ETV Bharat / sports

ವಿಶ್ವಕಪ್​ ಕ್ರಿಕೆಟ್​: ಹೃದಯೊಯ್, ಶಾಂಟೊ ಆಸರೆಯ ಇನ್ನಿಂಗ್ಸ್​.. ಕಾಂಗರೂ ಪಡೆಗೆ 307 ರನ್​​ಗಳ​ ಗುರಿ

author img

By ETV Bharat Karnataka Team

Published : Nov 11, 2023, 3:20 PM IST

Updated : Nov 11, 2023, 3:46 PM IST

ಪುಣೆಯ ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗಿದ್ದು, ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾ 306 ರನ್​ಗಳನ್ನು​ ಕಲೆಹಾಕಿದೆ.

ICC Cricket World Cup 2023
ICC Cricket World Cup 2023

ಪುಣೆ (ಮಹಾರಾಷ್ಟ್ರ): ತೌಹಿದ್ ಹೃದಯೊಯ್ ಅರ್ಧಶತಕ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್​ ಬಲದಿಂದ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 306 ರನ್​ ಕಲೆಹಾಕಿದೆ. ಆಸ್ಟ್ರೇಲಿಯಾಕ್ಕೆ ಇದು ಔಪಚಾರಿಕ ಪಂದ್ಯವಾದರೂ ಬಾಂಗ್ಲಾಕ್ಕೆ 2025ರ ಚಾಂಪಿಯನ್ಸ್​​ ಟ್ರೋಫಿಯ ಪ್ರವೇಶಕ್ಕೆ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ಕಾಂಗರೂ ಪಡೆಗೆ 307 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ನಡೆಯುತ್ತಿರುವ ವಿಶ್ವಕಪ್​ನಲ್ಲಿ 7 ಪಂದ್ಯದಲ್ಲಿ 1ನ್ನು ಮಾತ್ರ ಗೆದ್ದಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿತ್ತು. 8ನೇ ಪಂದ್ಯವನ್ನು ಲಂಕಾ ವಿರುದ್ಧ ಗೆದ್ದು ಚಾಂಪಿಯನ್ಸ್​ ಟ್ರೋಫಿಯ ಅರ್ಹತೆ ಎದುರು ನೋಡುತ್ತಿರುವ ಬಾಂಗ್ಲಾಕ್ಕೆ ಇಂದಿನ ಗೆಲುವು ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಅಸ್ಟ್ರೇಲಿಯಾಕ್ಕೆ ಸೋಲು ಗೆಲುವು ಹೆಚ್ಚಿನ ಬದಲಾವಣೆ ಮಾಡುವುದಿಲ್ಲ. ಗೆದ್ದಲ್ಲಿ ಮೂರನೇ ಸ್ಥಾನಕ್ಕೆ ಹೋಗುವ ಅವಕಾಶ ಇದೆ. ಆದರೆ, ಆಸ್ಟ್ರೇಲಿಯಾ 3 ಅಥವಾ ನಾಲ್ಕನೇ ಸ್ಥಾನದಿಂದ ಸೆಮೀಸ್​ ಪ್ರವೇಶಿಸಿದರೆ, ಅಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾವೇ ಆಗಿರಲಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​​ಗೆ ಇಳಿದ ಬಾಂಗ್ಲಾದೇಶ ವಿಕೆಟ್​ ನಷ್ಟವಿಲ್ಲದೇ ಮೊದಲ ಪವರ್​ ಪ್ಲೇನಲ್ಲಿ 60ರ ಗಡಿ ದಾಟಿತು. ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ 76 ರನ್​ಗಳ ಪಾಲುದಾರಿಕೆಯನ್ನು ಮೊದಲ ವಿಕೆಟ್​ಗೆ ಮಾಡಿದರು. ತಂಜಿದ್ ಹಸನ್ (36) ಮತ್ತು ಲಿಟ್ಟನ್ ದಾಸ್ (36) ವಿಕೆಟ್​ ಪತನದ ನಂತರ ನಜ್ಮುಲ್ ಹೊಸೈನ್ ಶಾಂಟೊ (45) ಮತ್ತು ತೌಹಿದ್ ಹೃದಯೊಯ್ 3ನೇ ವಿಕೆಟ್​ಗೆ 64 ಜೊತೆಯಾಟವಾಡಿದರು . ಮಹಮ್ಮುದುಲ್ಲಾ (32) ಮತ್ತು ಮುಶ್ಫಿಕರ್ ರಹೀಮ್ (21) ಜೊತೆಗೆ ವಿಕೆಟ್​ ಹಂಚಿಕೊಂಡ ನಜ್ಮುಲ್ ಹೊಸೈನ್ ಶಾಂಟೊ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು.

79 ಬಾಲ್​ ಎದುರಿಸಿದ ತೌಹಿದ್ ಹೃದಯೊಯ್ 5 ಬೌಂಡರಿ, 2 ಸಿಕ್ಸ್​ನ ಸಹಾಯದಿಂದ 74 ರನ್​ ಕಲೆಹಾಕಿ ಅಮೂಲ್ಯ ಇನ್ನಿಂಗ್ಸ್​ ಕಟ್ಟಿದರು. ತೌಹಿದ್ ಹೃದಯೊಯ್ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಇನ್ನಿಂಗ್ಸ್​ ಕಟ್ಟಿದ ಎರಡನೇ ಆಟಗಾರ ಆದರು (ಮುಶ್ಫಿಕರ್ ರಹೀಮ್ 102* 2019ರ ವಿಶ್ವಕಪ್​). ಕೊನೆಯಲ್ಲಿ ಮೆಹಿದಿ ಹಸನ್ ಮಿರಾಜ್ (29), ನಸುಮ್ ಅಹ್ಮದ್ (7) ಸಣ್ಣ ಇನ್ನಿಂಗ್ಸ್ ಆಡಿದರು. ಇದರಿಂದ ನಿಗದಿತ 50 ಓವರ್​ ಅಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್​ ನಷ್ಟಕ್ಕೆ 306 ಕಲೆಹಾಕಿತು. ಕಾಂಗರೂ ಪರ ಸೀನ್ ಅಬಾಟ್ ಮತ್ತು ಆಡಮ್ ಝಂಪಾ ತಲಾ ಎರಡು, ಮಾರ್ಕಸ್ ಸ್ಟೊಯಿನಿಸ್ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ಆಸೀಸ್​- ಬಾಂಗ್ಲಾ ಪಂದ್ಯ​; ಟಾಸ್​ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್​ ಆಯ್ಕೆ

Last Updated :Nov 11, 2023, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.