ETV Bharat / international

2022ರ ಹೊಸ್ತಿಲಲ್ಲಿ ನಾವು: 2021ರಲ್ಲಿ ನಡೆದ ಅಂತಾರಾಷ್ಟ್ರೀಯ ಘಟನೆಗಳ ಕ್ವಿಕ್​ಲುಕ್ ಇಲ್ಲಿದೆ.

author img

By

Published : Dec 28, 2021, 2:08 AM IST

Updated : Dec 28, 2021, 7:02 AM IST

2021ನೇ ವರ್ಷ ಅಂತ್ಯಕ್ಕೆ ಸಮೀಪಿಸಿದೆ. 2022ರ ಹೊಸ್ತಿಲ್ಲಲ್ಲಿ ನಾವಿದ್ದು, 2021ರಲ್ಲಿ ಜಗತ್ತಿನಲ್ಲಿ ನಡೆದ ಅತ್ಯಂತ ಪ್ರಮುಖ ಸುದ್ದಿಗಳ ಕುರಿತು ನೋಡೋಣ ಬನ್ನಿ..

Year End News: Big stories of 2021
2021ರ ಹೊಸ್ತಿಲಲ್ಲಿ ನಾವು: 2021ರಲ್ಲಿ ನಡೆದ ಅಂತಾರಾಷ್ಟ್ರೀಯ ಘಟನೆಗಳ ಕ್ವಿಕ್​ಲುಕ್ ಇಲ್ಲಿದೆ.

ಕೊರೊನಾ ಕಳೆದು ಎಲ್ಲರಿಗೂ ರಿಲೀಫ್ ಸಿಗುತ್ತದೆ ಎಂದು ಭಾವಿಸಿದ್ದ ಜನರಿಗೆ 2021ನೇ ವರ್ಷ ನಿರಾಸೆಯನ್ನುಂಟು ಮಾಡಿದೆ. ಕೊರೊನಾ ಊಸರವಳ್ಳಿಯಂತೆ ಬಣ್ಣ ಬದಲಿಸಿ, ಜನರ ಜೀವ-ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದು ಒಂದೆಡೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಕೆಲವು ಘಟನೆಗಳು ಮಾನವನ ಜೀವನದ ದಿಕ್ಕನ್ನೇ ಬದಲಾಯಿಸಿವೆ. ಅವುಗಳನ್ನೊಮ್ಮೆ ನೋಡೋಣ..

  • ಜನವರಿ 6: ಕ್ಯಾಪಿಟಲ್​ ಮೇಲೆ ದಾಳಿ

2020ರ ಅಂತ್ಯದ ಕೆಲವೊಂದು ಘಟನೆಗಳು 2021ರಲ್ಲಿ ಸಾಕಷ್ಟು ಬಿರುಗಾಳಿಯನ್ನು ಎಬ್ಬಿಸಿದ್ದವು. ಅವುಗಳಲ್ಲಿ ಅತ್ಯಂತ ಮುಖ್ಯವಾದ ವಿಚಾರವೆಂದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ. ಈ ಚುನಾವಣೆ ನಡೆದ ನಂತರ ಸೋಲಪ್ಪಿಕೊಳ್ಳದ ಡೊನಾಲ್ಡ್​ ಟ್ರಂಪ್ ಅಮೆರಿಕದಲ್ಲಿ ಹಿಂದೆಂದೂ ನಡೆದಿರದ ಘಟನೆಯೊಂದಕ್ಕೆ ಕಾರಣರಾದರು. ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್​ಗೆ ಮುತ್ತಿಗೆ ಹಾಕುವುದು ಮಾತ್ರವಲ್ಲದೇ, ಭಾರಿ ಹಿಂಸಾಚಾರಕ್ಕೆ ಕಾರಣರಾದರು. ಇದು ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ.

  • ಜನವರಿ 20: ಬೈಡನ್, ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಾರ್ಟಿ ನಾಯಕರಾದ ಜೋಸೆಫ್​ ಆರ್​ ಬೈಡನ್ ಜಯಗಳಿಸಿ, ಅಧ್ಯಕ್ಷ ಸ್ಥಾನಕ್ಕೆ ಏರಿದರು. ಅಮೆರಿಕದ 46ನೇ ಅಧ್ಯಕ್ಷರಾದ ಅವರ ಜೊತೆಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಅಮೆರಿಕದ ಉಪಾಧ್ಯಕ್ಷೆ ಸ್ಥಾನಕ್ಕೇರಿದ ಪ್ರಥಮ ಕಪ್ಪು ವರ್ಣೀಯ ಮಹಿಳೆಯಾದರು. ಅಷ್ಟೇ ಅಲ್ಲದೇ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದರು ಎಂಬುದು ಇಲ್ಲಿ ಗಮನಾರ್ಹವಾಗಿದೆ.

  • ಫೆಬ್ರವರಿ 1: ಮ್ಯಾನ್ಮಾರ್ ದಂಗೆ

ಆಗ್ನೇಯ ಏಷ್ಯಾದ ರಾಷ್ಟ್ರವಾದ ಮ್ಯಾನ್ಮಾರ್​ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್​ ಸಾನ್ ಸೂಕಿ ಅವರ ನೇತೃತ್ವದಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‍ಎಲ್‍ಡಿ) ಪಕ್ಷವು ಬಹುಮತ ಪಡೆದಿತ್ತು. ಆದರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅಲ್ಲಿನ ಮಿಲಿಟರಿಯು ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಿ, ಅಧಿಕಾರವನ್ನು ವಹಿಸಿಕೊಂಡಿತು. ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಿದ ಸೇನೆ ಇನ್ನೂ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿಲ್ಲ.

  • ಫೆಬ್ರವರಿ 24: ಹಿಂದುಳಿದ ರಾಷ್ಟ್ರಗಳಿಗೆ ಕೋವಾಕ್ಸ್​ ಅಭಯ

ಕೊರೊನಾ ಕಾರಣದಿಂದ ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದ್ದವು. ಮೊದಲೇ ಸಂಕಷ್ಟದಲ್ಲಿದ್ದ ರಾಷ್ಟ್ರಗಳು ಮತ್ತಷ್ಟು ಸಂಕಷ್ಟಕ್ಕೆ ಒಳಗಾದವು. ಕೊರೊನಾ ನಿಯಂತ್ರಣಕ್ಕೆ ಬೇಕಿದ್ದ ಲಸಿಕೆಯನ್ನು ಕೊಳ್ಳಲು ಕೂಡಾ ಅವುಗಳಿಗೆ ಸಾಧ್ಯವಿರಲಿಲ್ಲ. ಈ ವೇಳೆ ವಿಶ್ವಸಂಸ್ಥೆ ಅಂಥಹ ರಾಷ್ಟ್ರಗಳ ನೆರವಿಗೆ ಬರಲು ಕೋವಾಕ್ಸ್ ಅಭಿಯಾನವನ್ನು ಆರಂಭಿಸಿತು. ಮೊದಲ ಹಂತವಾಗಿ ಘಾನಾ ರಾಷ್ಟ್ರಕ್ಕೆ ಸುಮಾರು 6 ಲಕ್ಷ ಆಸ್ಟ್ರಾಜೆನೆಕಾ ಲಸಿಕೆಯನ್ನು ಹಸ್ತಾಂತರ ಮಾಡಲಾಯಿತು. ಈವರೆಗೆ 2 ಬಿಲಿಯನ್ ಕೋವಿಡ್ ಲಸಿಕೆಯನ್ನು ಹಿಂದುಳಿದ ರಾಷ್ಟ್ರಗಳಿಗೆ ಹಂಚಿಕೆ ಮಾಡಲಾಗಿದೆ.

  • ಮಾರ್ಚ್ 23: ಸೂಯೆಜ್ ಕಾಲುವೆಯಲ್ಲಿ ಸಿಲುಕಿದ ಎವರ್​ ಗಿವನ್

ಸೂಯೆಜ್ ಕಾಲುವೆಯ ಮರಳಿನ ರಾಶಿಯಲ್ಲಿ ಸಿಲುಕಿಕೊಂಡಿದ್ದ ಎವರ್ ಗಿವನ್ ಕಂಟೇನರ್ ಹಡಗು ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ಸುಮಾರು 6 ದಿನಗಳ ಕಾಲ ಸಿಲುಕಿದ್ದ ಇದರ ಹಿಂದೆ ಸುಮಾರು 400 ಹಡಗುಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಈ ಹಡಗು ಸಿಲುಕಿಕೊಂಡ ಕಾರಣಕ್ಕೆ ಸುಮಾರು 9.6 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿತ್ತು. ನಂತರ ಈ ಹಡಗನ್ನು ಈಜಿಪ್ಟ್ ವಶಕ್ಕೆ ಪಡೆದಿತ್ತು.

  • ಏಪ್ರಿಲ್ 9: ಪ್ರಿನ್ಸ್​​ ಫಿಲಿಪ್ ನಿಧನ

ಬ್ರಿಟನ್​ ರಾಣಿ ಎರಡನೇ ಎಲಿಜಬೆತ್​ ಅವರ ಪತಿ ಹಾಗೂ ಡ್ಯೂಕ್ ಆಫ್ ಎಡಿನ್​ಬರ್ಗ್ ಪ್ರಿನ್ಸ್​​ ಫಿಲಿಪ್​ 99ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ನಿಧನ ಹೊಂದುವುದಕ್ಕೂ ಮುನ್ನ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ತಮ್ಮ ನೂರನೇ ಜನ್ಮದಿನ ಕೆಲವೇ ದಿನಗಳು ಬಾಕಿಯಿರುವಂತೆ ಮೃತಪಟ್ಟಿದ್ದರು. ಅಂದಹಾಗೆ ಇವರು ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡ್ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿದ್ದರು.

  • ಮೇ 31: ಕೊರೊನಾ ರೂಪಾಂತರಿ ಡೆಲ್ಟಾ ನಾಮಕರಣ

ಕೊರೊನಾ ನಂತರ ಕೊರೊನಾ ರೂಪಾಂತರಗಳು ಜಗತ್ತನ್ನು ಕಾಡಲು ಆರಂಭಿಸಿದವು. B.1.617.2 ಎಂದು ಕರೆಯಲಾಗುತ್ತಿದ್ದ ಕೊರೊನಾ ರೂಪಾಂತರ ವೈರಸ್​ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ಎಂದು ನಾಮಕರಣ ಮಾಡಿತ್ತು. ಅಮೆರಿಕದಲ್ಲಿ ಅತಿ ಹೆಚ್ಚು ಹಾನಿಯನ್ನು ಸೃಷ್ಟಿಸಿದ ಡೆಲ್ಟಾದ ರೂಪಾಂತರ ವೈರಸ್ ಸುಮಾರು ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿತ್ತು. ಇದಲ್ಲದೇ ಅತ್ಯಂತ ಮುಖ್ಯವಾಗಿ ಭಾರತದ ವೈದ್ಯಕೀಯ ಪರಿಸ್ಥಿತಿಯನ್ನು ಅರ್ಥಾತ್ ದುಸ್ಥಿತಿಯ ಅವಲೋಕನ ಮಾಡಿಕೊಳ್ಳಲು ಬಲವಾದ ಕಾರಣವೊಂದು ಸಿಕ್ಕಿತ್ತು.

  • ಜೂನ್ 13: ಕೊನೆಗೊಂಡ ಬೆಂಜಮಿನ್ ನೆತನ್ಯಾಹು ಅಧಿಕಾರ

ಇಸ್ರೇಲ್​ ಪ್ರಧಾನಿಯಾಗಿ 12 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದ ಬೆಂಜಮಿನ್ ನೆತನ್ಯಾಹು ಅವರು ಅಧಿಕಾರದಿಂದ ಕೆಳಗಿಳಿದರು. ಹೊಸ ಪ್ರಧಾನಿಯಾಗಿ ಬಲಪಂಥೀಯ ಯಹೂದಿ ರಾಷ್ಟ್ರೀಯವಾದಿ ನಫ್ತಾಲಿ ಬೆನೆಟ್ ಆಯ್ಕೆಯಾದರು. ಬೆಂಜಮಿನ್ ನೆತನ್ಯಾಹು ಅವರು 1996ರಿಂದ 1999ರವರೆಗೆ ಹಾಗೂ 2009ರಿಂದ 2021ರವರೆಗೆ 12 ವರ್ಷಗಳ ಕಾಲ ಇಸ್ರೇಲ್​ ಪ್ರಧಾನಿಯಾಗಿ ದೇಶವನ್ನು ಆಳಿದ್ದರು. ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವೇ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ನೆತನ್ಯಾಹು ಪ್ರತಿಪಕ್ಷದ ನಾಯಕರಾಗಿದ್ದಾರೆ.

  • ಜೂನ್ 17: ಚೀನಾ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ

ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಾಣ ಮಾಡುತ್ತಿದ್ದು, ಚೀನಾದ ಮೂವರು ಗಗನಯಾತ್ರಿಗಳಾದ ನೀ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 2 ಎಫ್ (Long March 2F) ರಾಕೆಟ್‌ನಲ್ಲಿ ಅವರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಲಾಯಿತು. ಭೂಮಿಯಿಂದ ಸುಮಾರು 380 ಕಿಲೋಮೀಟರ್​ ದೂರದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ಚೀನಾ ನಿರ್ಮಾಣ ಮಾಡುತ್ತಿದೆ.

  • ಜುಲೈ 19: ಜೆಫ್​ ಬೆಜೋಸ್ ಬಾಹ್ಯಾಕಾಶಕ್ಕೆ

ಅಮೆಜಾನ್ ಮತ್ತು ಬ್ಲೂ ಒರಿಜಿನ್ ಸಂಸ್ಥಾಪಕ ಜೆಫ್​​ ಬೆಜೋಸ್‌ ತಮ್ಮದೇ ಕಂಪನಿಯ ಸ್ವಂತ ರಾಕೆಟ್​ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದರು. ಅವರೊಂದಿಗೆ 82 ವರ್ಷದ ಹಿರಿಯ ಪೈಲಟ್‌ ವಾಲಿ ಫಂಕ್‌ , ಬೆಜೋಸ್‌ ಸೋದರ ಮಾರ್ಕ್‌ ಹಾಗೂ ಖಾಸಗಿ ಪೈಲಟ್‌ ಓಲಿವರ್‌ ಡೀಮೆನ್‌ ಕೂಡಾ ಪ್ರಯಾಣಿಸಿದರು. ಇವರು ಬಾಹ್ಯಾಕಾಶದಲ್ಲಿ ಹಲವು ನಿಮಿಷಗಳ ಕಾಲ ಹಾರಾಟ ನಡೆಸಿ, ಬಾಹ್ಯಾಕಾಶದ ಅನುಭವ ಪಡೆದರು.

  • ಜುಲೈ 23: ತಡವಾಗಿ ನಡೆದ ಟೋಕಿಯೋ ಒಲಿಂಪಿಕ್

ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ 2020ರಲ್ಲಿ ನಡೆಯಬೇಕಿದ್ದ ಟೋಕಿಯೋದ ಬೇಸಿಗೆಕಾಲದ ಒಲಿಂಪಿಕ್ಸ್​​ ಅನ್ನು 2021ರಲ್ಲಿ ಆಯೋಜನೆ ಮಾಡಲಾಗಿತ್ತು. ಅಂದಹಾಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟ ಮುಂದೂಡಿಕೆಯಾಗಿತ್ತು. ಕೋವಿಡ್ ನಿಯಮಗಳ ಅನ್ವಯ ಒಲಿಂಪಿಕ್ ಆಡಿಸಲಾಯಿತು. ಪದಕ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ, ಜಪಾನ್ ನಂತರದ ಸ್ಥಾನಗಳನ್ನು ಅಲಂಕರಿಸಿದವು. ಭಾರತ ಕೂಡಾ ಉತ್ತಮ ಪ್ರದರ್ಶನ ನೀಡಿತ್ತು.

  • ಆಗಸ್ಟ್ 15 : ಆಫ್ಘನ್​​ನಲ್ಲಿ ತಾಲಿಬಾನ್ ಅಧಿಕಾರಕ್ಕೆ

ಅಮೆರಿಕದ ಪಡೆಗಳು ಅಫ್ಘಾನಿಸ್ತಾನವನ್ನು ತೊರೆಯಲು ನಿರ್ಧರಿಸಿದ ನಂತರ ತಾಲಿಬಾನ್ ಕಾಬೂಲ್​ ಮೇಲೆ ದಾಳಿ ಮಾಡಿತು. ಈ ವೇಳೆ ಅಧ್ಯಕ್ಷ ಅಶ್ರಫ್ ಘನಿ ದೇಶದ ತೊರೆದಿದ್ದು, ಈ ಘಟನೆಯ ನಂತರ ಸಾಕಷ್ಟು ಹಿಂಸಾಚಾರಗಳು ನಡೆದವು. ಸಾಕಷ್ಟು ಮಂದಿ ದೇಶವನ್ನು ತೊರೆದರು. ದೇಶ ತೊರೆಯುವ ಪ್ರಯತ್ನದ ವೇಳೆ ವಿಮಾನದಿಂದ ಬಿದ್ದು ಅಫ್ಘನ್ ಪ್ರಜೆಗಳು ಸಾವನ್ನಪ್ಪಿರುವ ಘಟನೆ ಜಗತ್ತಿನಾದ್ಯಂತ ಬೇಸರ ಮೂಡಿಸಿತ್ತು. ಆಫ್ಘನ್ ಅನ್ನು ವಶಕ್ಕೆ ತೆಗೆದುಕೊಂಡು ಅನೇಕ ತಿಂಗಳಾದರೂ, ಸುಭದ್ರ ಸರ್ಕಾರ ರಚನೆ ಮಾಡುವುದು ತಾಲಿಬಾನ್​ಗೆ ಈವರೆಗೂ ಸಾಧ್ಯವಾಗಿಲ್ಲ.

  • ಸೆಪ್ಟೆಂಬರ್​ 7: ಎಲ್​ ಸಾಲ್ವಡಾರ್​ನಲ್ಲಿ ಬಿಟ್​ಕಾಯಿನ್ ಅಧಿಕೃತ

ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ದಕ್ಷಿಣ ಅಮೆರಿಕದ ರಾಷ್ಟ್ರವಾದ ಎಲ್ ಸಾಲ್ವಡಾರ್ ಬಿಟ್​ಕಾಯಿನ್ ಅನ್ನು ಅಧಿಕೃತ ಎಂದು ಘೋಷಿಸಿತು. ಬಿಟ್ ಕಾಯಿನ್ ಸಾಂಪ್ರದಾಯಿಕ ಹಣಕಾಸು ಸೇವೆಯ ಅವಶ್ಯಕತೆ ಇಲ್ಲದೇ ನಾಗರಿಕರಿಗೆ ಸಹಾಯ ಮಾಡುತ್ತದೆ. ಹೂಡಿಕೆಗೆ ಉತ್ತೇಜನ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ನಯಿಬ್ ಬುಕೆಲೆ ಸ್ಪಷ್ಟನೆ ನೀಡಿದ್ದರು.

  • ಸೆಪ್ಟೆಂಬರ್​​16: ಸ್ಪೇಸ್ ಎಕ್ಸ್ ನಾಗರಿಕ ಮಿಷನ್

ಎಲಾನ್ ಮಸ್ಕ್ ಕಂಪನಿಯಾದ ಸ್ಪೇಸ್ ಎಕ್ಸ್ ತನ್ನ ಮೊದಲ ಸಂಪೂರ್ಣ ನಾಗರಿಕ ಮಿಷನ್ ಆದ 'ಇನ್​ಸ್ಪಿರೇಷನ್- 4' ಅನ್ನು ಸೆಪ್ಟೆಂಬರ್ ಹಾರಿಸಿತು. . ನಾಲ್ಕು ಪ್ರವಾಸಿಗರನ್ನು ಹೊತ್ತೊಯ್ದ ಇನ್​ಸ್ಪಿರೇಷನ್- 4 ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ಇಂದ ಉಡಾವಣೆಯಾಗಿದ್ದು, ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿತು.

  • ನವೆಂಬರ್ 5: ಆಸ್ಟ್ರೋವರ್ಲ್ಡ್ ದುರಂತ

ವಿಶ್ವವಿಖ್ಯಾತ ರ‍್ಯಾಪರ್ ಟ್ರ್ಯಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್​ ವೇಳೆ ನೂಕುನುಗ್ಗಲು ನಡೆದು 8 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡರು. ಅಮೆರಿಕದ ಟೆಕ್ಸಾಸ್​ನ ಹ್ಯೂಸ್ಟನ್ ನಗರದಲ್ಲಿ ನಡೆಯುತ್ತಿದ್ದ ಆಸ್ಟ್ರೋವರ್ಲ್ಡ್ ಫೆಸ್ಟಿವಲ್ ವೇಳೆ ಈ ದುರಂತ ಸಂಭವಿಸಿತ್ತು. ಮ್ಯೂಸಿಕ್ ಕಾನ್ಸರ್ಟ್​ ವೇಳೆಯಲ್ಲಿ ವೇದಿಕೆಯ ಮುಂಭಾಗಕ್ಕೆ ಬರಲು ಜನರು ಯತ್ನಿಸಿದ್ದು, ಈ ವೇಳೆ ನೂಕುನುಗ್ಗಲು ಸಂಭವಿಸಿದೆ ಎಂದು ಹ್ಯೂಸ್ಟನ್ ಫೈರ್ ಚೀಫ್​ ಸ್ಯಾಮ್ ಪೆನಾ ಮಾಹಿತಿ ನೀಡಿದ್ದರು.

  • ಡಿಸೆಂಬರ್ 25: ಮ್ಯಾನ್ಮಾರ್ ಹಿಂಸಾಚಾರ

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಕೊಂದು ಅವರ ದೇಹಗಳನ್ನು ಸುಡಲಾಗಿದೆ ಎಂಬ ಆರೋಪ ಮ್ಯಾನ್ಮಾರ್​​ನ ಸೇನೆಯ ಮೇಲೆ ಕೇಳಿಬಂದಿತು. ನಿರಾಶ್ರಿತರಿದ್ದ 'ಮೊ ಸೊ' ಗ್ರಾಮಕ್ಕೆ ನುಗ್ಗಿ ಸೇನೆ ದಾಳಿ ನಡೆಸಿದೆ. 30 ಮಂದಿಯನ್ನು ಕೊಂದು, ಶವಗಳನ್ನು ಮೂರು ವಾಹನಗಳಿಗೆ ಕಟ್ಟಿ, ಎಳೆದೊಯ್ದು ಬೆಂಕಿ ಹಚ್ಚಿ ಸುಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

  • ಡಿಸೆಂಬರ್ 26: ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ನಿಧನ

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಹೋರಾಡಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಚ್‌ ಬಿಷಪ್ ಡೆಸ್ಮಂಡ್ ಟುಟು ತಮ್ಮ 90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಇವರಿಗೆ 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Last Updated :Dec 28, 2021, 7:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.