ETV Bharat / bharat

ಸ್ವಪ್ನಾ ಪಾಟ್ಕರ್ ಯಾರು? ಸಂಜಯ್ ರಾವತ್‌ಗೂ ಇವರಿಗೂ ಏನು ಸಂಬಂಧ?

author img

By

Published : Aug 1, 2022, 4:01 PM IST

ಶಿವಸೇನಾ ನಾಯಕ ಸಂಜಯ್‌ ರಾವತ್‌ ವಿರುದ್ಧ ಇಡಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಲು ಸ್ವಪ್ನಾ ಪಾಟ್ಕರ್‌ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹಾಗಾದರೆ, ರಾವತ್‌ಗೂ ಈ ಮಹಿಳೆಗೂ ಇರುವ ನಂಟೇನು? ಇಲ್ಲಿದ ಸಮಗ್ರ ಮಾಹಿತಿ.

ಸ್ವಪ್ನಾ ಪಾಟ್ಕರ್ ಯಾರು? ಸಂಜಯ್ ರಾವುತ್​ಗೆ ಏನು ಸಂಬಂಧ?
Who is Swapna Patkar? What is the relationship with Sanjay Raut?

ಮುಂಬೈ: ಶಿವಸೇನಾ ಮುಖಂಡ ಮತ್ತು ಸಂಸದ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಬಂಧಿಸಿದೆ. ಗೋರೆಗಾಂವ್​ನಲ್ಲಿನ ಪತ್ರಾ ಛಾಳ್ ಹಗರಣದಲ್ಲಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಸಂಜಯ್ ರಾವತ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಮುಖವಾಗಿ ಇಡಿಗೆ ಸ್ವಪ್ನಾ ಪಾಟ್ಕರ್ ನೀಡಿದ ಹೇಳಿಕೆಗಳೇ ಕಾರಣ ಎನ್ನಲಾಗಿದೆ.

ಸ್ವಪ್ನಾ ಪಾಟ್ಕರ್ ಅವರು ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆದಿದ್ದು, ಪತ್ರಾ ಛಾಳ್ ಪ್ರಕರಣದಲ್ಲಿ ಹೇಳಿಕೆ ನೀಡಿದ್ದಕ್ಕಾಗಿ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಸಂಜಯ್ ರಾವತ್ ಇದರ ಹಿಂದಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಕರಣದಲ್ಲಿ ಸಂಜಯ್ ರಾವತ್ ವಿರುದ್ಧ ವಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಪ್ನಾ ಪಾಟ್ಕರ್ 2015 ರಲ್ಲಿಯೇ ಸಂಜಯ್ ರಾವತ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ನಂತರ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಒಂದು ಕಾಲದಲ್ಲಿ ರಾವತ್ ಕುಟುಂಬದೊಂದಿಗೆ ಸ್ವಪ್ನಾ ತುಂಬಾ ತುಂಬಾ ಆತ್ಮೀಯರಾಗಿದ್ದರು. ನಂತರ ರಾವತ್ ಮತ್ತು ಅವರ ಕುಟುಂಬದ ಮಧ್ಯೆ ಕೆಲ ಕಾರಣಗಳಿಂದ ಮನಸ್ತಾಪ ಉಂಟಾಗಿತ್ತು.

ಮಾಧ್ಯಮದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, 2015 ರಲ್ಲಿ ಶಿವಸೇನೆ ಮುಖ್ಯಸ್ಥ ದಿವಂಗತ ಬಾಳಾಸಾಹೇಬ್ ಠಾಕ್ರೆ ಜೀವನ ಆಧಾರಿತ ಚಲನಚಿತ್ರ 'ಬಾಳಕಡು' ಚಲನಚಿತ್ರ ತೆರೆಗೆ ಬಂದಿತ್ತು. ಈ ಚಿತ್ರದ ನಿರ್ಮಾಪಕರಾಗಿದ್ದವರು ಡಾ.ಸ್ವಪ್ನಾ ಪಾಟ್ಕರ್. ಈಗ ಅದೇ ಡಾ. ಸ್ವಪ್ನಾ ಶಿವಸೇನಾ ಸಂಸದ ಸಂಜಯ್ ರಾವತ್ ವಿರುದ್ಧ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.

ಡಾ.ಸ್ವಪ್ನಾ ಪಾಟ್ಕರ್ ಅವರು ಪ್ರಧಾನಿಗೆ ಪತ್ರ ಬರೆದು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ತನ್ನನ್ನು ವಿದ್ಯಾವಂತ ಮಹಿಳೆ ಎಂದು ಕರೆದುಕೊಂಡಿರುವ ಆಕೆ, ತನಗೆ ನ್ಯಾಯ ಬೇಕು, ಸಹಾನುಭೂತಿ ಅಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಶಿವಸೇನೆಯ ಮುಖವಾಣಿ ಸಾಮ್ನಾ ಸಹ ಸಂಪಾದಕ ಸಂಜಯ್ ರಾವತ್ ಕಳೆದ 8 ವರ್ಷಗಳಿಂದ ತನ್ನ ಅಧಿಕಾರ ಬಳಸಿ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ ಎನ್ನುವುದು ಇವರ ಆರೋಪ.

ಹಲವಾರು ಪ್ರಕರಣಗಳಲ್ಲಿ ತಮ್ಮನ್ನು ವಿವಿಧ ಪೊಲೀಸ್ ಠಾಣೆಗಳಿಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು ಎಂದು ಪತ್ರದಲ್ಲಿ ಹೇಳಿದ್ದಾರೆ. ತನ್ನ ಸಂಬಂಧಿಕರೊಬ್ಬರನ್ನು ಶಿವಸೇನಾ ಭವನದ ಮೂರನೇ ಮಹಡಿಗೆ ಕರೆಸಿ ಥಳಿಸಿ ನನ್ನ ಜತೆಗಿನ ಸಂಬಂಧ ಕಡಿದುಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೆಲ್ಲ ಕೊನೆಗಾಣಿಸಲು 4 ಕೋಟಿ ರೂಪಾಯಿ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ ಎಂದು ಪಾಟ್ಕರ್‌ ತಿಳಿಸಿದ್ದಾರೆ.

ಡಾ. ಸ್ವಪ್ನಾ ಪಾಟ್ಕರ್ ಯಾರು?: ಡಾ. ಸ್ವಪ್ನಾ ಪಾಟ್ಕರ್ ಓರ್ವ ಮನೋವೈದ್ಯೆ. ರಾಯಲ್ ಮರಾಠಿ ಎಂಟರ್ಟೈನ್ಮೆಂಟ್ ಎಂಬ ಚಲನಚಿತ್ರ ನಿರ್ಮಾಣ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದಾರೆ. 2013 ರಲ್ಲಿ ಜೀವನ ಫಂಡಾ ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಸಹ ಬರೆದಿದ್ದಾರೆ. ಮೈಂಡ್ ವರ್ಕ್ಸ್ ಟ್ರೈನಿಂಗ್ ಸಿಸ್ಟಮ್ ಎಂಬ ಕೌನ್ಸೆಲಿಂಗ್ ಕ್ಲಿನಿಕ್ ಕೂಡಾ ಇವರದ್ದೇ. ಇಷ್ಟೇ ಅಲ್ಲ, ಮುಂಬೈನಲ್ಲಿ ಸ್ಯಾಫ್ರನ್ 12 ಎಂಬ ಫ್ಯಾಮಿಲಿ ರೆಸ್ಟೋರೆಂಟ್ ಹೊಂದಿದ್ದಾರೆ. ಮಾರ್ಚ್ 2013 ರಲ್ಲಿ ಇವರ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭಕ್ಕೆ ನಟ ಸಂಜಯ್ ದತ್, ಸಂಗೀತ ನಿರ್ದೇಶಕ ಬಪ್ಪಿ ಲಾಹಿರಿ, ಗಾಯಕ ಸುರೇಶ್ ವಾಡೇಕರ್, ಹಿರಿಯ ನಟರಾದ ದಿಲೀಪ್ ತಾಹಿಲ್ ಮತ್ತು ಮುರಳಿ ಶರ್ಮಾ ಮುಂತಾದವರು ಭಾಗವಹಿಸಿದ್ದರು. ಇನ್ನೊಂದು ಮಹತ್ವದ ಅಂಶವೆಂದರೆ, ಸಾಮ್ನಾದಲ್ಲಿ ಇವರು ಕಾರ್ಪೊರೇಟ್ ಮಂತ್ರಾ ಮತ್ತು ವಾರದ ವ್ಯಕ್ತಿ ಎಂಬ ಅಂಕಣಗಳನ್ನೂ ಬರೆಯುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.