಟವಾಗಲಿದೆ. ತ‌ನಗೆ ಅಧಿಕಾರ ಇದ್ದಾಗ ಎಲ್ಲವೂ ಸರಿ. ಅಧಿಕಾರ ಇಲ್ಲದಿದ್ದಾಗ ಬಂಡಾಯದ ಮನಸ್ಥಿತಿ. ಹಾಗಾಗಿ ಸಿದ್ದರಾಮಯ್ಯ ಅವರನ್ನ ನಿಯತ್ತಿಗೆ ಹೋಲಿಕೆ ಮಾಡಲಾಗಲ್ಲ ಎಂದರು.

ನಿಮ್ಮನ್ನ ಯಾವುದಕ್ಕೆ ಹೋಲಿಕೆ ಮಾಡಲಿ?: ರಾಜ್ಯ, ದೇಶದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳು. ನಾವು ದೇಶ ಕಾಯುವಾಗ ನಿಯತ್ತಿನ ನಾಯಿಗಳೇ. ನಿಯತ್ತು ಇರುವ ನಾಯಿಗೆ ಹೋಲಿಕೆ ಮಾಡಿರುವುದು ಸ್ವಾಗತ. ನಿಯತ್ತು ಇಲ್ಲದೇ ಇರೋ ನಿಮ್ಮನ್ನ ಯಾವುದಕ್ಕೆ ಹೋಲಿಕೆ ಮಾಡಲಿ ಎಂದು ಸಿದ್ದರಾಮಯ್ಯಗೆ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ವಿವಾದಿತ ಹೇಳಿಕೆ: ವಿಜಯನಗರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಮರಿ ಇದ್ದಂತೆ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಿಎಂ ತಿರುಗೇಟು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಎದುರು ನಾಯಿ ಮರಿ ತರಹ ಮಾಡುತ್ತಾರೆ, ಗಡಗಡ ಎಂದು ನಡುಗುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬೊಮ್ಮಾಯಿ ಬಳ್ಳಾರಿಯಲ್ಲಿ ತಿರುಗೇಟು ನೀಡಿದ್ದಾರೆ. 'ಸಿದ್ದರಾಮಯ್ಯ ಅವರ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಆ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರುತ್ತದೆ. ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ, ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ' ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ: ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿಯಂತೆ ನಿಂತುಕೊಳ್ತಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಬಗ್ಗೆ ಗುರುವಾರ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಅವರನ್ನು ನಾಯಿ ಮರಿ ಎಂದು ಹೇಳಿಲ್ಲ. ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ. ಕೇಂದ್ರದಿಂದ ಅನುದಾನ ತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. 5ನೇ ಹಣಕಾಸು ಆಯೋಗದ 5495 ಕೋಟಿ ರೂಪಾಯಿ ತೆಗೆದುಕೊಂಡಿಲ್ಲ. ಇದನ್ನು ಕೇಳಲು ಧೈರ್ಯ ಬೇಕು. ನಾಯಿ ಮರಿ ಹಾಗೇ ಇರಬಾರದು ಎಂದಿದ್ದೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂಗೆ ನಾಯಿಮರಿ ಹೇಳಿಕೆ ವಿವಾದ.. ಧೈರ್ಯ ಇರಬೇಕೆಂಬ ಅರ್ಥದಲ್ಲಿ ಮಾತನಾಡಿದ್ದೆ : ಸಿದ್ದರಾಮಯ್ಯ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.