ETV Bharat / city

ವಿಸ್ಟ್ರಾನ್‌ ಕಂಪನಿ ಉತ್ಪಾದನೆ ಪುನಾರಂಭ ಶೀಘ್ರ: ಸಚಿವ ಶೆಟ್ಟರ್‌

author img

By

Published : Feb 18, 2021, 6:38 PM IST

wistron-resumes-production-in-few-days
ವಿಸ್ಟ್ರಾನ್‌ ಕಂಪನಿ

ಕೈಗಾರಿಕಾ ಸ್ನೇಹಿ ರಾಜ್ಯವಾಗಿರುವ ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕೆಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಆ ಘಟನೆಯ ನಂತರ ಮರು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿರುವುದು ಹಾಗೂ ಉತ್ಪಾದನೆ ಪುನಾರಂಭಕ್ಕೆ ಸಿದ್ದತೆ ನಡೆಸಿರುವುದು ಸಂತಸದ ವಿಷಯವಾಗಿದೆ ಎಂದು ಸಚಿವ ಜಗದೀಶ​ ಶೆಟ್ಟರ್​​​ ಹೇಳಿದರು.

ಬೆಂಗಳೂರು : ಕೋಲಾರದ ವಿಸ್ಟ್ರಾನ್‌ ಕಂಪನಿ ಇನ್ನು ಕೆಲವೇ ದಿನಗಳಲ್ಲಿ ಉತ್ಪಾದನಾ ಕಾರ್ಯವನ್ನು ಪುನಾರಂಭಿಸಲಿರುವುದು ಸಂತಸದ ವಿಷಯ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿ ಮಾಡಿದ ವಿಸ್ಟ್ರಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದಿಪ್ತೋ ಗುಪ್ತಾ ನೇತೃತ್ವದ ತಂಡ, ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರ ಹಾಗೂ ಕೈಗಾರಿಕಾ ಇಲಾಖೆಯ ವತಿಯಿಂದ ದೊರೆತ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದೇ ವೇಳೆ ವಿಸ್ಟ್ರಾನ್​ನಲ್ಲಿ ಮರು ನೇಮಕಾತಿಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ಕಂಪನಿಯಲ್ಲಿ ಉತ್ಪಾದನೆಗೆ ಬೇಕಾಗಿರುವ ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಉತ್ಪಾದನಾ ಕಾರ್ಯ ಸದ್ಯದಲ್ಲೇ ಪುನಾರಂಭವಾಗಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

wistron-resumes-production-in-few-days
ಸಚಿವರನ್ನು ಭೇಟಿ ಮಾಡಿದ ವಿಸ್ಟ್ರಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದಿಪ್ತೋ ಗುಪ್ತಾ ನೇತೃತ್ವದ ತಂಡ

ನಂತರ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌, ಅಂಥ ಘಟನೆ ನಡೆದಿದ್ದು ಬಹಳ ವಿಷಾದನೀಯ. ಆದರೆ, ಕೈಗಾರಿಕಾ ಸ್ನೇಹಿ ರಾಜ್ಯವಾಗಿರುವ ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ. ಆ ಘಟನೆಯ ನಂತರ ಮರು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿರುವುದು ಹಾಗೂ ಉತ್ಪಾದನೆ ಪುನಾರಂಭಕ್ಕೆ ಸಿದ್ದತೆ ನಡೆಸಿರುವುದು ಸಂತಸದ ವಿಷಯವಾಗಿದೆ. ರಾಜ್ಯ ಸರಕಾರ ಹಾಗೂ ಕೈಗಾರಿಕಾ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ಮುಂದುವರೆಸಲಾಗುವುದು ಎಂದರು.

ಅಲ್ಲದೆ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಉದ್ಯೋಗ ನೇಮಕಾತಿ ಮಾಡಿಕೊಳ್ಳುವ ಸಲಹೆಯನ್ನು ನೀಡಿದರು. ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ ಹಾಗೂ ವಿಸ್ಟ್ರಾನ್‌ ಕಂಪನಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.