ETV Bharat / city

ಸೋಮವಾರ ಬೆಂಗಳೂರಿಗೆ ಮೋದಿ: ಈ ಮಾರ್ಗದಲ್ಲಿರುವ ಕಾಲೇಜುಗಳಿಗೆ ರಜೆ ಘೋಷಣೆ

author img

By

Published : Jun 19, 2022, 8:30 AM IST

ಸೋಮವಾರ ಬೆಂಗಳೂರಿಗೆ ಪ್ರಧಾನಿ ಮೋದಿ
ಸೋಮವಾರ ಬೆಂಗಳೂರಿಗೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಜೂನ್‌ 20-21 ರ ಎರಡು ದಿನ ರಾಜ್ಯ ಪವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಕಾರ್ಯಕ್ರಮಗಳ ವಿವರ ಇಲ್ಲಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಳೆ (ಸೋಮವಾರ) ನಗರಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭದ್ರತೆಯ ದೃಷ್ಠಿಯಿಂದ ಪ್ರಧಾನಿ ಸಂಚರಿಸಲಿರುವ ಮಾರ್ಗದಲ್ಲಿ ಬರುವ ನಗರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಇದರಂತೆ, ಪ್ರಧಾನಿ ಹಾದು ಹೋಗಲಿರುವ ಐಐಎಸ್ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜ್‌ಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ.

ಪ್ರಧಾನಿ ಪ್ರವಾಸ ವಿವರ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಜೂ.20ರಂದು ಬೆಳಗ್ಗೆ 11.45ಕ್ಕೆ ವಿಶೇಷ ವಿಮಾನದ ಮೂಲಕ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ. ಬಳಿಕ ಹೆಲಿಕ್ಯಾಪ್ಟರ್ ಮೂಲಕ ಕೊಮ್ಮಘಟ್ಟ​​ಗೆ ಬಂದು ಮಧ್ಯಾಹ್ನ 12.30 ರಿಂದ 1.45 ರವರೆಗೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಹಾಗೂ ರೈಲ್ವೆ ಸಂಚಾರ ಯೋಜನೆ ಮತ್ತು ಬಹು ಮಾದರಿ ಲಾಜಿಸ್ಟ್ರಿಕ್ ಪಾರ್ಕ್​ಗೆ ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ.

ಮಧ್ಯಾಹ್ನ 2.30 ರಿಂದ 3.30 ರವರೆಗೆ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಲ್ಪಟ್ಟ 150 ಐಟಿಐಗಳ ಲೋಕಾರ್ಪಣೆ ಮಾಡಿ, 4 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 5 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಐಐಎಸ್ ಹೆಚ್ ಎಕ್ಸಲೆನ್ಸ್ ಸೆಂಟರ್ ಲೋಕಾರ್ಪಣೆ ನಂತರ ವಿವಿಧ ಯೋಜನೆಗಳ ಫಲಾನುಭವಿಗಳ ಜೋತೆ ಸಂವಾದ ನಡೆಸಲಿದ್ದಾರೆ. ಸಂಜೆ 6.30ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ ವೇದ ಪಾಠಶಾಲಾ ಕಟ್ಟಡ ಉದ್ಘಾಟಿಸುವರು. ರಾತ್ರಿ 7:30 ರ ಸುಮಾರಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ನಂತರ ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಮೃತಪಟ್ಟ ನವೀನ್​ ಕುಟುಂಬಸ್ಥರ ಭೇಟಿ ಮಾಡಲಿದ್ದಾರೆ ಪ್ರಧಾನಿ

10 ಎಕರೆ ಪ್ರದೇಶದಲ್ಲಿ ಸಮಾವೇಶ: ಪ್ರಧಾನಿ ಜೂನ್ 20ರಂದು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಕ್ಕಾಗಿ ಸಿದ್ಧತಾ ಕಾರ್ಯ ಅಂತಿಮ ಹಂತದಲ್ಲಿದ್ದು, ಸುಮಾರು 33 ಎಕರೆ ವಿಸ್ತೀರ್ಣ ಹೊಂದಿರುವ ಕೊಮ್ಮಘಟ್ಟ ನೈಸ್ ಮೈದಾನದ 10 ಎಕರೆ ಪ್ರದೇಶದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಮುಖ್ಯ ವೇದಿಕೆ 140/140 ವಿಸ್ತೀರ್ಣ ಒಳಗೊಂಡಿದ್ದರೆ, 700/400 ವಿಸ್ತೀರ್ಣದಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.

ಸಿದ್ಧತೆಗೆ ಮಳೆ ಸಮಸ್ಯೆ: ಸಿದ್ಧತೆಗೆ ಮಳೆ ಅಡ್ಡಿಯಾಗಿದ್ದು ವೇದಿಕೆಯ ಮುಂದೆ ಕೆಸರುಗದ್ದೆ ಉಂಟಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನಿ ವೇದಿಕೆಗೆ ಬರಲು ಅನುವಾಗುವಂತೆ ಹೆಲಿಪ್ಯಾಡ್​ನಿಂದ ವೇದಿಕೆವರೆಗೂ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.