ETV Bharat / city

ಕಾವೇರಿ - ಪೆನ್ನಾರ್ ನದಿ ಜೋಡಣೆ ಕೇಂದ್ರದ ಏಕಮುಖ ನಿರ್ಧಾರ: ಸಿದ್ದರಾಮಯ್ಯ

author img

By

Published : Feb 4, 2022, 12:37 PM IST

Updated : Feb 4, 2022, 1:00 PM IST

ಪ್ರಧಾನಿ ಮೋದಿ ಒಕ್ಕೂಟ ವ್ಯವಸ್ಥೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಇದು ಸರ್ವಾಧಿಕಾರದ ಧೋರಣೆಯಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಈ ಸಂಬಂಧ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

former-cm-siddaramaiah-on-river-link-project
ಕಾವೇರಿ-ಪೆನ್ನಾರ್ ನದಿ ಜೋಡಣೆ ಕೇಂದ್ರದ ಏಕಮುಖ ನಿರ್ಧಾರ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರದ ಜೊತೆ ಚರ್ಚಿಸದೇ ಕಾವೇರಿ - ಪೆನ್ನಾರ್ ನದಿ ಜೋಡಣೆ ಯೋಜನೆ ಬಜೆಟ್‌ನಲ್ಲಿ ಘೋಷಿಸಿರುವುದು ಮೋದಿ ಸರ್ಕಾರದ ಸರ್ವಾಧಿಕಾರ ಧೋರಣೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಜೆಟ್​​ನಲ್ಲಿ ನಿರ್ಮಲಾ ಸೀತಾರಾಮನ್ ಪೆನ್ನಾರ್‌ - ಕಾವೇರಿ ನದಿ ಜೋಡಣೆ ಪ್ರಸ್ತಾಪ ಮಾಡಿದ್ದಾರೆ. 46,000 ಕೋಟಿ ರೂ. ಹಣವನ್ನು ಈ ಯೋಜನೆಗೆ ಇಡುತ್ತೇವೆ ಅಂದಿದ್ದಾರೆ.

ಇದು ಕಾರ್ಯಸಾಧು ಯೋಜನೆ ಅಲ್ಲ. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರಾಗಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಪ್ರಸ್ತಾಪ ‌ಮಾಡಿದ್ದಾರೆ ಅನ್ನಿಸುತ್ತದೆ. ಈ ಬಗ್ಗೆ ರಾಜ್ಯದವರ ಬಳಿ ಚರ್ಚೆ ಮಾಡಿದಂತೆ ಕಾಣುತ್ತಿಲ್ಲ ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ನ್ಯಾಷನಲ್ ವಾಟರ್ ಡೆವೆಲಪ್ಮೆಂಟ್ ಏಜೆನ್ಸಿಯಲ್ಲಿ ಒಂದು ಸಭೆ ನಡೆದಿದೆ.‌ ಅಲ್ಲಿ ನದಿ ಜೋಡಣೆ ಮಾಡಲು ತೀರ್ಮಾನ ಕೈಗೊಂಡಿದ್ದರು. 347 ಟಿಎಂಸಿ ನೀರು ಸಿಗುತ್ತದೆ. ಇದರಿಂದ ದಕ್ಷಿಣ ರಾಜ್ಯಗಳಿಗೆ ನೀರು ಕೊಡಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ರಾಜಸ್ತಾನ ಬಿಟ್ಟರೆ ಅತಿ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ ಸುಮಾರು ಶೇಕಡಾ 70ರಷ್ಟು ಒಣ ಭೂಮಿ ಇದೆ. ಕೇವಲ 30ರಷ್ಟು ನೀರಾವರಿ ಭೂಮಿ ಇದೆ. ಈ ನದಿ ಜೋಡಣೆಯಿಂದ ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಸರ್ವ ಪಕ್ಷ ಸಭೆ ಕರೆಯಬೇಕು: ಚರ್ಚೆ ಮಾಡದೇ ರಾಜ್ಯಗಳ ಸಮ್ಮತಿ ಪಡೆಯದೇ ಯೋಜನೆ ಅನುಷ್ಠಾನ ಮಾಡಿದರೆ ಅಂತಾರಾಜ್ಯ ಜಲ ಬಿಕ್ಕಟ್ಟು ಪ್ರಾರಂಭವಾಗುತ್ತದೆ. ಕೇಂದ್ರ ಸರ್ಕಾರವನ್ನು ಒತ್ತಾಯ ‌ಮಾಡುತ್ತೇನೆ. ಎಲ್ಲ ದಕ್ಷಿಣ ಭಾರತದ ರಾಜ್ಯಗಳನ್ನು ಕರೆಯಬೇಕು. ಸರ್ವ ಪಕ್ಷಗಳ ಸಭೆ ನಡೆಸಬೇಕು. ಎಲ್ಲ ರಾಜ್ಯಗಳ ಸಿಎಂಗಳ ಸಭೆ ನಡೆಸಿ, ಚರ್ಚೆ ಮಾಡಿ ಮಾಹಿತಿಯನ್ನು ಜನರ ಮುಂದೆ ಇಡಬೇಕು.

ನೀರಿನ ಲಭ್ಯತೆ ಎಷ್ಟಿದೆ?, ಯಾವ ರಾಜ್ಯಕ್ಕೆ ಎಷ್ಟು ನೀರು ಹೋಗುತ್ತದೆ? ಎಂಬ ಬಗ್ಗೆ ಮಾಹಿತಿ ನೀಡಬೇಕು. ಮೋದಿ ಒಕ್ಕೂಟ ವ್ಯವಸ್ಥೆ ವಿರುದ್ಧವಾಗಿ ನಡೆಯುತ್ತಾರೆ. ಇದು ಸರ್ವಾಧಿಕಾರದ ಧೋರಣೆಯಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಈ ಸಂಬಂಧ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಸರ್ವಾಧಿಕಾರಿ ಧೋರಣೆಗೆ ವಿರೋಧವಿದೆ: ಎಲ್ಲ ರಾಜ್ಯಗಳ ಸಭೆಯನ್ನ ಕರೆಯಬೇಕು. ಕರ್ನಾಟಕದಲ್ಲಿಯೇ ಸಭೆಯನ್ನ ಕರೆಯಬೇಕು. ಎಲ್ಲಾ ಮಾಹಿತಿಯನ್ನ ಜನರ ಮುಂದಿಡಬೇಕು. ಗೋದಾವರಿಯಿಂದ ಎಷ್ಟು?, ಕಾವೇರಿಯಿಂದ ಎಷ್ಟು?, ಪೆನ್ನಾರ್​ನಿಂದ ಎಷ್ಟು ನೀರು ಲಭ್ಯವಾಗಲಿದೆ?, ಯಾವ್ಯಾವ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಜನರಿಗೆ ತಿಳಿಸಬೇಕು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಏಕಮುಖವಾಗಿ ನಡೆದುಕೊಳ್ಳುವುದು ಸರಿಯಲ್ಲ. ಅದು ಸರ್ವಾಧಿಕಾರಿ ಧೋರಣೆಯಾಗಲಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಮುಂದಿನ ಚುನಾವಣೆಗೆ ಬೊಮ್ಮಾಯಿ ಅವರದ್ದೇ ನೇತೃತ್ವ: ಸಚಿವ ನಿರಾಣಿ

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಮುರಾರ್ಜಿ ದೇಸಾಯಿಯವರು ಇದನ್ನ ಚಿಂತಿಸಿದ್ದರು. ಗಂಗಾಕಾವೇರಿ ಜೋಡಣೆ ಬಗ್ಗೆ ಚರ್ಚಿಸಿದ್ದರು. ಗಂಗಾ, ಬ್ರಹ್ಮಪುತ್ರಾ, ಕಾವೇರಿ ಜೋಡಿಸಿದರೆ ಉತ್ತಮ. ಆಗ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ. ದಕ್ಷಿಣ ರಾಜ್ಯಗಳ ನದಿ ಜೋಡಣೆ ಪ್ರಸ್ತಾಪಿಸಿದ್ದಾರೆ. ಮೊದಲು ಉತ್ತರದ ಜೋಡಣೆ ಪ್ರಸ್ತಾಪಿಸಲಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.

ನದಿ ಜೋಡಣೆ ಮಾಡಿ ಎಂದು ಕೇಳಿದ್ದೇವಾ?. ನದಿ ಜೋಡಣೆ ಬಗ್ಗೆ ಸಂಸದರು ಮಾತನಾಡಿದ್ದಾರಾ?. ಸಂಸದರು ರಾಜ್ಯದ ಹಿತದ ಪ್ರಸ್ತಾಪ ಮಾಡಿದ್ದಾರಾ?. ಇವರು ಸಂಸದರಾಗಿ ಹೋಗಿರುವುದೇಕೆ?. ಈ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಬೇಕು. ರಾಜ್ಯ ಸರ್ಕಾರ ಕರೆದು ಚರ್ಚೆ ಮಾಡಬೇಕು. ರಾಜ್ಯಕ್ಕೆ ಲಾಭವೇ?, ನಷ್ಟವೇ? ಇದರ ಚರ್ಚೆಯಾಗಬೇಕು.

ಲಾಭ ಆದ್ರೆ ಎಷ್ಟು ನೀರು ಸಿಗಲಿದೆ ಚರ್ಚೆಯಾಗಬೇಕು?, ನಷ್ಟವಾದರೆ ಅದರ ಬಗ್ಗೆಯೂ ಮಾಹಿತಿ ಸಿಗಬೇಕು. ಆ ನಂತರ ಇದರ ಬಗ್ಗೆ ನಿರ್ಧಾರವಾಗಲಿ. ಚರ್ಚೆಯಾಗದೆ ಒಪ್ಪಿಗೆ ಕೊಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

Last Updated :Feb 4, 2022, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.