ETV Bharat / bharat

ಸಂಸತ್ ಭದ್ರತಾ ಲೋಪ ಪ್ರಕರಣ: ಮತ್ತಿಬ್ಬರು ವಶಕ್ಕೆ, ಲಲಿತ್​ ಝಾಗೆ ಪೊಲೀಸ್​ ಕಸ್ಟಡಿ

author img

By ETV Bharat Karnataka Team

Published : Dec 15, 2023, 5:21 PM IST

Parliament security breach case: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಆರೋಪಿ ಲಲಿತ್​ ಝಾನನ್ನು ಕೋರ್ಟ್ ಏಳು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದೆ.

Parliament security breach case: Two more detained, police likely to recreate crime scene today
ಸಂಸತ್ತಿನ ಭದ್ರತಾ ಲೋಪ ಪ್ರಕರಣ: ಮತ್ತಿಬ್ಬರು ವಶಕ್ಕೆ, ಲಲಿತ್​ ಝಾಗೆ ಪೊಲೀಸ್​ ಕಸ್ಟಡಿ

ನವದೆಹಲಿ: ನೂತನ ಸಂಸತ್ ಭವನದಲ್ಲಿ ಬುಧವಾರ ಉಂಟಾದ ಭದ್ರತಾ ಲೋಪ ಪ್ರಕರಣ ಸಂಬಂಧ ಮತ್ತಿಬ್ಬರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಹೇಶ್​ ಮತ್ತು ಕೈಲಾಶ್​ ಎಂದು ಗುರುತಿಸಲಾಗಿದೆ. ಈ ಪೈಕಿ ಮಹೇಶ್​ ಗುರುವಾರ ರಾತ್ರಿ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣದ ಮಾಸ್ಟರ್​ ಮೈಂಡ್​ ಎನ್ನಲಾದ ಲಲಿತ್​ ಝಾನನ್ನು ಇಂದು ಪೊಲೀಸರು ಪಟಿಯಾಲ ಹೌಸ್​ ಕೋರ್ಟ್​ಗೆ ಹಾಜರುಪಡಿಸಿದ್ದು, ಕೋರ್ಟ್ ಏಳು ದಿನಗಳ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದೆ.

ಲೋಕಸಭೆ ಕಲಾಪದ ವೇಳೆ ವೀಕ್ಷಕರ ಗ್ಯಾಲರಿಯಿಂದ ಮೈಸೂರಿನ ಮನೋರಂಜನ್​ ಹಾಗೂ ಉತ್ತರ ಪ್ರದೇಶದ ಸಾಗರ್​ ಶರ್ಮಾ ಎಂಬಿಬ್ಬರು ಸಂಸದರ ನಡುವೆ ಜಿಗಿದು ಹಳದಿ ಬಣ್ಣದ ಸ್ಪ್ರೆ ಎರಚಿ ಆತಂಕ ಸೃಷ್ಟಿಸಿದ್ದರು. ಇದೇ ಸಮಯದಲ್ಲಿ ಮಹಾರಾಷ್ಟ್ರದ ಅಮೋಲ್​ ಶಿಂಧೆ ಹಾಗೂ ಹರಿಯಾಣದ ನೀಲಂ ದೇವಿ ಸಂಸತ್ತಿನ ಆವರಣದಲ್ಲಿ ಘೋಷಣೆಗಳನ್ನು ಕೂಗಿ ಕೋಲಾಹಲ ಉಂಟುಮಾಡಿದ್ದರು. ಈಗಾಗಲೇ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಇವರನ್ನೂ ಏಳು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಸಂಸತ್ ಭವನದ ಭದ್ರತಾ ಲೋಪ ಪ್ರಕರಣ: 7 ದಿನ ಪೊಲೀಸ್ ಕಸ್ಟಡಿಗೆ ನಾಲ್ವರು ಆರೋಪಿಗಳು

ಮತ್ತೊಂದೆಡೆ, ಪ್ರಕರಣದ ಮಾಸ್ಟರ್​ ಮೈಂಡ್​ ಎನ್ನಲಾದ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಿವಾಸಿ, ಬಿಹಾರದ ಮೂಲದ ಲಲಿತ್​ ಝಾ ಗುರುವಾರ ರಾತ್ರಿ ತಾನಾಗಿಯೇ ದೆಹಲಿಯ ಕರ್ತವ್ಯ ಪಥ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಝಾ ಜೊತೆಗೆ ಮಹೇಶ್​ ಕೂಡ ಬಂದು ಶರಣಾಗಿದ್ದಾನೆ. ಈ ವೇಳೆ, ವಿಶೇಷ ಪೊಲೀಸ್​ ಘಟಕವು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಆರೋಪಿಗಳ ವಿಚಾರಣೆ ಬಳಿಕ ಲಲಿತ್​ ಝಾನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮಹೇಶ್‌ನನ್ನು ತಮ್ಮ ವಶದಲ್ಲಿರಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇವರ ವಿಚಾರಣೆಯ ಸಮಯದಲ್ಲೇ ಕೈಲಾಶ್‌ ಹೆಸರು ಬಹಿರಂಗವಾಗಿದ್ದು, ಇದರಿಂದ ಆತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಪೊಲೀಸರಿಗೆ ಶರಣಾಗುವ ಮುನ್ನ ಲಲಿತ್​ ಝಾ ಬಸ್​ನಲ್ಲಿ ರಾಜಸ್ಥಾನಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ. ಅಲ್ಲದೇ, ದೆಹಲಿಗೆ ಮರಳುವ ಮೊದಲು ತನ್ನ ಮೊಬೈಲ್​ ಫೋನ್​ ನಾಶ ಮಾಡಿರುವ ಶಂಕೆಯೂ ಇದೆ. ಸದ್ಯಕ್ಕೆ ಪೊಲೀಸ್​ ವಿಶೇಷ ಘಟಕವು ಭದ್ರತಾ ಲೋಪದ ಘಟನೆ ದೃಶ್ಯಗಳನ್ನು ಮರುಸೃಷ್ಟಿಸಲು ಮುಂದಾಗಿದೆ ಎಂದೂ ಮೂಲಗಳು ಹೇಳಿವೆ.

ಕಲಾಪಕ್ಕೆ ನುಗ್ಗಿದ ಪ್ರಮುಖ ಆರೋಪಿಗಳಾದ ಮನೋರಂಜನ್​, ಸಾಗರ್​ ಶರ್ಮಾ ಮತ್ತು ಲಲಿತ್​ ಝಾ ಸೇರಿ ಐವರ ವಿರುದ್ಧ ವಿವಿಧ ಕಠಿಣ ಸೆಕ್ಷನ್​ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾನೂನಾಗಿರುವ ಯುಎಪಿಎಯ ಸೆಕ್ಷನ್ 16 (ಭಯೋತ್ಪಾದನೆ), 18 (ಭಯೋತ್ಪಾದನೆಗೆ ಪಿತೂರಿ) ಮತ್ತು ಐಪಿಸಿ ಸೆಕ್ಷನ್​ಗಳಾದ 120-ಬಿ (ಕ್ರಿಮಿನಲ್​ ಪಿತೂರಿ), 452 (ಅತಿಕ್ರಮಣ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ), 186 (ಸಾರ್ವಜನಿಕ ಸೇವಕರಿಗೆ ಅಡ್ಡಿ) ಮತ್ತು 353 (ಸಾರ್ವಜನಿಕ ಸೇವಕರ ಮೇಲೆ ಹಲ್ಲೆ) ಅಡಿ ಮೊಕದ್ದಮೆಗಳನ್ನು ಹೂಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೋಲ್ಕತ್ತಾಕ್ಕೂ ಸಂಸತ್ತಿನ ಭದ್ರತಾ ಲೋಪ ಪ್ರಕರಣದ ನಂಟು: ದೆಹಲಿ ಪೊಲೀಸರಿಗೆ 'ಮಾಸ್ಟರ್ ಮೈಂಡ್' ಲಲಿತ್ ಝಾ ಶರಣಾಗತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.