ETV Bharat / sports

WTC Final: ರಹಾನೆ ಇನ್ನಿಂಗ್ಸ್ ಹೊಗಳಿದ ಆಸೀಸ್​ ವೇಗಿ ಸ್ಟಾರ್ಕ್​, ಸಂಕಷ್ಟದಲ್ಲಿ ಭಾರತ

author img

By

Published : Jun 10, 2023, 7:44 AM IST

ರಹಾನೆ ಇನ್ನಿಂಗ್ಸ್ ಹೊಗಳಿದ ಆಸೀಸ್​ ವೇಗಿ ಸ್ಟಾರ್ಕ್
ರಹಾನೆ ಇನ್ನಿಂಗ್ಸ್ ಹೊಗಳಿದ ಆಸೀಸ್​ ವೇಗಿ ಸ್ಟಾರ್ಕ್

ಭಾರತದ ಬ್ಯಾಟಿಂಗ್​ ಪಡೆ ಸಂಪೂರ್ಣ ಛಿದ್ರವಾದಾಗ ಮತ್ತೆ ಟೆಸ್ಟ್​ಗೆ ವಾಪಸ್​ ಆಗಿರುವ ಅಜಿಂಕ್ಯ ರಹಾನೆ ಉತ್ತಮವಾಗಿ ಆಡುವ ಮೂಲಕ ತಂಡವನ್ನು ಭಾರಿ ಅಪಾಯದಿಂದ ಪಾರು ಮಾಡಿದ್ದಾರೆ.

ಲಂಡನ್: ಟೆಸ್ಟ್ ವಿಶ್ವಕಪ್​ನಲ್ಲಿ ನಾಯಕ ರೋಹಿತ್, ಗಿಲ್​, ಪೂಜಾರಾ, ಕೊಹ್ಲಿ ವಿಫಲವಾಗಿದ್ದು, ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿತ್ತು. ಫಾಲೋಆನ್​ ಭೀತಿಯಲ್ಲಿದ್ದ ಭಾರತಕ್ಕೆ ಆಪದ್ಬಾಂಧವನಾಗಿದ್ದು, ಅಜಿಂಕ್ಯ ರಹಾನೆ. ಪುಟಿದೇಳುತ್ತಿದ್ದ ಪಿಚ್​ನಲ್ಲಿ ಸೊಗಸಾಗಿ ಬ್ಯಾಟ್​ ಮಾಡಿದ ರಹಾನೆ ತಂಡವನ್ನ ಭಾರಿ ಸಂಕಷ್ಟದಿಂದ ಪಾರು ಮಾಡಿದರು. ಇದನ್ನು ಆಸ್ಟ್ರೇಲಿಯಾ ವೇಗಿ ಮಿಚೆಲ್​ ಸ್ಟಾರ್ಕ್​ ಕೂಡ ಶ್ಲಾಘಿಸಿದ್ದಾರೆ.

ಅಜಿಂಕ್ಯ ರಹಾನೆ ವೇಗದ ಪಿಚ್​ನಲ್ಲಿ 89 ರನ್​ ಮಾಡುವ ಮೂಲಕ ಹೇಗೆ ಬ್ಯಾಟ್​ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಹೀಗೇ ಆಡುತ್ತಾರೆ ಎಂದು ನಾವು ಭಾವಿಸಿದ್ದೆವು. ಸಂಕಷ್ಟದ ಸಮಯದಲ್ಲಿ ಬಂದ ರಹಾನೆ ತಂಡವನ್ನು ಮುನ್ನಡೆಸಿದರು ಎಂದು ಹೇಳಿದ್ದಾರೆ.

ರಹಾನೆ ನಿಜವಾಗಿಯೂ ಚೆನ್ನಾಗಿ ಆಡಿದರು. ಆ ರೀತಿಯ ಇನ್ನಿಂಗ್ಸ್‌ಗಳನ್ನು ಅವರು ಕಟ್ಟಿದ್ದಾರೆ. ನಮ್ಮೆದುರು ಆಡಬಹುದೆಂದು ನಮಗೆ ತಿಳಿದಿತ್ತು. ಈ ಹಿಂದಿನ ಸರಣಿಗಳಲ್ಲೂ ಇದನ್ನು ನೋಡಿದ್ದೇವೆ. ತಂಡ ಕುಸಿತ ಕಾಣುತ್ತಿದ್ದ ಸಂಕಷ್ಟದ ವೇಳೆ ಪಿಚ್​ಗೆ ಬಂದು ಠಾಕೂರ್ ಜೊತೆಗೆ ಒತ್ತಡವನ್ನು ನಿಭಾಯಿಸಿದರು. ಉತ್ತಮ ಇನ್ನಿಂಗ್ಸ್ ಕಟ್ಟುವ ಮೂಲಕ, ವೈಯಕ್ತಿಕವಾಗಿಯೂ ಯಶಸ್ವಿಯಾದರು ಎಂದು ಸ್ಟಾರ್ಕ್ ಹೇಳಿದರು.

ರಹಾನೆ ಮತ್ತು ಶಾರ್ದೂಲ್​ ಠಾಕೂರ್​ ಜೋಡಿ ವೇಗದ ಪಿಚ್​ನಲ್ಲಿ ಉತ್ತಮ ಜೊತೆಯಾಟ ಕಟ್ಟಿದರು. ಖಂಡಿತವಾಗಿಯೂ ಈ ಪಾಲುದಾರಿಕೆಯು ನಮ್ಮ ಬೌಲಿಂಗ್​ ವಿಭಾಗವನ್ನು ಕಾಡಿತು. ಅವರಿಬ್ಬರೂ ಚೆನ್ನಾಗಿ ಆಡುವ ಮೂಲಕ ನಮ್ಮನ್ನು ದೀರ್ಘಾವಧಿವರೆಗೆ ಕಾಡಿದರು ಎಂದು ಹೇಳಿದ್ದಾರೆ.

ಇನಿಂಗ್ಸ್ ವೇಳೆ ಕೆಟ್ಟ ಎಸೆತಗಳನ್ನು ರಹಾನೆ ಕಾದು ದಂಡಿಸುತ್ತಿದ್ದರು. ಹೀಗೆ ಮಾಡುತ್ತಲೇ ಇನ್ನಿಂಗ್ಸ್ ಕಟ್ಟಿದರು. ನಂತರ ಉತ್ತಮ ಪಾಲುದಾರಿಕೆಯನ್ನು ಮಾಡಿದರು. ಅವರು ಎಂತಹ ಉತ್ತಮ ಆಟಗಾರ ಎಂದು ನಮಗೆ ತಿಳಿದಿದೆ. ಈ ಹಿಂದೆಯೂ ಹಲವು ಬಾರಿ ಇದನ್ನು ಮಾಡಿ ತೋರಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೇಗನೆ ಔಟ್ ಮಾಡುವ ತಂತ್ರ ರೂಪಿಸಿದ್ದೇವೆ ಎಂದು ಹೇಳಿದರು.

ನಾನು ಮೊದಲು ಲಯ ಕಂಡುಕೊಳ್ಳಲು ಹೆಣಗಾಡಿದೆ. ಈಗ ಪಿಚ್​ನಲ್ಲಿ ಬೌನ್ಸ್ ಮಾಡುವುದನ್ನು ಕಂಡುಕೊಂಡಿದ್ದೇನೆ. ತಂಡ ಟಾಸ್ ಸೋಲುವುದು ಉತ್ತಮ ಎಂದು ಸ್ಟಾರ್ಕ್, ಪಂದ್ಯ ಮುಂದುವರಿದಂತೆ ನಿಸ್ಸಂಶಯವಾಗಿ ಪಿಚ್ ಬದಲಾಗುತ್ತಾ ಸಾಗುತ್ತದೆ. ಹೀಗಾಗಿ ಟಾಸ್ ಸೋಲುವುದು ಉತ್ತಮ ಎಂದು ತೋರುತ್ತದೆ. ಆದರೂ ಹವಾಮಾನದ ಕಾರಣಕ್ಕಾಗಿ ಇನ್ನೂ ಕೆಲವು ತಂತ್ರಗಳನ್ನು ರೂಪಿಸಬಹುದು ಎಂದು ಹೇಳಿದ್ದಾರೆ.

ಸಂಕಷ್ಟದಲ್ಲಿ ಭಾರತ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ನಲ್ಲಿ ಭಾರತ ಸಂಕಷ್ಟದ ಪರಿಸ್ಥಿತಿಯಲ್ಲಿದೆ. 3 ದಿನಗಳ ಆಟ ಮುಗಿದಿದ್ದು, ಎರಡನೇ ಇನಿಂಗ್ಸ್​ ಆರಂಭಿಸಿರುವ ಆಸೀಸ್​ 296 ರನ್​ಗಳ ಮುನ್ನಡೆ ಹೊಂದಿದೆ. ಪಿಚ್​ ಬ್ಯಾಟಿಂಗ್​ ವಿರುದ್ಧವಾಗಿ ವರ್ತಿಸುತ್ತಿದ್ದು, ದೊಡ್ಡ ಮೊತ್ತದ ಸವಾಲನ್ನು ಭಾರತ ಎದುರಿಸುವಲ್ಲಿ ವಿಫಲವಾದರೆ, ಈ ಬಾರಿಯೂ ಪ್ರಶಸ್ತಿಯನ್ನು ತಪ್ಪಿಸಿಕೊಳ್ಳಲಿದೆ.

ಮೊದಲ ಇನಿಂಗ್ಸ್​​ನಲ್ಲಿ 173 ರನ್​ಗಳ ಮುನ್ನಡೆ ಸಾಧಿಸಿರುವ ಆಸೀಸ್​ 2ನೇ ಇನಿಂಗ್ಸ್​ನಲ್ಲಿ 4 ವಿಕೆಟ್​ ಕಳೆದುಕೊಂಡು 123 ರನ್​ ಮಾಡಿದೆ. ಹೀಗಾಗಿ ಒಟ್ಟಾರೆ 296 ರನ್​ಗಳ ಮುನ್ನಡೆಯಲ್ಲಿದೆ. ಇಂದೂ ಕೂಡ ಬ್ಯಾಟ್​ ಮಾಡಲಿದ್ದು, ಇನ್ನಷ್ಟು ರನ್​ಗಳ ಖಾತೆ ಸೇರಲಿವೆ. ಆಟಕ್ಕೆ ಇನ್ನೆರಡು ದಿನ ಬಾಕಿ ಇದ್ದು, ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಓದಿ: WTC Final: ಎರಡನೇ ಇನ್ನಿಂಗ್ಸ್‌​ನಲ್ಲಿ ಭಾರತದ ಬೌಲರ್​ಗಳ ಹಿಡಿತ; ಆಸೀಸ್​ಗೆ 296 ರನ್​ಗಳ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.