ETV Bharat / bharat

ನಿಶ್ಚಿತಾರ್ಥ ಸಂಬಂಧ ಬೆಳೆಸಲು ಲೈಸೆನ್ಸ್​ ಅಲ್ಲ.. ನವವಧು ಜತೆ ಲೈಂಗಿಕತೆ ಅತ್ಯಾಚಾರವಾಗುತ್ತೆ: ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು

author img

By

Published : Oct 6, 2022, 8:40 PM IST

ನಿಶ್ಚಿತಾರ್ಥ ಮಾಡಿಕೊಂಡಾಕ್ಷಣ ಭಾವಿ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಬೆಳಸಲು ಅನುಮತಿ ಎಂದು ಭಾವಿಸಕೂಡದು. ಹಾಗೊಂದು ವೇಳೆ ವಧುವಿಗೆ ಇಷ್ಟ ಇಲ್ಲದೇ ಸಂಬಂಧ ಬೆಳೆಸಿದರೆ ಅದು ಅತ್ಯಾಚಾರವಾಗಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ನಿಶ್ಚಿತಾರ್ಥ ಮಾಡಿಕೊಳ್ಳುವುದನ್ನು ಯಾರಾದರೂ ಆಕ್ರಮಣ ಮಾಡಲು ಅಥವಾ ವಧುವಿನ ಜೊತೆ ಸಂಬಂಧವನ್ನು ಹೊಂದಲು ಅನುಮತಿಸಿದಂತೆ ಎಂದು ಅರ್ಥೈಸುವುದಲ್ಲ. ಇಂತಹದ್ದೇ ಪ್ರಕರಣವೊಂದರ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್​ ಇಂತಹ ಹೇಳಿಕೆ ನೀಡಿದೆ. ಅಷ್ಟೇ ಅಲ್ಲ ಜಾಮೀನು ಅರ್ಜಿ ಸಲ್ಲಿಸಿದ ಯುವಕ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

physical-relationship-with-fiancee-will-be-treated-
ನಿಶ್ಚಿತಾರ್ಥ ಸಂಬಂಧ ಬೆಳೆಸಲು ಲೈಸೆನ್ಸ್​ ಅಲ್ಲ

ನವದೆಹಲಿ: ನಿಶ್ಚಿತಾರ್ಥದ ನಂತರ ಯುವಕನೊಬ್ಬ ಭಾವಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಯುವಕನ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಈ ಸಂಬಂಧದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​, ನಿಶ್ಚಿತಾರ್ಥವಾದ ಮಾತ್ರಕ್ಕೆ ಭಾವಿ ಪತ್ನಿ ಅಥವಾ ಮದುವೆಯಾಗಲಿರುವ ಯುವತಿಯೊಂದಿಗೆ ಸಂಬಂಧ ಹೊಂದಲು ಅಥವಾ ಹಲ್ಲೆ ಮಾಡಲು ಅನುಮತಿ ಇದೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವರ್ಣಾ ಕಾಂತ್ ಶರ್ಮಾ, ಮದುವೆಯನ್ನು ನಿಶ್ಚಯಿಸಿರುವುದರಿಂದ ಎರಡೂ ಕಡೆಯವರು ಒಪ್ಪಿಗೆ ನೀಡುವ ಸಾಧ್ಯತೆ ಇರುತ್ತದೆ ಎಂದೇ ಭಾವಿಸಲಾಗುತ್ತದೆ. ಆದರೆ ನಿಶ್ಚಿತಾರ್ಥದ ನಂತರ ಲೈಂಗಿಕವಾಗಿ ಬಳಸಿಕೊಳ್ಳುವ ಹಾಗೂ ಆಕೆಯ ಮೇಲೆ ಹಕ್ಕು ಸಾಧಿಸುವ ಯಾವುದೇ ಹಕ್ಕನ್ನು ವರನಿಗೆ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿ, ಮದುವೆ ನಿರಾಕರಣೆ: ಹುಡುಗ - ಹುಡುಗಿ ಒಂದು ವರ್ಷ ಸಂಬಂಧ ಹೊಂದಿದ್ದರು. ಅಕ್ಟೋಬರ್​​ ಟಟ ರಂದು ಪರಸ್ಪರ ಮನೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾದ ನಾಲ್ಕು ದಿನಗಳ ಬಳಿಕ ಯುವಕ, ಯುವತಿಯೊಂದಿಗೆ ಬಲವಂತದ ಲೈಂಗಿಕ ಸಂಪರ್ಕ ಕೂಡಾ ಮಾಡಿದ್ದ. ಈ ಸಂದರ್ಭದಲ್ಲಿ ಯುವಕ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವುದರಿಂದ ಶೀಘ್ರವೇ ಮದುವೆ ಮಾಡಿಕೊಳ್ಳುತ್ತಿದ್ದೇವೆ ಏನೂ ಆಗುವುದಿಲ್ಲ ಎಂದು ವಧುವನ್ನು ಒಪ್ಪಿಸಿದ್ದ.

ಇದಾದ ಬಳಿಕ ಯುವಕ ಯುವತಿಯೊಂದಿಗೆ ಹಲವು ಬಾರಿ ಮಿಲನ ಕ್ರಿಯೆ ನಡೆಸಿದ್ದ. ಹೀಗಾಗಿ ಯುವತಿ ಗರ್ಭಿಣಿಯಾಗಿದ್ದಳು. ಈ ವಿಚಾರ ಗೊತ್ತಾಗಿ ಯುವಕ ಗರ್ಭಪಾತಕ್ಕೆ ಮಾತ್ರೆಗಳನ್ನೂ ನೀಡಿದ್ದಾನೆ. ಇದಾದ ಬಳಿಕ 9 ಜುಲೈ 2022 ರಂದು ಯುವತಿ ಯುವಕನ ಮನೆಗೆ ಹೋದಾಗ ಈ ಎಲ್ಲ ವಿಚಾರ ಮನೆಯವರಿಗೆ ಗೊತ್ತಾಗಿ, ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಅನಿವಾರ್ಯವಾಗಿ ಜುಲೈ 16 ರಂದು ದಕ್ಷಿಣ ದೆಹಲಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಜುಲೈ 22ರಂದು ಯುವಕನನ್ನು ಬಂಧಿಸಿದ್ದರು.

ಯುವಕನ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ: ಈ ಪ್ರಕರಣದಲ್ಲಿ ಜುಲೈ 16 ರಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸೆಪ್ಟೆಂಬರ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದಾದ ಬಳಿಕ ಪ್ರಕರಣ ಕೋರ್ಟ್​​​​​ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ವೇಳೆ ಮಹಿಳೆ ಯಾವುದೇ ಸಾಕ್ಷ್ಯ ಪ್ರಸ್ತುತಪಡಿಸಿಲ್ಲ ಎಂದು ಪ್ರತಿವಾದಿ ವಕೀಲರು ಆರೋಪಿಸಿದ್ದರು.

ಈ ನಡುವೆ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದರೆ ಆರೋಪಗಳನ್ನು ನ್ಯಾಯಾಲಯವು ಇನ್ನೂ ನಿರ್ಧರಿಸಿಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರ್ಟ್​ಗೆ ಮನವಿ ಮಾಡಲಾಗಿದೆ. ಪ್ರಾಸಿಕ್ಯೂಷನ್​ನ ಈ ಮನವಿಯನ್ನು ಒಪ್ಪಿಕೊಂಡ ನ್ಯಾಯಾಲಯ, ಯುವಕನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಇದಕ್ಕೂ ಮೊದಲು ಸೆಷನ್ಸ್​ ಕೋರ್ಟ್​​ ಯುವಕ ಸಲ್ಲಿಸಿದ್ದ ಎರಡು ಪ್ರತ್ಯೇಕ ಜಾಮೀನು ಅರ್ಜಿಗಳನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಯುವಕ ಜಾಮೀನಿಗಾಗಿ ಹೈಕೋರ್ಟ್​ ಕದ ತಟ್ಟಿದ್ದ. ಇದೀಗ ಹೈಕೋರ್ಟ್​ನಲ್ಲೂ ಜಾಮೀನು ಅರ್ಜಿ ವಜಾಗೊಂಡಿದೆ.

ಇದನ್ನು ಓದಿ:ಸರ್ಕಾರಿ ನೌಕರ ಮತ್ತು ಸಹಚರರಿಂದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.