ETV Bharat / city

ಬೆಂಗಳೂರಲ್ಲಿ ಪ್ರೀಡಂ ಪಾರ್ಕ್ ಹೊರತುಪಡಿಸಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ: ಹೈಕೋರ್ಟ್ ತಾಕೀತು..!

author img

By

Published : Aug 2, 2022, 9:15 AM IST

ಹೈಕೋರ್ಟ್
ಹೈಕೋರ್ಟ್

2022ರ ಮಾರ್ಚ್‌ 3ರಂದು ನ್ಯಾಯಾಲಯ ನೀಡಿರುವ ನಿರ್ದೇಶನ ಮತ್ತು 2021ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಆದೇಶ ಮಾಡಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಉಳಿದೆಡೆ ಎಲ್ಲಿಯೂ ಪ್ರತಿಭಟನೆ, ಹೋರಾಟ, ಧರಣಿ, ರ‍್ಯಾಲಿಗಳನ್ನು ನಡೆಸುವಂತಿಲ್ಲ. ಯಾವುದೇ ರಾಜಕೀಯ ಪಕ್ಷ ಮತ್ತು ರಾಜಕೀಯೇತರ ಸಂಘ ಸಂಸ್ಥೆಗಳಿಗೆ ಅನುಮತಿ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ. ಪ್ರತಿಭಟನೆ, ಮೆರವಣಿಗೆ, ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ, ನಿಯಮ ಕಡ್ಡಾಯವಾಗಿ ಪಾಲಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರವು ಪ್ರತಿಭಟನೆ, ಪ್ರದರ್ಶನ ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಪರವಾನಗಿ ಮತ್ತು ನಿಯಂತ್ರಣ ನಿಯಮ - 2021ವನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕು. ಇದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೈಕೋರ್ಟ್ ನಿರ್ದೇಶನದಲ್ಲಿ ತಿಳಿಸಿದೆ.

ಮೆರವಣಿಗೆ ಮತ್ತು ಪ್ರತಿಭಟನೆಗಳಂತಹ ಚಟುವಟಿಕೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದರಿಂದ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿ ಸೋಮವಾರ ಸರ್ಕಾರಕ್ಕೆ ಈ ಆದೇಶ ನೀಡುವ ಮೂಲಕ ಇತ್ಯರ್ಥ ಪಡಿಸಿತು.

ರಾಜ್ಯ ಸರ್ಕಾರ ಪರ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು ವಾದಿಸಿದರು. ಬೆಂಗಳೂರು ನಗರದಲ್ಲಿ ಪ್ರತಿಭಟನೆ ಹಾಗೂ ಧರಣಿಗಳನ್ನು ನಿಯಂತ್ರಣ ಮಾಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಕಾಯಿದೆ-1963ರ ಸೆಕ್ಷನ್ 31(1) ಅಡಿಯಲ್ಲಿ' ಪ್ರತಿಭಟನೆ, ಪ್ರದರ್ಶನ ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಪರವಾನಗಿ ಮತ್ತು ನಿಯಂತ್ರಣ ನಿಯಮಗಳನ್ನು ರೂಪಿಸಿ 2021ರಲ್ಲಿ ಸರ್ಕಾರ ಜಾರಿಗೊಳಿಸಿದೆ. ಇಲ್ಲಿಯತನಕ ನಿಯಮ ಉಲ್ಲಂಘಿಸಿದವರ ವಿರುದ್ಧ 27 ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ವಕೀಲರು ಮಾಹಿತಿ ನೀಡಿದರು.

ಸರ್ಕಾರದ ವಾದವನ್ನು ಆದೇಶದಲ್ಲಿ ದಾಖಲು ಮಾಡಿದ ಹೈಕೋರ್ಟ್, 2022ರ ಮಾರ್ಚ್‌ 3ರಂದು ನ್ಯಾಯಾಲಯ ನೀಡಿರುವ ನಿರ್ದೇಶನ ಮತ್ತು 2021ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಆದೇಶ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.