ETV Bharat / sitara

ಲತಾ ಮಂಗೇಶ್ಕರ್ ಅವರಿಗೆ ಸಂದ ಪ್ರಶಸ್ತಿ ಮತ್ತು ಗೌರವಗಳಿವು...

author img

By

Published : Feb 6, 2022, 12:19 PM IST

Updated : Feb 6, 2022, 12:40 PM IST

ಸಂಗೀತ ಕ್ಷೇತ್ರದಲ್ಲಿನ ಸಾಧನೆಯನ್ನು, ಸಾಧಕರನ್ನು ಗೌರವಿಸಲು 'ಲತಾ ಮಂಗೇಶ್ಕರ್ ಪ್ರಶಸ್ತಿ'ಯನ್ನೇ ನೀಡಲಾಗುತ್ತಿದ್ದು, ಆ ಹೆಸರಿನ ಗಾನಸುಧೆಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

Awards and honours bestowed upon Lata Mangeshkar
ಲತಾ ಮಂಗೇಶ್ಕರ್

ಏಳು ದಶಕಗಳಿಂದ ತಮ್ಮ ಸುಮಧುರ ಕಂಠದಿಂದ ನಮ್ಮನ್ನು ರಂಜಿಸಿರುವ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಆದರೆ, 36 ಭಾಷೆಗಳಲ್ಲಿ ಅವರು ಹಾಡಿದ 25,000ಕ್ಕೂ ಹೆಚ್ಚು ಹಾಡುಗಳ ಜೊತೆಗೆ ಅವರು ನಮ್ಮೊಂದಿಗೆ ಎಂದಿಗೂ ಇರುತ್ತಾರೆ. ಸಂಗೀತ ಕ್ಷೇತ್ರಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ಹಲವಾರು ಪ್ರಶಸ್ತಿ ಹಾಗೂ ಗೌರವಗಳು ಸಂದಿವೆ.

⦁ ಭಾರತ ಸರ್ಕಾರದ ಪ್ರಶಸ್ತಿಗಳು: ಭಾರತೀಯ ಸಂಗೀತಕ್ಕೆ ಲತಾ ಮಂಗೇಶ್ಕರ್ ಅವರ ಮಹತ್ವದ ಕೊಡುಗೆಯನ್ನು ಗುರುತಿಸಿ, ಭಾರತ ಸರ್ಕಾರವು 1969ರಲ್ಲಿ ಅವರ 'ಪದ್ಮಭೂಷಣ'ವನ್ನು ನೀಡಿ ಗೌರವಿಸಿತು. 1989ರಲ್ಲಿ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ', 1999ರಲ್ಲಿ 'ಪದ್ಮವಿಭೂಷಣ' ಮತ್ತು 2001ರಲ್ಲಿ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಲಾಯಿತು. ಭಾರತದ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 2008ರಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನೂ ನೀಡಲಾಗಿದೆ.

Awards and honours bestowed upon Lata Mangeshkar
ಏಳು ದಶಕಗಳಿಂದ ಸುಮಧುರ ಕಂಠದಿಂದ ರಂಜಿಸಿರುವ ಲತಾ

⦁ ಫಿಲ್ಮ್‌ಫೇರ್ ಪ್ರಶಸ್ತಿಗಳು: ಹಿನ್ನಲೆ ಗಾಯನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳು ಮೊದಲ ಬಾರಿಗೆ 1959ರಲ್ಲಿ ಪ್ರಾರಂಭವಾಯಿತು. ಲತಾ ಮಂಗೇಶ್ಕರ್ ಅವರು 1959ರಿಂದ 1967ರವರೆಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ 1970ರಲ್ಲಿ ಲತಾ ಅವರು ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು. ಬಳಿಕ ಅವರಿಗೆ 1993ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು 1994 ಮತ್ತು 2004ರಲ್ಲಿ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.

⦁ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 1972, 1975 ಮತ್ತು 1990ರಲ್ಲಿ ಮೂರು ಚಿತ್ರಗಳ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ (ಮಹಿಳಾ ವಿಭಾಗ) ಲತಾ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಇತಿಹಾಸದ ಪುಟಗಳಲ್ಲಿ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ.

⦁ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು: 1966 ಮತ್ತು 1967ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗಾನಸುಧೆ ಲತಾ ಮಂಗೇಶ್ಕರ್​ ಪಡೆದುಕೊಂಡಿದ್ದರು.

Awards and honours bestowed upon Lata Mangeshkar
ಲತಾ ಮಂಗೇಶ್ಕರ್

⦁ ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು: 1964, 1967, 1968, 1969, 1970, 1971, 1971, 1973ರಲ್ಲಿ ಬೆಂಗಾಲ್ ಫಿಲ್ಮ್ ಜರ್ನಲಿಸ್ಟ್ ಅಸೋಸಿಯೇಶನ್‌ನಿಂದ ಲತಾ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ಗಾಯಕಿ ಮಾತ್ರವಲ್ಲ ನಟಿ ಕೂಡ ಹೌದು ಲತಾ ಮಂಗೇಶ್ಕರ್

⦁ ಡಾಟರ್ ಆಫ್ ದಿ ನೇಷನ್ ಅವಾರ್ಡ್​: ಲತಾ ಅವರು 90ನೇ ವಸಂತಕ್ಕೆ ಕಾಲಿಟ್ಟಾಗ ನರೇಂದ್ರ ಮೋದಿ ಸರ್ಕಾರವು ಗಾಯಕಿಯನ್ನು 'ಡಾಟರ್ ಆಫ್ ದಿ ನೇಷನ್' ಗೌರವ ನೀಡಿತು. ಏಳು ದಶಕಗಳಿಂದ ಭಾರತೀಯ ಚಲನಚಿತ್ರ ಸಂಗೀತಕ್ಕೆ ಅವರು ನೀಡಿದ ಕೊಡುಗೆಗೆ ಗೌರವವಾಗಿ ಈ ಬಿರುದನ್ನು ನೀಡಲಾಯಿತು.

Awards and honours bestowed upon Lata Mangeshkar
'ಡಾಟರ್ ಆಫ್ ದಿ ನೇಷನ್' ಅವಾರ್ಡ್​ ನೀಡಿದ್ದ ಮೋದಿ ಸರ್ಕಾರ

⦁ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್: 1974ರಲ್ಲಿ, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಲತಾ ಮಂಗೇಶ್ಕರ್ ಅವರನ್ನು ಇತಿಹಾಸದಲ್ಲಿ ಅತಿ ಹೆಚ್ಚು ರೆಕಾರ್ಡ್ ಮಾಡಿದ ಕಲಾವಿದೆ ಎಂದು ಪಟ್ಟಿಮಾಡಿತು.

Awards and honours bestowed upon Lata Mangeshkar
ಗಾನಸುಧೆ ಲತಾ ಮಂಗೇಶ್ಕರ್

⦁ ಲತಾ ಮಂಗೇಶ್ಕರ್ ಪ್ರಶಸ್ತಿ: 'ಲತಾ ಮಂಗೇಶ್ಕರ್ ಪ್ರಶಸ್ತಿ'ಯು ಸಂಗೀತ ಕ್ಷೇತ್ರದಲ್ಲಿನ ಸಾಧನೆಯನ್ನು ಗೌರವಿಸಲು ಸ್ಥಾಪಿಸಲಾದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯಾಗಿದೆ. ಭಾರತದ ವಿವಿಧ ರಾಜ್ಯ ಸರ್ಕಾರಗಳು ಈ ಹೆಸರಿನೊಂದಿಗೆ ಪ್ರಶಸ್ತಿಗಳನ್ನು ನೀಡುತ್ತವೆ. ಮಧ್ಯಪ್ರದೇಶದ ರಾಜ್ಯ ಸರ್ಕಾರವು 1984ರಲ್ಲಿ ಈ ಪ್ರಶಸ್ತಿಯನ್ನು ಮೊದಲು ಪ್ರಾರಂಭಿಸಿತು. ಪ್ರಶಸ್ತಿಯು ಅರ್ಹತೆಯ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ಒಳಗೊಂಡಿದೆ. ನೌಶಾದ, ಮನ್ನಾ ಡೆ, ಖಯ್ಯಾಮ್, ಕಿಶೋರ್ ಕುಮಾರ್ ಸೇರಿದಂತೆ ಅನೇಕ ಶ್ರೇಷ್ಠ ಕಲಾವಿದರನ್ನು ಈ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ.

Last Updated :Feb 6, 2022, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.