ETV Bharat / state

ಸಿಎಂಗೆ ನಾಯಿಮರಿ ಹೇಳಿಕೆ ವಿವಾದ.. ಧೈರ್ಯ ಇರಬೇಕೆಂಬ ಅರ್ಥದಲ್ಲಿ ಮಾತನಾಡಿದ್ದೆ : ಸಿದ್ದರಾಮಯ್ಯ ಸ್ಪಷ್ಟನೆ

author img

By

Published : Jan 5, 2023, 3:30 PM IST

Updated : Jan 5, 2023, 7:43 PM IST

ನಾಯಿ ಮರಿ ಹೇಳಿಕೆ- ವಿವಾದದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ- ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಹೇಳಿರುವುದಾಗಿ ಸಮರ್ಥನೆ

puppy-dispute-i-said-in-the-sense-that-there-should-be-courage-siddaramaiah
ನಾಯಿಮರಿ ವಿವಾದ: ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ- ಸಿದ್ದರಾಮಯ್ಯ

ಸಿಎಂಗೆ ನಾಯಿಮರಿ ಹೇಳಿಕೆ ವಿವಾದ.. ಸ್ಪಷ್ಟನೆ ನೀಡಿದ್ರು ಸಿದ್ದರಾಮಯ್ಯ

ಮಂಗಳೂರು(ದಕ್ಷಿಣ ಕನ್ನಡ): ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿಯಂತೆ ನಿಂತುಕೊಳ್ತಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಬಗ್ಗೆ ಗುರುವಾರ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಅವರನ್ನು ನಾಯಿ ಮರಿ ಎಂದು ಹೇಳಿಲ್ಲ. ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ. ಕೇಂದ್ರದಿಂದ ಅನುದಾನ ತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. 5ನೇ ಹಣಕಾಸು ಆಯೋಗದ 5495 ಕೋಟಿ ರೂಪಾಯಿ ತೆಗೆದುಕೊಂಡಿಲ್ಲ. ಇದನ್ನು ಕೇಳಲು ಧೈರ್ಯ ಬೇಕು. ನಾಯಿ ಮರಿ ಹಾಗೇ ಇರಬಾರದು ಎಂದಿದ್ದೆ. ಆ ರೀತಿ ಹೇಳುವುದು ಅಸಾಂವಿಧಾನವೇ? ನನಗೆ ಟಗರು ಅಂತಾರೆ, ಹುಲಿಯಾ ಅಂತಾರೆ ಅದು ಅಸಾಂವಿಧಾನಕವೇ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಅವರ ಪಕ್ಷದವರೇ ಕರೆಯುತ್ತಾರೆ. ಅವರು ಹುಲಿಯಾ. ನಾಯಿ ಎಂದರೆ ನಂಬಿಕೆಯುಳ್ಳ ಪ್ರಾಣಿ ಎಂದು ಹೇಳಿದರು.

ರಸ್ತೆ ಗುಂಡಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಇದ್ದ ಹಾಗೆ. ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಬಾಲಿಷವಾಗಿ, ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಅವರೊಬ್ಬರು ಬಿಜೆಪಿಯಲ್ಲಿ ವಿದೂಷಕರಾಗಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಲು ಅವರಿಗೆ ಆಗುತ್ತದೆಯೇ? ಕೋರ್ಟ್​ನಲ್ಲಿ ತಪ್ಪಿತಸ್ಥ ಅಂತ ತೀರ್ಪು ಬಂದರೆ ಮಾತ್ರ ಜೈಲಿಗೆ ಹಾಕಬೇಕು. ಕಾನೂನು ಗೊತ್ತಿಲ್ಲದೆ ಪೆದ್ದು ಪೆದ್ದಾಗಿ ನಳಿನ್ ಕುಮಾರ್ ಕಟೀಲ್ ಮಾತಾಡುತ್ತಾರೆ ಎಂದು ತಿರುಗೇಟು ನೀಡಿದರು.

ನಾನು ಅಲೆಮಾರಿ ರಾಜಕಾರಣಿ ಅಲ್ಲ: ಇದೇ ವೇಳೆ ಕ್ಷೇತ್ರದ ಆಯ್ಕೆ ಬಗ್ಗೆ ಮಾತನಾಡಿ ಸಿದ್ದರಾಮಯ್ಯ, ನಾನು ಅಲೆಮಾರಿ ರಾಜಕಾರಣಿ ಅಲ್ಲ, ಕೋಲಾರದಲ್ಲಿ ಕರೆಯುತ್ತಿದ್ದಾರೆ. ಬಾದಾಮಿ ಕ್ಷೇತ್ರದ ಜನರು ಚುನಾವಣೆಗೆ ಇಲ್ಲೇ ನಿಲ್ಲಿ ಎಂದು ಒತ್ತಾಯಿಸುತ್ತಿದ್ದಾರೆ. ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆಯೂ ಅಭಿಮಾನಿಗಳು ಕರೆಯುತ್ತಿದ್ದಾರೆ. ನಾನು ಅರ್ಜಿ ಹಾಕುವಾಗ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಹೇಳಿದ್ದೇನೆ. ಹೈಕಮಾಂಡ್​ ಯಾವ ಕ್ಷೇತ್ರ ಎಂದು ಸೂಚಿಸುತ್ತದೆಯೋ ಆ ಕ್ಷೇತ್ರದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಪಿಡಬ್ಲ್ಯುಡಿ ಇಂಜಿನಿಯರ್ ಬಳಿ 10 ಲಕ್ಷ ಹಣ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಒಂದೇ ಅಲ್ಲ. ಬಿಜೆಪಿ ಸರ್ಕಾರದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ಇದೆ. ಕಾಂಟ್ರಾಕ್ಟರ್ ಅಸೋಸಿಯೇಷನ್​ನವರು 40% ಸರ್ಕಾರ ಎಂದು ಹೇಳಿದ್ದಾರೆ. ಭ್ರಷ್ಟಾಚಾರದಿಂದ ಈಶ್ವರಪ್ಪ ಅವಧಿಯಲ್ಲಿ ಸಂತೋಷ್ ಎಂಬ ಗುತ್ತಿಗೆದಾರ ಸಾವನ್ನಪ್ಪಿದರು. ಪ್ರಸಾದ್ ಎಂಬವರು ಸಾವನ್ನಪ್ಪಿದರು. ಶಿವಕುಮಾರ್ ಎಂಬವರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದೆ ಏನೂ ನಡೆಯುವುದಿಲ್ಲ. ಎನ್​ಓಸಿ ಗೆ, ವರ್ಗಾವಣೆಗೆ ಭ್ರಷ್ಟಾಚಾರ ಮಾಡಲಾಗುತ್ತದೆ ಎಂದು ಹೇಳಿದರು.

ಕುದ್ರೋಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ: ಮಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ, ಅಲ್ಲಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿದರು‌. ಮೊದಲಿಗೆ ಕುದ್ರೋಳಿ ದೇವಸ್ಥಾನದ ಹನುಮಾನ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಅವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಸರ್ಕ್ಯೂಟ್ ಹೌಸ್​ನಲ್ಲಿ ಪಕ್ಷದ ಸಭೆ: ಬಳಿಕ ಮಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಈ ಭಾಗದ ಕಾಂಗ್ರೆಸ್ ಪಕ್ಷದ​ ಕಾರ್ಯಕರ್ತರ ಜೊತೆ ಸಭೆಯನ್ನು ನಡೆಸಿದರು. ಹಾಗೇ ಕದ್ರಿ ಸರ್ಕ್ಯೂಟ್ ಹೌಸ್​ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರುಗಳ ಸಭೆ ಸಹ ಸಭೆ ನಡೆಸಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ್ದರ ಹಿಂದೆ ಸದುದ್ದೇಶವಿದೆ: ಸಿದ್ದರಾಮಯ್ಯ

Last Updated : Jan 5, 2023, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.