ETV Bharat / bharat

ಕೇಂದ್ರ ಬಜೆಟ್​ 2023: ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ.. ಬಹುನಿರೀಕ್ಷಿತ ಯೋಜನೆ ಬಗ್ಗೆ ತಿಳಿಯಿರಿ

author img

By

Published : Feb 1, 2023, 11:38 AM IST

Updated : Feb 1, 2023, 6:01 PM IST

ಕೇಂದ್ರ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಮೀಸಲು.. 5300 ಕೋಟಿ ಅನುದಾನ..

Economic Survey 2022 23 Highlights
Economic Survey 2022 23 Highlights

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023 ಸಾಲಿನ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಬಾರಿ ಕರ್ನಾಟಕಕ್ಕೆ ಭಾರಿ ಗಿಫ್ಟ್​ ನೀಡಿದೆ. ಮಧ್ಯ ಕರ್ನಾಟಕಕ್ಕೆ ನೀರುಣಿಸುವ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಗಲು ಇನ್ನೊಂದು ಮೆಟ್ಟಿಲು ಬಾಕಿ ಇರುವಂತೆಯೇ ಕೇಂದ್ರದ ಬಜೆಟ್​​ನಲ್ಲಿ 5300 ಕೋಟಿ ರೂ.ಗಳ ಅನುದಾನ ಪ್ರಕಟಿಸಿದೆ. ಚುನಾವಣೆಗೂ ಮುನ್ನ ರಾಜ್ಯದ ಪ್ರಮುಖ ನೀರಾವರಿ ಯೋಜನೆಗೆ ಭರ್ಜರಿ ಕೊಡುಗೆ ಸಿಕ್ಕಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ನೀರಾವರಿ ಯೋಜನೆಗೆ ಭರ್ಜರಿ ಕೊಡುಗೆ ನೀಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ರೂ.ಗಳ ಅನುದಾನವನ್ನು ಪ್ರಕಟಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿವರ್ತಿಸುವ ಕುರಿತ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಮಾತ್ರ ಬಾಕಿ ಇದೆ. ಭದ್ರಾ ಮೇಲ್ದಂಡೆ ಯೋಜನೆಯ 16 ಸಾವಿರ ಕೋಟಿ ವೆಚ್ಚದ ಕೆಲಸ ಬಾಕಿ ಇದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದ ಬಳಿಕ ಉಳಿಯುವ ಒಟ್ಟು ಕಾಮಗಾರಿಯ ವೆಚ್ಚದಲ್ಲಿ ಶೇ 60ರಷ್ಟನ್ನು ಕೇಂದ್ರ ಸರ್ಕಾರವೇ ನೀಡುತ್ತದೆ. ಕೇಂದ್ರದಿಂದ ಸುಮಾರು 5,300 ಕೋಟಿ ಸಿಗುವ ನಿರೀಕ್ಷೆ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಈ ಹಿಂದೆ ಹೇಳಿದ್ದರು. ಅದರಂತೆ ಇಂದು ಕೇಂದ್ರದ ಬಜೆಟ್​ನಲ್ಲಿ 5,300 ಕೋಟಿ ರೂ‌.ಅನುದಾನ ಒದಗಿಸಲಾಗಿದೆ. ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್​ ಮಾಡಿ ಮಧ್ಯ ಕರ್ನಾಟಕ ಭಾಗದ ಬರಪೀಡಿತ ಜಿಲ್ಲೆಗಳಿಗೆ ವರದಾನವಾಗಲಿದೆ ಎಂದು ಹೇಳಿದೆ.

  • ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ @nsitharaman ಘೋಷಿಸಿದ್ದಾರೆ. ಇದರಿಂದ ಯೋಜನೆಗೆ ಮತ್ತಷ್ಟು ಬಲ ಬರಲಿದ್ದು, ಮಧ್ಯ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ವರದಾನವಾಗಲಿದೆ. ಅಲ್ಲದೆ ಯೋಜನೆಯನ್ನು ತ್ವರಿತವಾಗಿ ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.#AmritKaalBudget

    — BJP Karnataka (@BJP4Karnataka) February 1, 2023 " class="align-text-top noRightClick twitterSection" data=" ">

ಏನಿದು ಭದ್ರಾ ಮೇಲ್ದಂಡೆ ಯೋಜನೆ?: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತದಲ್ಲಿ 17.40 ಟಿಎಂಸಿ ನೀರನ್ನು ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಭದ್ರಾ ನದಿಗೆ ಹರಿಸಲಾಗುತ್ತದೆ. ನಂತರ ಭದ್ರಾ ನದಿಯಿಂದ 29.9 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಹರಿಸಲಾಗುತ್ತದೆ. ಈ ಯೋಜನೆಯಿಂದ 2.25 ಲಕ್ಷ ಹೆಕ್ಟರ್ ಕೃಷಿ ಭೂಮಿಯನ್ನು ನೀರಾವರಿ ಯೋಜನೆಗೆ ಒಳಪಡಿಸುವ ಗುರಿಯನ್ನು ಗೊಂದಲಾಗಿದೆ. ಭದ್ರ ಮೇಲ್ದಂಡೆ ಯೋಜನೆಯ ಮೂಲಕ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿನ ಬರಪೀಡಿತ ಪ್ರದೇಶದ 367 ಕೆರೆಗಳನ್ನ ಭರ್ತಿ ಮಾಡುವ ಯೋಜನೆಯು ಸಹ ಇದಾಗಿದೆ.

ಖರೀಪ್​ ಬೆಳೆಗಳಿಗೆ ಸುಸ್ಥಿರ ನೀರಾವರಿ, 367 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ. 50ರಷ್ಟನ್ನು ತುಂಬಿಸುವ ಮೂಲಕ ಈ ನಾಲ್ಕು ಜಿಲ್ಲೆಗಳ ತಾಲೂಕುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲಮಟ್ಟ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲೂಕಿನ ಲಕ್ಕವಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆಯ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರು ಉಣಿಸುವುದು ಯೋಜನೆಯ ಉದ್ದೇಶ. ಹನಿ ನೀರಾವರಿ ಮೂಲಕ ನೀರು ಒದಗಿಸುವ ರಾಜ್ಯದ ಬಹುದೊಡ್ಡ ನೀರಾವರಿ ಯೋಜನೆ ಇದಾಗಿದೆ. ಯಾವುದೇ ಅಣೆಕಟ್ಟು ನಿರ್ಮಿಸದೆ ಭಾರೀ ಪ್ರಮಾಣದ ನೀರು ಹಂಚಿಕೆ ಮಾಡಿ ರೂಪಿಸಿದ ಯೋಜನೆ ಇದಾಗಿದೆ. ಯೋಜನೆಗೆ 21,450 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 16,125 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ. ರಾಷ್ಟ್ರೀಯ ಯೋಜನೆ ಘೋಷಣೆಯಾದ ಹಿನ್ನೆಲೆ 2018-19ನೇ ಸಾಲಿನ ನಂತರದ ವೆಚ್ಚವನ್ನೂ ಕೇಂದ್ರವೇ ನೀಡಲಿದೆ. ಹನಿ ನೀರಾವರಿಯ ಲ್ಯಾಟ್ರಲ್‌ಗಾಗಿ ಆಗುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ಯೋಜನೆ ಸಾಗಿ ಬಂದ ಹಾದಿ: 2003ರಲ್ಲಿ ರೂಪುಗೊಂಡ ಯೋಜನೆಗೆ 2 ಸಾವಿರ ಕೋಟಿ ಮೀಸಲಿಡಲಾಯಿತು. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ಅಧ್ಯಯನ ನಡೆಸಿ 2004ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಪರಿಷ್ಕೃತ ಯೋಜನೆಗೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ, 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತು. 2015ರಲ್ಲಿ ಮತ್ತೆ ಪರಿಷ್ಕರಣೆ ಮಾಡಿ 12,340 ಕೋಟಿ ಅಂದಾಜು ವೆಚ್ಚ ತಯಾರಿಸಲಾಯಿತು. ಮತ್ತೆ ಯೋಜನೆ ವಿಸ್ತಾರಗೊಂಡು ವೆಚ್ಚವು 21 ಸಾವಿರ ಕೋಟಿಗೆ ಏರಿಕೆ ಆಯಿತು. ಯೋಜನೆ ಆರಂಭವಾದಾಗಿನಿಂದ ಈವರೆಗೆ 4,866 ಕೋಟಿ ವೆಚ್ಚವಾಗಿದೆ. ಈ ಯೋಜನೆಗೆ 21473.67 ಕೋಟಿಗಳ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.

ಮೊದಲ ಹಂತದ ಯೋಜನೆ:

ಪ್ಯಾಕೇಜ್-I: ತುಂಗಾ ನದಿಯಿಂದ17.40 ಟಿ.ಎಂ.ಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ನೀರು ಹರಿಸುವ, ಕಾಮಗಾರಿ ಪ್ರಗತಿಯಲ್ಲಿದೆ.

ಪ್ಯಾಕೇಜ್-II: ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.

ಪ್ಯಾಕೇಜ್-III: ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.

ಎರಡನೇ ಹಂತ ಯೋಜನೆ:

ತರೀಕೆರೆ ಏತ ನೀರಾವರಿ: ತರೀಕೆರೆ ತಾಲ್ಲೂಕಿನ 20,150 ಹೇಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಮೂಲಕ ನೀರನ್ನು ಒದಗಿಸುವುದು ಹಾಗೂ 79 ಕೆರೆಗಳನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು02 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಚಿತ್ರದುರ್ಗ ಶಾಖಾ ಕಾಲುವೆ: 134.597 ಕಿ.ಮೀ ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 1,07,265 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ157 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು12 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ತುಮಕೂರು ಶಾಖಾ ಕಾಲುವೆ:159.684 ಕಿ.ಮೀ. ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 84,900 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ131 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು09 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಹನಿ ನೀರಾವರಿ: ಚಿತ್ರದುರ್ಗ ಶಾಖಾ ಕಾಲುವೆಯ 40749 ಹೆ. ಪ್ರದೇಶಕ್ಕೆ, ತುಮಕೂರು ಶಾಖಾ ಕಾಲುವೆಯಡಿ 27590 ಹೆ. ಪ್ರದೇಶಕ್ಕೆ ಮತ್ತು ಜಗಳೂರು ಶಾಖಾ ಕಾಲುವೆಯಡಿ 24123 ಹೆ. ಪ್ರದೇಶಕ್ಕೆ ಹನಿ ನೀರವಾರಿ ಸೌಲಭ್ಯ ಕಲ್ಪಿಸುವ ಮತ್ತು ಕೆರೆ ತುಂಬಿಸುವ ಕಾಮಗಾರಿಗಳನ್ನು 07 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಕೆರೆ ತುಂಬಿಸುವ ಕಾಮಗಾರಿಗಳು: ಚಿತ್ರದುರ್ಗ ಶಾಖಾ ಕಾಲುವೆಯಿಂದ ಕವಲೊಡೆಯುವ ಹೊಳಲ್ಕೆರೆ, ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಹಾಗೂ ತುಮಕೂರು ಶಾಖಾ ಕಾಲುವೆಯಿಂದ ಕವಲೊಡೆಯುವ ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಫಿಡರ್ ಕಾಮಗಾರಿಗಳನ್ನು 09 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಓದಿ: LIVE.. ಕೇಂದ್ರ ಬಜೆಟ್​: ರೈಲ್ವೆಗೆ ಬಂಪರ್​ ಕೊಡುಗೆ

Last Updated :Feb 1, 2023, 6:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.