ETV Bharat / city

ರಾಜ್ಯದಲ್ಲಿ ಬೆಳೆ ಹಾನಿ ಸಮೀಕ್ಷೆಗೆ ಸೂಚಿಸಲಾಗಿದೆ: ಕೇಂದ್ರ ಸಚಿವೆ ಕರಂದ್ಲಾಜೆ

author img

By

Published : Nov 21, 2021, 12:50 PM IST

survey-to-assess-crop-loss-due-to-heavy-rains-in-the-state
ಸಚಿವೆ ಶೋಭಾ ಕರಂದ್ಲಾಜೆ

ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಈ ಹಾನಿಯ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಮೈಸೂರು: ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆಹಾನಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ಹೇಳಿದರು.


ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಗೆ ವ್ಯಾಪಕ ಹಾನಿಯಾಗಿದೆ. ಮಳೆಯಿಂದ ಹಾನಿಗೊಳಗಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಹಾಗೂ ಗೃಹಸಚಿವರು ಸಂಪರ್ಕದಲ್ಲಿದ್ದು, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ಎಲ್ಲಾ ಮಾಹಿತಿಗಳು ಲಭ್ಯವಾದ ನಂತರ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಕೃಷಿ ಕಾಯ್ದೆಗಳ ಕುರಿತು ಮೌನ:

ಮೂರು ಕೃಷಿ ಕಾಯ್ದೆಗಳ ವಾಪಸಾತಿ ವಿಚಾರ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಕೃಷಿ ಸಚಿವೆ ನಕಾರ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಅವರು ಬದಿಗೆ ಸರಿದರು. ಅಲ್ಲದೆ, ರಾಜ್ಯದಲ್ಲಿ ಸಂಭವಿಸಿರುವ ಮಳೆಹಾನಿಗೆ ಸರ್ಕಾರ ಸ್ಪಂದಿಸುತ್ತಿಲ್ಲವೆಂಬ ವಿಪಕ್ಷಗಳ ಆರೋಪಕ್ಕೂ ಉತ್ತರಿಸದ ಸಚಿವೆ, ಈ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸದೆ ಮೌನಕ್ಕೆ ಜಾರಿದರು.

ಕೇದಾರನಾಥದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿರುವ ಶಂಕರಾಚಾರ್ಯರ ಮೂರ್ತಿ ಕೆತ್ತನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಗನ್‌ಹೌಸ್ ಬಳಿ ಇರುವ ಶಿಲ್ಪಿ ಅರುಣ್ ಯೋಗಿರಾಜ್ ನಿವಾಸಕ್ಕೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು‌.

ಮೂರ್ತಿ ಅದ್ಭುತವಾಗಿ ಮೂಡಿ ಬಂದಿದೆ. ಪ್ರಧಾನಿ ಮೋದಿ ಕೂಡಾ ಸಂತಸಗೊಂಡಿದ್ದಾರೆ. ಈ ಮೂಲಕ ಇಡೀ ಜಗತ್ತು ನಿಮ್ಮನ್ನು ಗುರುತಿಸಿದೆ ಎಂದು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಅರುಣ್ ಕುಟುಂಬ ಸದಸ್ಯರು ಸಚಿವೆಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಬುದ್ದನ ಮೂರ್ತಿ ನೆನಪಿನ ಕಾಣಿಕೆಯಾಗಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.