ETV Bharat / bharat

ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡಲು ಪ್ರತಿಪಕ್ಷ ನಾಯಕರ ನಿರ್ಧಾರ, ಮುಂದಿನ ಸಭೆ ಶಿಮ್ಲಾದಲ್ಲಿ

author img

By

Published : Jun 23, 2023, 5:57 PM IST

Opposition parties vow to fight together in 2024 next meeting in Shimla
ಪ್ರತಿಪಕ್ಷ ನಾಯಕರಲ್ಲಿ ಒಗ್ಗಟ್ಟು, ಮುಂದಿನ ಸಭೆ ಶಿಮ್ಲಾದಲ್ಲಿ: ಮಲ್ಲಿಕಾರ್ಜುನ ಖರ್ಗೆ

ಪ್ರತಿಪಕ್ಷ ನಾಯಕರ ಮುಂದಿನ ಸಭೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿದ್ದು, ಅಲ್ಲಿ ಒಕ್ಕೂಟದ ಅಜೆಂಡಾ ತಯಾರಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಾಟ್ನಾ (ಬಿಹಾರ) : ಎಲ್ಲ ಪ್ರತಿಪಕ್ಷಗಳ ಮುಖಂಡರು ಒಗ್ಗಟ್ಟಾಗಿದ್ದಾರೆ ಹಾಗೂ ಮುಂದಿನ ಬಾರಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮತ್ತೊಂದು ಬಾರಿ ಸಭೆ ನಡೆಸಿ ನಮ್ಮ ಅಜೆಂಡಾ ರೂಪಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಶುಕ್ರವಾರ ಮಧ್ಯಾಹ್ನ ನಡೆದ ಬಹು ನಿರೀಕ್ಷಿತ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, "ಎಲ್ಲ ನಾಯಕರು ಒಗ್ಗಟ್ಟಾಗಿದ್ದು, ನಾವು ಸಾಮಾನ್ಯ ಕಾರ್ಯಸೂಚಿಯನ್ನು (ಅಜೆಂಡಾ) ಸಿದ್ಧಪಡಿಸುತ್ತಿದ್ದೇವೆ. ಜುಲೈ 12 ರಂದು ನಾವು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮತ್ತೆ ಸಭೆ ನಡೆಸುತ್ತೇವೆ. ಅಲ್ಲಿ ನಾವು ಕಾರ್ಯಸೂಚಿಯನ್ನು ತಯಾರಿಸಲಿದ್ದೇವೆ" ಎಂದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಘಟಿಸಿದ ಸಭೆಯಲ್ಲಿ 17 ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಧ್ಯಕ್ಷ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜೆಎಂಎಂ ನಾಯಕ ಹೇಮಂತ್ ಸೊರೆನ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ (ಪಿಡಿಪಿ), ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್), ಸಿಪಿಐ ನಾಯಕ ಡಿ ರಾಜಾ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಉತ್ತಮವಾಗಿ ನಡೆಯಿತು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣ್ಣಿಸಿದರು. ಕೆಲವು ದಿನಗಳ ನಂತರ ಮುಂದಿನ ಸಭೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆಸಲಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಾಟ್ನಾದಿಂದ ಏನೇ ಪ್ರಾರಂಭವಾದರೂ ಅದು ಸಾರ್ವಜನಿಕ ಚಳುವಳಿಯಾಗುತ್ತದೆ. ನಾವು ಒಗ್ಗಟ್ಟಾಗಿದ್ದೇವೆ, ನಾವು ಒಟ್ಟಾಗಿ ಹೋರಾಡುತ್ತೇವೆ ಮತ್ತು ನಾವು ದೇಶಕ್ಕಾಗಿ ಹೋರಾಡುತ್ತೇವೆ ಎಂಬ ಮೂರು ವಿಷಯಗಳ ಬಗ್ಗೆ ನಾವು ಒಮ್ಮತರಾಗಿದ್ದೇವೆ. ಬಿಜೆಪಿಯು ಇತಿಹಾಸವನ್ನು ಬದಲಾಯಿಸಬೇಕೆಂದು ಬಯಸುತ್ತದೆ ಮತ್ತು ಬಿಹಾರದಿಂದ ಇತಿಹಾಸವನ್ನು ಉಳಿಸಬೇಕೆಂದು ನಾವು ಬಯಸುತ್ತೇವೆ. ಈ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಹೋರಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮಾಜಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾತನಾಡಿ, ದೇಶವನ್ನು ವಿನಾಶದಿಂದ ರಕ್ಷಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರಲು ವಿರೋಧ ಪಕ್ಷಗಳು ಒಂದಾಗಿವೆ ಎಂದು ಹೇಳಿದರು. ನಾನು ಮತ್ತು ಮೆಹಬೂಬಾ ಮುಫ್ತಿ ಈ ದೇಶದಲ್ಲಿ ಪ್ರಜಾಪ್ರಭುತ್ವ ಕೊಲೆಯಾದ ಭಾಗಕ್ಕೆ ಸೇರಿದವರು. ನಿನ್ನೆ ಅಮೆರಿಕಾದಲ್ಲಿ ಶ್ವೇತಭವನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಗಳು ನಡೆದಿವೆ. ಈ ಪ್ರಜಾಪ್ರಭುತ್ವವು ಜಮ್ಮು ಮತ್ತು ಕಾಶ್ಮೀರವನ್ನು ಏಕೆ ತಲುಪುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಈಜಿಪ್ಟ್​ ಪ್ರವಾಸ ನಾಳೆಯಿಂದ: 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.