ETV Bharat / entertainment

ಜಯರಾಜ್-ಕೊತ್ವಾಲ್ ಕಾಳಗ ಜೋರಾಗಿರಲಿದೆ: ಹೆಡ್​ಬುಷ್ ನಟ ವಸಿಷ್ಠ ಸಿಂಹ

author img

By

Published : Oct 18, 2022, 7:53 PM IST

Actor Vasishta Simha speaks on head bush movie
ನಟ ವಸಿಷ್ಠ ಸಿಂಹ

ಅಕ್ಟೋಬರ್ 21 ರಂದು ಬಿಡುಗಡೆ ಅಗಲಿರುವ ಹೆಡ್ ಬುಷ್ ಸಿನಿಮಾ ಬಗ್ಗೆ ನಟ ವಸಿಷ್ಠ ಸಿಂಹ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಟೈಟಲ್​ ಮತ್ತು ಟ್ರೈಲರ್​ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಹವಾ ಸೃಷ್ಟಿಸಿರೋ ಸಿನಿಮಾ ಹೆಡ್​ಬುಷ್. ಈ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರ ಮಾಡಿರುವ ಡಾಲಿ ಧನಂಜಯ್ ಅಲ್ಲದೇ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಕ್ರೇಜಿ ಸ್ಟಾರ್ ರವಿಚಂದ್ರನ್, ದೇವರಾಜ್ ಹೀಗೆ ದೊಡ್ಡ ತಾರಾ ಬಳಗವೇ ಇದೆ. ಹೆಡ್ ​ಬುಷ್ ಬಿಡುಗಡೆಗೆ ಇನ್ನೆರಡು ದಿನ ಬಾಕಿ ಇದ್ದು, ಈ ಚಿತ್ರದಲ್ಲಿ ಕೊತ್ವಾಲ್ ಪಾತ್ರ ಮಾಡಿರೋ ನಟ ವಸಿಷ್ಠ ಸಿಂಹ ಅವರು ಈಟಿವಿ ಭಾರತ ಜೊತೆ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ಮತ್ತು ಧನಂಜಯ್ ಬಹಳ ವರ್ಷಗಳ ಗೆಳೆಯರು. ಒಟ್ಟಿಗೆ ಸಿನಿಮಾ ಮಾಡಿದ ಮೇಲೆ ಮತ್ತಷ್ಟು ಆತ್ಮಿಯರಾದೆವು. ಟಗರು ಸಿನಿಮಾದಲ್ಲಿ ಡಾಲಿ ಮತ್ತು ಚಿಟ್ಟೆ ಪಾತ್ರಕ್ಕೆ ಒಂದು ವ್ಯಾಲ್ಯೂ ಇದೆ. ಈ ಸಿನಿಮಾ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಾನು ಮತ್ತು ಧನಂಜಯ್ ಒಟ್ಟಿಗೆ ನಟಿಸಬೇಕು ಅಂತಾ ಸಾಕಷ್ಟು ಆಫರ್​ಗಳು ಬಂದವು. ಆದರೆ ನಾವು ಒಪ್ಪಿಕೊಂಡಿರಲಿಲ್ಲ. ಏಕೆಂದರೆ ಡಾಲಿ ಮತ್ತು ಚಿಟ್ಟೆ ಪಾತ್ರಕ್ಕೆ ಅಷ್ಟು ಮಹತ್ವ ಇತ್ತು. ಈ ಕಾರಣಕ್ಕೆ ಸಾಕಷ್ಟು ಸಿನಿಮಾಗಳ ಆಫರ್ ಬಿಟ್ಟಿದ್ದೇವೆ. ಆದರೆ ಹೆಡ್​ಬುಡ್ ಸಿನಿಮಾ ಮೂಲಕ ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಸಂದರ್ಭ ಕೂಡಿ ಬಂತು.

ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ಹೇಳುವ ಕಥೆಯಿದು. ಒಂದು ರೌಡಿಸಂ ಕಥೆ ಅಂತಾ ಬಂದಾಗ ಅದನ್ನು ಮನೋರಂಜನೆಯಾಗಿಯೂ ನೋಡುತ್ತೇವೆ. ಜಯರಾಜ್ ಆಗಿ ಧನಂಜಯ್, ಗಂಗಾ ಆಗಿ ಯೋಗಿ, ಕೋತ್ವಾಲ್ ಆಗಿ ನಾನು ಪಾತ್ರಗಳನ್ನು ನಿರ್ವಹಿಸಿದ್ದೇವೆ. ಗೆಳಯನ ಸಿನಿಮಾ ಅಂತಾ ಬಂದಾಗ ನಾವೆಲ್ಲ ಒಟ್ಟಿಗೆ ಇರಬೇಕು. ಈ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ಇದ್ದೇನೆ ಎಂದರು.

ನಟ ವಸಿಷ್ಠ ಸಿಂಹ

ಇನ್ನು, ಅಗ್ನಿ ಶ್ರೀಧರ್ ಅವರು ಕಥೆ ಹೇಳಿದಾಗ ನಾನು ತುಂಬಾನೇ ಎಕ್ಸೈಟ್ ಆಗಿ ಒಪ್ಪಿಕೊಂಡೆ. ಶ್ರೀಧರ್ ಸರ್ ಪುಸ್ತಕದಲ್ಲಿ ಇಲ್ಲದೇ ಇರುವ ಕೆಲ ವಿಷ್ಯಗಳು ಈ ಸಿನಿಮಾದಲ್ಲಿವೆ. 1986ರಲ್ಲಿ ಜಯರಾಜ್ ಹಾಗು ಕೊತ್ವಾಲ್ ನಡುವೆ ಯಾವ ಮಟ್ಟಿಗೆ ಗ್ಯಾಂಗ್ ವಾರ್ ಇತ್ತು ಎಂಬುದು ನಮಗೆ ಗೊತ್ತಿದೆ. ಇದು 70ರ ದಶಕದಲ್ಲಿ ನಡೆದ ಕಥೆ. ಈ ಸಿನಿಮಾದಲ್ಲಿ ಬರುವ ಒಂದೊಂದು ಪಾತ್ರಗಳನ್ನು ಆ ವ್ಯಕ್ತಿಗಳೇ ಎಂಬ ಮಟ್ಟದಲ್ಲಿ ಕಾಸ್ಟೂಮ್ ಹಾಗು ಸೆಟ್​​ ಹಾಕಿ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದರು.

ಇನ್ನು, ಗೆಳೆಯ ಧನಂಜಯ್ ಎದುರು ಆ್ಯಕ್ಟಿಂಗ್ ಮಾಡೋದು ಸ್ವಲ್ಪ ಕಷ್ಟ ಆಯಿತು. ಸಿನಿಮಾದಲ್ಲಿರುವಂತೆ ನಿಜ ಜೀವನದಲ್ಲಿ ಯಾವತ್ತೂ ಹಾಗೆ ಇದ್ದವರಲ್ಲ. ಪಾತ್ರಕ್ಕೆ ಜೀವ ತುಂಬೋದು ಚಾಲೆಂಜಿಂಗ್ ಆಗಿತ್ತು. ಒಂದೊಂದು ಶಾಟ್​ನಲ್ಲೂ ಹೇಗೆ ಕಾಣುತ್ತೆ ಅನ್ನೋದು ಮುಖ್ಯ. ಒಟ್ಟಿನಲ್ಲಿ ಹೆಡ್ ಬುಷ್ ಸಿನಿಮಾದ ಕಂಟೆಂಟ್ ತುಂಬಾನೇ ಚೆನ್ನಾಗಿದೆ. ಬೇರೆ ಭಾಷೆಯ ಸಿನಿಮಾಗೆ ಹೋಲಿಸಬಾರದು. ನಮ್ಮ ಸಿನಿಮಾಗೆ ನಾವೇ ಪೈಪೋಟಿ ಮಾಡಬೇಕು ಎಂದು ಹೇಳಿದರು.

ಶೂನ್ಯ ಬಹಳ ಶ್ರಮ ಜೀವಿ. ಮಾತು ತುಂಬಾ ಕಡಿಮೆ. ಆದರೆ ಕೆಲಸ ಅಂತಾ ಬಂದಾಗ ಬಹಳ ಪ್ರೀತಿಯಿಂದ ಕೆಲಸ ಮಾಡಿಸಿಕೊಳ್ಳುವ ನಿರ್ದೇಶಕರು. ಈ ಸಿನಿಮಾದ ಪ್ರತಿ ಹಂತದಲ್ಲೂ ಅಗ್ನಿ ಶ್ರೀಧರ್ ಅವರ ಸಲಹೆ ಸೂಚನೆ ಪಡೆದಿದ್ದೇವೆ ಎಂದರು.

ನಟ ವಸಿಷ್ಠ ಸಿಂಹ

ಡಾಲಿ ಒಳ್ಳೆ ಗೆಳೆಯ. ಅವನ ಜೊತೆ ಕೆಲಸ ಮಾಡೋದು ಖುಷಿ ವಿಚಾರ. ಯೋಗಿ ಅದ್ಭುತ ನಟ. ದುನಿಯಾ ಸಿನಿಮಾ ನೋಡಿದವರಿಗೆ ಯೋಗಿ ಎಂಥಾ ಪ್ರತಿಭಾನ್ವಿತ ನಟ ಅನ್ನೋದು ಗೊತ್ತಾಗುತ್ತದೆ. ಆದರೆ ಕೆಲ ಕಾರಣಗಳಿಂದ ನಾವು ಅಂದುಕೊಂಡಂತೆ ಆಗೋಲ್ಲ. ಯೋಗಿಯಲ್ಲಿ ಒಳ್ಳೆ ನಟ ಇದ್ದಾನೆ ಅನ್ನೋದಿಕ್ಕೆ ಹುಡುಗರು ಹಾಗು ಯಾರೇ ಕೂಗಾಡಲಿ ಸಿನಿಮಾದಲ್ಲಿನ ಅಭಿನಯವೇ ಸಾಕ್ಷಿ. ಈ ಹೆಡ್ ಬುಷ್ ಸಿನಿಮಾದಲ್ಲಿ ಯೋಗಿ ಪಾತ್ರ ತುಂಬಾ ಪವರ್ ಫುಲ್ ಆಗಿದೆ ಅಂತಾರೆ ವಸಿಷ್ಠ.

ಇದನ್ನೂ ಓದಿ: ದಾವಣಗೆರೆ ಬೆಣ್ಣೆ ದೋಸೆ ಸವಿದ ರಮ್ಯಾ.. ಪದ್ಮಾವತಿ​ ನೋಡಲು ಮುಗಿಬಿದ್ದ ಫ್ಯಾನ್ಸ್​, ಟ್ರಾಫಿಕ್​ ಜಾಮ್​

ಹೆಡ್ ಬುಷ್ ಪಾರ್ಟ್ 1 ಹಾಗು ಹೆಡ್ ಬುಡ್ ಪಾರ್ಟ್ 2 ನಲ್ಲಿ ಕೊತ್ವಾಲ್ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಜಯರಾಜ್ ಹಾಗು ಕೊತ್ವಾಲ್ ಕಾಳಗ ಜೋರಾಗಿರಲಿದೆ. ಪ್ರಮೋಷನ್ ವಿಚಾರದಲ್ಲಿ ಎಲ್ಲರೂ ಬೆಲ್ ಬಾಟಮ್ ಕಾಸ್ಟೂಮ್ ಧರಿಸಿ ಕಾಣಿಸಿಕೊಳ್ಳುತ್ತಿರೋದು ಚೆನ್ನಾಗಿ ಕಾಣುತ್ತಿದೆ. ಈ ಸಿನಿಮಾವನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಡಾಲಿ ಬಹಳ ವಿನೂತನವಾಗಿ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ನಿಜಕ್ಕೂ ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅಂತಾ ನಟ ವಸಿಷ್ಠ ಸಿಂಹ ಹೆಡ್ ಬುಷ್ ಸಿನಿಮಾ ಬಗ್ಗೆ ಭವಿಷ್ಯ ನುಡಿದರು. ಅಕ್ಟೋಬರ್ 21 ರಂದು ಹೆಡ್ ಬುಷ್ ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.