ETV Bharat / city

ಶಿವಮೊಗ್ಗದ ಊರುಗಡೂರು ಭಾಗದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಚಿಂತನೆ

author img

By

Published : May 15, 2022, 1:01 PM IST

Plans to construct police station in Urugaduru of Shimoga
ಊರುಗಡೂರು ಭಾಗದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಚಿಂತನೆ

ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿವಮೊಗ್ಗದ ಊರುಗಡೂರು ಭಾಗದಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ..

ಶಿವಮೊಗ್ಗ: ನಗರದಲ್ಲಿ ಹರ್ಷ ಹತ್ಯೆ ಬಳಿಕ ಗಲಾಟೆಗಳು ಸಾಮಾನ್ಯ ಎನ್ನುವಂತಾಗಿದೆ. ಹೊರವಲಯದ ಪ್ರದೇಶಗಳಲ್ಲಂತೂ ಗಾಂಜಾ ಅಮಲಿನಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ಕೋಮು ವೈಷಮ್ಯವೂ ಹೆಚ್ಚಲಾರಂಭಿಸಿದೆ. ಅದರಲ್ಲೂ ಊರುಗಡೂರು, ಸೂಳೆಬೈಲು ಭಾಗದಲ್ಲಂತೂ ರಾತ್ರಿ ವೇಳೆ ಜನರು ಓಡಾಡಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಊರುಗಡೂರು ಭಾಗದಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಹರ್ಷ ಹತ್ಯೆ ಬಳಿಕ ಶಿವಮೊಗ್ಗ ನಗರದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ವಾರದ ಹಿಂದೆ ದುಷ್ಕರ್ಮಿಗಳು ಕಾರೊಂದರ ಮೇಲೆ ರಾಡ್​ನಿಂದ ಹಲ್ಲೆ ನಡೆಸಿದ್ದು ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲಲ್ಲಿ ಕಲ್ಲು ತೂರಾಟಗಳೂ ಆರಂಭಗೊಂಡಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸವನ್ನೇ ಪಡಬೇಕಾಗಿತ್ತು.

ಎಲ್ಲವನ್ನು ಅವಲೋಕಿಸಿ ಊರುಗಡೂರು ಭಾಗದಲ್ಲಿ ಹೊಸದಾಗಿ ಪೊಲೀಸ್ ಠಾಣೆ ಆರಂಭಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಇದಕ್ಕೆ ಬೇಕಾದ ಅಂಕಿ-ಅಂಶ, ಮಾಹಿತಿ ಸಂಗ್ರಹಿಸಲು ಶಿವಮೊಗ್ಗ ಪೊಲೀಸ್​ ಇಲಾಖೆ ಆರಂಭಿಸಿದೆ.

ಊರುಗಡೂರು ಭಾಗದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಚಿಂತನೆ

ಊರುಗಡೂರು, ಸೂಳೆಬೈಲು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರುತ್ತವೆ. ಈ ಠಾಣೆಯ ವ್ಯಾಪ್ತಿ ಅತಿದೊಡ್ಡದಾಗಿರುವುದರಿಂದ ಪೊಲೀಸರಿಗೆ ಇಡೀ ಠಾಣೆ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆ ಮಾಡುವುದೇ ಕಷ್ಟವಾಗಿದೆ. ಈ ಕಾರಣದಿಂದಲೇ ಇಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಇದು ಮತ್ತೂರು ಭಾಗದ ಜನರ ಆತಂಕಕ್ಕೂ ಕಾರಣವಾಗಿದೆ. ಮತ್ತೂರಿಗೆ ಹೋಗಬೇಕು ಎಂದರೆ ಊರುಗಡೂರು, ಸೂಳೆಬೈಲು ಮೂಲಕವೇ ಹೋಗಬೇಕಾಗಿರುವುದರಿಂದ ರಾತ್ರಿವೇಳೆ ಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ : ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಹೀಗಿದೆ..

ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿ ಹಲ್ಲೆ ನಡೆಸಿರುವುದು ದೃಢಪಟ್ಟಿದೆ. ಹೀಗಾಗಿ, ಗಾಂಜಾ ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜೊತೆಗೆ ಹಲ್ಲೆ ನಡೆಸಲು ಕುಮ್ಮಕ್ಕು ನೀಡುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂಬುದು ಜನರ ಆಗ್ರಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.