ETV Bharat / international

Sudan Conflict: ಸುಡಾನ್ ಸಂಘರ್ಷ ಕೊನೆಗಾಣಿಸಲು ಸಾರ್ವಭೌಮ ಮಂಡಳಿ ಯತ್ನ

author img

By

Published : Jul 14, 2023, 12:46 PM IST

ಸುಡಾನ್​ನಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗೊಳಿಸಲು ಎಲ್ಲರೊಂದಿಗೂ ಮಾತುಕತೆಗೆ ಸಿದ್ಧ ಎಂದು ಸುಡಾನ್​ನ ಸಾರ್ವಭೌಮ ಮಂಡಳಿ ಹೇಳಿದೆ.

Sudan govt willing to work with all parties to end conflict
Sudan govt willing to work with all parties to end conflict

ಖಾರ್ಟೂಮ್ (ಸುಡಾನ್): ದೇಶದಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲರೊಂದಿಗೂ ತಾನು ಮಾತುಕತೆ ನಡೆಸಲು ಸಿದ್ಧ ಎಂದು ಸುಡಾನ್ ಸರ್ಕಾರ ಇಂಗಿತ ವ್ಯಕ್ತಪಡಿಸಿದೆ. ಸುಡಾನ್​ನಲ್ಲಿ ಏಪ್ರಿಲ್‌ನಲ್ಲಿ ಆರಂಭವಾಗಿರುವ ಸಶಸ್ತ್ರ ಹೋರಾಟದಲ್ಲಿ ಈವರೆಗೆ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಇನ್ನು ಲಕ್ಷಾಂತರ ಜನ ದೇಶದೊಳಗೆ ಹಾಗೂ ಹೊರಗೆ ಸ್ಥಳಾಂತರಗೊಂಡಿದ್ದಾರೆ.

"ವಾಸದ ಮನೆಗಳು, ನೆರೆಹೊರೆ ಪ್ರದೇಶಗಳು ಮತ್ತು ಸರ್ಕಾರಿ ಸೌಲಭ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸಲು ಬಂಡುಕೋರ ಸೇನೆಯು ಬದ್ಧವಾಗಿದ್ದರೆ, ಸುಡಾನ್ ಸಶಸ್ತ್ರ ಪಡೆಗಳು ತಕ್ಷಣವೇ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಸಿದ್ಧವಾಗಿವೆ" ಎಂದು ಸುಡಾನ್​ನ ಸಾರ್ವಭೌಮ ಮಂಡಳಿ (Sovereign Council) ಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕೈರೋದಲ್ಲಿ ನಡೆದ 'ಸುಡಾನ್ ನೆರೆಯ ರಾಷ್ಟ್ರಗಳ ಶೃಂಗಸಭೆ'ಯ ಫಲಿತಾಂಶಗಳನ್ನು ಸರ್ಕಾರ ಸ್ವಾಗತಿಸಿದೆ ಎಂದು ಹೇಳಿಕೆ ತಿಳಿಸಿದೆ. ಪರಿವರ್ತನೆಯ ಅವಧಿಯಲ್ಲಿ ನಾಗರಿಕ ಸರ್ಕಾರವನ್ನು ರಚಿಸುವ ಸಲುವಾಗಿ ಹಿಂಸಾಚಾರ ನಿಂತ ತಕ್ಷಣ ರಾಜಕೀಯ ಸಂವಾದವನ್ನು ಪ್ರಾರಂಭಿಸುವ ಅಗತ್ಯವನ್ನು ಅದು ಒತ್ತಿಹೇಳಿದೆ.

ಈಜಿಪ್ಟ್, ಇಥಿಯೋಪಿಯಾ, ದಕ್ಷಿಣ ಸುಡಾನ್, ಚಾಡ್, ಎರಿಟ್ರಿಯಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಮತ್ತು ಲಿಬಿಯಾ ಸೇರಿದಂತೆ ಸುಡಾನ್‌ನ ನೆರೆಯ ರಾಷ್ಟ್ರಗಳ ನಾಯಕರು ಮತ್ತು ಅರಬ್ ಲೀಗ್ ಮತ್ತು ಆಫ್ರಿಕನ್ ಯೂನಿಯನ್ ಆಯೋಗದ ಅಧಿಕಾರಿಗಳು 'ಸುಡಾನ್ ನೆರೆಯ ರಾಷ್ಟ್ರಗಳ ಶೃಂಗಸಭೆ'ಯಲ್ಲಿ ಭಾಗವಹಿಸಿದ್ದರು.

ಶೃಂಗಸಭೆಯಲ್ಲಿ ಭಾಗವಹಿಸಿದ್ದವರು ಸುಡಾನ್‌ನ ಸಂಘರ್ಷದಲ್ಲಿ ವಿದೇಶಿ ಹಸ್ತಕ್ಷೇಪವನ್ನು ತಿರಸ್ಕರಿಸಿದರು ಮತ್ತು ಪ್ರತಿಸ್ಪರ್ಧಿ ಬಣಗಳ ನಡುವೆ ತಕ್ಷಣದ ಮತ್ತು ಸಮಗ್ರ ಮಾತುಕತೆಗೆ ಒತ್ತಾಯಿಸಿದರು ಎಂದು ಕೊನೆಯ ಪ್ರಕಟಣೆ ತಿಳಿಸಿದೆ. ಸುಡಾನ್‌ನಲ್ಲಿ ಹೋರಾಟವನ್ನು ಕೊನೆಗೊಳಿಸಲು ಕಾರ್ಯಕಾರಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಇದಕ್ಕಾಗಿ ಸಚಿವರ ಕಾರ್ಯವಿಧಾನವನ್ನು ರಚಿಸಲಾಗುವುದು ಮತ್ತು ಅದರ ಮೊದಲ ಸಭೆ ಚಾಡ್‌ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಏಪ್ರಿಲ್ 15 ರಿಂದ ಸುಡಾನ್​ನಲ್ಲಿ SAF ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಮಾರಣಾಂತಿಕ ಘರ್ಷಣೆ ನಡೆಯುತ್ತಿದೆ. ಘರ್ಷಣೆಯಲ್ಲಿ ಇದುವರೆಗೆ 3,000 ಜನರು ಸಾವನ್ನಪ್ಪಿದ್ದಾರೆ ಮತ್ತು 6,000 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹಿಂಸಾಚಾರದ ಪರಿಣಾಮವಾಗಿ 3 ಮಿಲಿಯನ್‌ಗಿಂತಲೂ ಹೆಚ್ಚು ಜನ ಅದರಲ್ಲಿ ಸರಿಸುಮಾರು ಅರ್ಧದಷ್ಟು ಮಕ್ಕಳು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.

ಯುದ್ಧ ಪೀಡಿತ ಸುಡಾನ್‌ನಲ್ಲಿ ಹೆಚ್ಚುತ್ತಿರುವ ಹತಾಶ ಮಾನವೀಯ ಪರಿಸ್ಥಿತಿಯ ಮಧ್ಯೆ 3.1 ಮಿಲಿಯನ್‌ಗಿಂತಲೂ ಹೆಚ್ಚು ಜನ ತಮ್ಮ ಮನೆಗಳನ್ನು ತೊರೆದಿದ್ದಾರೆ. ವ್ಯಾಪಕವಾದ ಜನಾಂಗೀಯ ಹಿಂಸಾಚಾರ, ನಾಗರಿಕರ ಮೇಲಿನ ದಾಳಿಗಳು ಮತ್ತು ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ಅತಿರೇಕದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ಬಗ್ಗೆ ಮಾನವ ಹಕ್ಕುಗಳ ಗುಂಪುಗಳು ಎಚ್ಚರಿಕೆ ನೀಡುತ್ತಿವೆ. ಈ ಮಧ್ಯೆ ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಕ್ಷಿಪ್ರ ಬೆಂಬಲ ಪಡೆಗಳು (RSF) ಈಶಾನ್ಯ ಭಾಗದ ನಿಯಂತ್ರಣಕ್ಕಾಗಿ ಹೋರಾಟವನ್ನು ಮುಂದುವರೆಸಿವೆ.

ಇದನ್ನೂ ಓದಿ : ಕಚ್ಚಾ ತೈಲ ಪೂರೈಕೆ: ಪಾಕಿಸ್ತಾನ - ರಷ್ಯಾ ಮಧ್ಯದ ಒಪ್ಪಂದಕ್ಕೆ ಆರಂಭದಲ್ಲೇ ವಿಘ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.