ETV Bharat / entertainment

'ಅನುಭವ, ಪ್ರಬುದ್ಧತೆ, ಶಾಂತಚಿತ್ತತೆ ನೆರವಿಗೆ ಬಂತು': ಪಠಾಣ್​ ವಿವಾದ ಕುರಿತು ದೀಪಿಕಾ ಪಡುಕೋಣೆ

author img

By

Published : Feb 28, 2023, 6:45 PM IST

Deepika Padukone Pathaan controversy
ದೀಪಿಕಾ ಪಡುಕೋಣೆ ಪಠಾಣ್​ ವಿವಾದ

ಪಠಾಣ್​ ಸಿನಿಮಾ ಕುರಿತ ವಿವಾದ ಎದುರಿಸಿದ ಬಗೆಯನ್ನು ನಟಿ ದೀಪಿಕಾ ಪಡುಕೋಣೆ ವಿವರಿಸಿದ್ದಾರೆ.

'ಪಠಾಣ್' ಸಿನಿಮಾ ತೆರೆ ಕಂಡು ಒಂದು ತಿಂಗಳಾಗಿದೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಭಾರಿ ವಿವಾದಗಳ ನಡುವೆಯೇ ಬಿಡುಗಡೆಯಾದ ಆ್ಯಕ್ಷನ್​​ ಮೂವಿ ಒಂದು ಸಾವಿರ ಕೋಟಿ ರೂಪಾಯಿ ಕ್ಲಬ್​​ ಸೇರುವ ಮೂಲಕ ದಾಖಲೆ ಸೃಷ್ಟಿಸಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್‌ನ ಬಹುಬೇಡಿಕೆಯ ತಾರೆಯರಾದ ಶಾರುಖ್​ ಖಾನ್​​, ದೀಪಿಕಾ ಪಡುಕೋಣೆ, ಜಾನ್​​ ಅಬ್ರಹಾಂ ನಟನೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.

ಪಠಾಣ್​ ವಿವಾದವೇನು?: ಸೂಪರ್​ ಹಿಟ್​ ಪಠಾಣ್​ ಬಿಡುಗಡೆಗೂ ಮುನ್ನ ದೊಡ್ಡ ವಿವಾದಕ್ಕೆ ಒಳಗಾಗಿತ್ತು. ಹಾಡೊಂದರಲ್ಲಿನ ನಟಿಯ ವೇಷಭೂಷಣ ಪರ-ವಿರೋಧ ಚರ್ಚೆಗೆ ವೇದಿಕೆ ಒದಗಿಸಿತ್ತು. ಪಠಾಣ್​ ಪ್ರಚಾರದ ಭಾಗವಾಗಿ ಕಳೆದ ಡಿಸೆಂಬರ್​ 2ನೇ ವಾರದಲ್ಲಿ ಬಿಡುಗಡೆಯಾಗಿದ್ದ ಬೇಶರಂ ರಂಗ್​ ಹಾಡಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನ ಕೊನೆಯಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಹಲವರ ಕೆಂಗಣ್ಣಿಗೆ ಕಾರಣವಾಗಿತ್ತು.

ಹಲವೆಡೆ ಪ್ರತಿಭಟನೆಗಳು ನಡೆದವು. ನಟ, ನಟಿಯರಿಗೆ ಜೀವ ಬೆದರಿಕೆ ಎದುರಾಯಿತು. ಬಾಯ್ಕಾಟ್​ ಎಚ್ಚರಿಕೆಯೂ ಇತ್ತು. ಆದರೂ ಚಿತ್ರತಂಡ ಯಾವುದೇ ಗೊಂದಲಕ್ಕೆ ಒಳಗಾಗದೇ ಆತ್ಮವಿಶ್ವಾಸದೊಂದಿಗೆ ಮುಂದುವರಿಯಿತು. ಜನವರಿ 25ರಂದು ಸಿನಿಮಾ ಬಿಡುಗಡೆ ಆಯಿತು. ಚಿತ್ರ ತೆರೆಕಂಡ ಮೊದಲೆರಡು ದಿನಗಳೂ ಸಹ ಉದ್ವಿಗ್ನ ಪರಿಸ್ಥಿತಿ ಇತ್ತು. ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಆದ್ರೆ ಕಳೆದೊಂದು ತಿಂಗಳಲ್ಲಿ ಚಿತ್ರ ಕಂಡ ಯಶಸ್ಸು ಮಾತ್ರ ಅಭೂತಪೂರ್ವ. ಪಠಾಣ್​ ಸಿನಿಮಾ ಒಂದು ಸಾವಿರ ಕೋಟಿ ರೂ ಕ್ಲಬ್​ ಸೇರಿ ಯಶಸ್ವಿಯಾಗಿದೆ.

ದೀಪಿಕಾ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ?: ಪಠಾಣ್ ವಿವಾದವೆದ್ದಾಗ, ಇಂಥ ಪರಿಸ್ಥಿತಿ ನಿಭಾಯಿಸುವಲ್ಲಿ ಹೆಚ್ಚು ಅನುಭವ ಹೊಂದಿರುವ ದೀಪಿಕಾ ಪಡುಕೋಣೆ ಶಾಂತವಾಗಿಯೇ ಇದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, "ಅನುಭವ ಮತ್ತು ಪ್ರಬುದ್ಧತೆ' ಕಠಿಣ ಸಮಯಗಳಲ್ಲಿ ಸಹಾಯ ಮಾಡಿದೆ. ನನ್ನ ಕ್ರೀಡಾ ಹಿನ್ನೆಲೆಯೂ ಸಹ ಸಂಯಮದ ಬಗ್ಗೆ ಸಾಕಷ್ಟು ಕಲಿಸಿದೆ ಎಂದರು.

Deepika Padukone on Pathaan controversy
ಬೇಶರಂ ರಂಗ್​ ಹಾಡಿನಲ್ಲಿ ದೀಪಿಕಾ ಪಡುಕೋಣೆ

ಎಸ್‌ಆರ್‌ಕೆ ಅವರೊಂದಿಗೆ ತೆರೆ ಹಂಚಿಕೊಂಡ ಬಗ್ಗೆ ಮಾತನಾಡುತ್ತಾ, ಅವರು ಅಪಾರ ನಂಬಿಕೆ ತೋರಿಸಿದ್ದರಿಂದ ನನ್ನ ವೃತ್ತಿಜೀವನ ಪ್ರಾರಂಭವಾಯಿತು. ಹಾಗಾಗಿ ಆಡಿಶನ್​ ಮಾಡದೆಯೇ ಓಂ ಶಾಂತಿ ಓಂ ಸಿನಿಮಾದಲ್ಲಿ ಚಾನ್ಸ್​​ ಪಡೆದಿದ್ದೇನೆ ಎಂದು ಬಹಿರಂಗಪಡಿಸಿದರು. ಎಸ್‌ಆರ್‌ಕೆ ಜೊತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕೈ ಕೈ ಹಿಡಿಯುವುದು ಅಥವಾ ಅಪ್ಪುಗೆ ಸಾಕು, ಪದಗಳ ಅಗತ್ಯವಿಲ್ಲ ಎಂದು ಕೂಡ ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ ವಿವಾದಿತ ಚಿತ್ರಗಳು: ಟೀಕೆ, ಆಕ್ರೋಶ, ಬಾಯ್ಕಾಟ್​ ಎಚ್ಚರಿಕೆಗಳು ನಟಿ ದೀಪಿಕಾ ಪಡುಕೋಣೆ ಅವರಿಗೆ ಹೊಸತೇನಲ್ಲ. 2018ರಲ್ಲಿ ಪದ್ಮಾವತ್​​ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸಿತ್ತು. ಬಾಲಿವುಡ್​​ ಹಿರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ 2018ರ​​ ಜನವರಿ 25ರಂದು ತೆರೆಕಂಡಿತ್ತು. ಈ ಚಿತ್ರವೂ ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ಎದುರಿಸಿತು.

ಚಿತ್ರದ ಟೈಟಲ್​ ಅನ್ನು ಪದ್ಮಾವತಿಯಿಂದ ಪದ್ಮಾವತ್ ಎಂದು ಬದಲಾವಣೆ ಮಾಡಲಾಯಿತು. ಪದ್ಮಾವತಿ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ, ಘೂಮರ್ ಹಾಡಿನಲ್ಲಿ ಸೊಂಟ ಬಳುಕಿಸಿದ್ದರು. ಇದಕ್ಕೆ ಕರ್ಣಿ ಸೇನಾ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕರ್ಣಿ ಸೇನೆಯ ಬೇಡಿಕೆಗಳನ್ನು ಒಪ್ಪಿಕೊಂಡು, ಚಿತ್ರ, ಹಾಡು ಎಡಿಟ್ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ಶಾಹಿದ್ ಕಪೂರ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರ 215 ಕೋಟಿ ರೂಪಾಯಿಯ ಬಜೆಟ್​ನಲ್ಲಿ ನಿರ್ಮಾಣ ಆಗಿ, 585 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಚಪಾಕ್ (Chhapaak) ಸಹ ಬಹಿಷ್ಕಾರ ಕರೆಗಳನ್ನು ಎದುರಿಸಿಯೇ ರಿಲೀಸ್​ ಆದ ಚಿತ್ರ.

ಇದನ್ನೂ ಓದಿ: ಸಿಟಾಡೆಲ್‌ ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡ ಸೌತ್​ ನಟಿ ಸಮಂತಾ!

2013ರಲ್ಲಿ ಬಿಡುಗಡೆಯಾದ ಬಾಜಿರಾವ್ ಮಸ್ತಾನಿ ಕೂಡ ವಿವಾದಕ್ಕೊಳಗಾಗಿತ್ತು. ರಣ್​​ವೀರ್​ ಸಿಂಗ್​​, ​ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಭಿನಯದ ಈ ಸಿನಿಮಾಗೆ ಪೇಶ್ವೆ ಮತ್ತು ಛತ್ರಸಾಲ್ ವಂಶಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಚಿತ್ರ ಇತಿಹಾಸ ತಿರುಚಿದೆ ಎಂದು ಆರೋಪಿಸಲಾಗಿತ್ತು. 145 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 356 ಕೋಟಿ ರೂ. ಕಲೆಕ್ಷನ್​​ ಮಾಡಿದೆ.

ಇದನ್ನೂ ಓದಿ: ಸೀರೆಯಲ್ಲಿ 'ನಾಗಿಣಿ'ಯ ಸೌಂದರ್ಯ ಪ್ರದರ್ಶನ: ತೇಜಸ್ವಿ ಪ್ರಕಾಶ್​ ಚೆಲುವಿನ ಚಿತ್ತಾರ

ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಿದ ಮೊದಲ ಚಿತ್ರ ಗೋಲಿಯೋನ್ ಕಿ ರಾಸ್ಲೀಲಾ ರಾಮ್​ಲೀಲಾ 2013ರಲ್ಲಿ ವಿರೋಧಗಳ ನಡುವೆ ಬಿಡುಗಡೆ ಆಯಿತು. ಚಿತ್ರದ ಶೀರ್ಷಿಕೆಯಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಲಾಗಿದೆ ಎಂದು ಹೇಳುವ ಮೂಲಕ ವಿರೋಧಿಸಲಾಯಿತು. 48 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾದ ಈ ಚಿತ್ರ 220 ಕೋಟಿ ರೂ. ಕಲೆಕ್ಷನ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.