ETV Bharat / sports

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್​ಗೆ ರೋಚಕ ಜಯ

author img

By ETV Bharat Karnataka Team

Published : Dec 4, 2023, 6:47 AM IST

kabaddi
ಪ್ರೊ ಕಬಡ್ಡಿ

Pro Kabaddi-Gujarat Giants beat Bengaluru Bulls: ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ವಿಜಯಿಯಾಗಿದ್ದ ಗುಜರಾತ್ ಜೈಂಟ್ಸ್​ ತಂಡವು ಬೆಂಗಳೂರು ಬುಲ್ಸ್ ವಿರುದ್ಧದ ಪಂದ್ಯದಲ್ಲೂ ಗೆಲುವಿನ ನಗೆ ಬೀರಿತು.

ಅಹಮದಾಬಾದ್‌(ಗುಜರಾತ್): ಪ್ರೊ ಕಬಡ್ಡಿ ಲೀಗ್‌ನ ನಾಲ್ಕನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಎದುರಿಸಿದ ಗುಜರಾತ್ ಜೈಂಟ್ಸ್ 34-31 ಪಾಯಿಂಟುಗಳಿಂದ ಪಂದ್ಯ ಗೆದ್ದುಕೊಂಡಿದೆ. ಭಾನುವಾರ ಇಲ್ಲಿನ ಇಕೆಎ ಅರೆನಾದಲ್ಲಿ‌ ನಡೆದ ಎರಡನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದ್ದು, ಗುಜರಾತ್ ಕೊನೆಯ ಎರಡು ನಿಮಿಷಗಳಲ್ಲಿ ಮೇಲುಗೈ ಸಾಧಿಸಿತು. ಪಂದ್ಯದಲ್ಲಿ 12 ಅಂಕ ಸಂಪಾದಿಸಿದ ಸೋನು ಮತ್ತೊಮ್ಮೆ ಗುಜರಾತ್‌ ಪರ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದರು.

pro kabaddi
ಪ್ರೊ ಕಬಡ್ಡಿ

ಪಂದ್ಯದ ಮೊದಲ ನಿಮಿಷದಲ್ಲಿ ನೀರಜ್‌ ನರ್ವಾಲ್‌ ಗಳಿಸಿದ ಪಾಯಿಂಟ್ಸ್​ನಿಂದ ಬುಲ್ಸ್‌ 3-0 ಮುನ್ನಡೆ ಗಳಿಸಿತು. ಕೆಲವು ಕ್ಷಣಗಳ ನಂತರ ಭರತ್‌ ಅದ್ಭುತ ಪ್ರದರ್ಶನದ ಮೂಲಕ ಜೈಂಟ್ಸ್‌ನ ಇಬ್ಬರು ಸದಸ್ಯರನ್ನು ಮಾತ್ರ ಅಖಾಡದಲ್ಲಿ‌ ಉಳಿಯುವಂತೆ ಮಾಡಿದರು. ಆದರೆ, 5ನೇ ನಿಮಿಷದಲ್ಲಿ ಮೊಹಮ್ಮದ್‌ ನಬೀಭಕ್ಷ್ ಗಳಿಸಿದ ಅಂಕದಿಂದಾಗಿ ಜೈಂಟ್ಸ್‌ ಕೈ ಮೇಲಾಯಿತು. ಅಂತಿಮವಾಗಿ, ಸೋನು ಎರಡು ರೈಡ್‌ ಅಂಕಗಳನ್ನು ಗಳಿಸುವ ಮೂಲಕ‌ ಜೈಂಟ್ಸ್ 5-5ರಲ್ಲಿ ಸ್ಕೋರ್ ಸಮಗೊಳಿಸಿತು.

11ನೇ ನಿಮಿಷದಲ್ಲಿ ಜೈಂಟ್ಸ್‌ ಮತ್ತು ಬುಲ್ಸ್‌ 9-9ರ ಸಮಬಲ ಸಾಧಿಸಿದವು. ಆದರೆ, ವಿಕಾಶ್‌ ಖಂಡೋಲಾ ಅದ್ಭುತ ರೇಡ್‌ ಮೂಲಕ ಜೈಂಟ್ಸ್‌ ತಂಡದ ಬಲವನ್ನು ಕೇವಲ ಒಬ್ಬ ಸದಸ್ಯನಿಗೆ ಇಳಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಬುಲ್ಸ್‌ ತಂಡ ಪಾರ್ತೀಕ್‌ ದಹಿಯಾ ಅವರನ್ನು ಟ್ಯಾಕಲ್‌ ಮಾಡುವ ಮೂಲಕ ಗುಜರಾತ್ ತಂಡವನ್ನು ಆಲೌಟ್‌ ಮಾಡಿ 14-11 ಅಂಕಗಳಿಂದ ಮುನ್ನಡೆ ಪಡೆಯಿತು. ಮೊದಲಾರ್ಧದ ಅಂತ್ಯಕ್ಕೆ ಬುಲ್ಸ್‌ಗೆ 20-14 ಅಂಕಗಳ ಮುನ್ನಡೆ ಸಿಕ್ಕಿತು.

pro kabaddi
ಪ್ರೊ ಕಬಡ್ಡಿ

ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಸೋನು ಸೂದ್‌ ಸೂಪರ್‌ ರೇಡ್‌ ಮೂಲಕ ಉಭಯ ತಂಡಗಳ ನಡುವಿನ ಅಂತರ ತಗ್ಗಿಸಿದರು. ಇದಾದ ಬಳಿಕ ಜೈಂಟ್ಸ್‌ ತಂಡ ಭರತ್‌ ಅವರನ್ನು ಟ್ಯಾಕಲ್‌ ಮಾಡಿ ಬುಲ್ಸ್‌ ಸ್ಕೋರ್‌ಗೆ ಸಮೀಪಿಸಿತು. ಆದರೆ, ವಿಶಾಲ್‌ 25ನೇ ನಿಮಿಷದಲ್ಲಿ ನಬೀಭಕ್ಷ್ ಅವರನ್ನು ಟ್ಯಾಕಲ್‌ ಮಾಡುವ ಮೂಲಕ ಬುಲ್ಸ್‌ ಪುನಃ ಮುನ್ನಡೆ ಸಾಧಿಸಿತು. ಆದರೆ, 27ನೇ ನಿಮಿಷದಲ್ಲಿ ಪುಟಿದೆದ್ದ ಜೈಂಟ್ಸ್‌ 24-23ರಲ್ಲಿ ಮತ್ತೆ ಮುನ್ನಡೆ ಗಳಿಸಿತು. 31ನೇ ನಿಮಿಷದಲ್ಲಿ ಖಂಡೋಲಾ ಅದ್ಭುತ ರೇಡ್‌ ಮಾಡಿದರಾದರೂ, ಜೈಂಟ್ಸ್‌ 26-24ರಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಇಂದು ಚಾಲನೆ

36ನೇ ನಿಮಿಷದಲ್ಲಿ ಭರತ್‌ ಅವರ ರೇಡ್‌ ಹಾಗೂ ನೀರಜ್‌ ನರ್ವಾಲ್‌ ಅವರ ಟ್ಯಾಕಲ್‌ನಿಂದ ಬುಲ್ಸ್‌ ಮತ್ತೆ 28-27 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ಜೈಂಟ್ಸ್ ಪರ ರಾಕೇಶ್‌ 39ನೇ ನಿಮಿಷದಲ್ಲಿ ರೇಡ್‌ ಜತೆಗೆ ಭರತ್‌ ಅವರನ್ನು ಕಟ್ಟಿಹಾಕಿದರು. ಇದರ ಪರಿಣಾಮ ಜೈಂಟ್ಸ್‌ 32-30ರ ಮುನ್ನಡೆ ಪಡೆಯಿತು. ಅಂತಿಮ ಸೆಕೆಂಡ್‌ಗಳಲ್ಲಿ ತನ್ನ ಕಾರ್ಡ್​ಗಳನ್ನು ಪರಿಪೂರ್ಣವಾಗಿ ಬಳಸಿಕೊಂಡ ಜೈಂಟ್ಸ್ ವಿಜಯಿಯಾಯಿತು. ಸತತ ಎರಡು ಪಂದ್ಯಗಳನ್ನ ಗೆದ್ದ ಗುಜರಾತ್ ಜೈಂಟ್ಸ್ ಅಂಕಪಟ್ಟಿಯಲ್ಲಿ‌ ಅಗ್ರಸ್ಥಾನಿಯಾಗುಳಿಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.