ETV Bharat / bharat

G20: ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕೆ ಜಾಗತಿಕ ವೇದಿಕೆ ರಚಿಸಲು ಭಾರತದ ಒತ್ತಾಯ

author img

By ETV Bharat Karnataka Team

Published : Sep 7, 2023, 4:38 PM IST

G20 summit: India to push for strict global action against fugitives, economic offenders
G20 summit: India to push for strict global action against fugitives, economic offenders

ದೇಶಭ್ರಷ್ಟರು ಮತ್ತು ಆರ್ಥಿಕ ಅಪರಾಧಿಗಳ ವಿರುದ್ಧ ಜಾಗತಿಕ ಜಂಟಿ ವೇದಿಕೆಯೊಂದನ್ನು ರೂಪಿಸಲು ಭಾರತ ಒತ್ತಾಯಿಸಿದೆ. ಈ ಬಗ್ಗೆ ಈಟಿವಿ ಭಾರತ್​​ನ ಗೌತಮ್ ದೇಬ್ರಾಯ್ ಅವರ ವರದಿ ಇಲ್ಲಿದೆ.

ನವದೆಹಲಿ: ವಿದೇಶಗಳಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು, ಅವರನ್ನು ಹಸ್ತಾಂತರಿಸಲು ಮತ್ತು ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಪತ್ತೆಹಚ್ಚಲು ಸಾಮಾನ್ಯ ವೇದಿಕೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಿ 20 ನಾಯಕರನ್ನು ಒತ್ತಾಯಿಸಲು ಕೇಂದ್ರ ಸರ್ಕಾರ ಕಾರ್ಯತಂತ್ರವೊಂದನ್ನು ರೂಪಿಸಿದೆ. ಈ ಕಾರ್ಯತಂತ್ರವು ಎಲ್ಲ ಜಿ 20 ನಾಯಕರ ಬೆಂಬಲ ಪಡೆದದ್ದೇ ಆದಲ್ಲಿ ವಿಜಯ್ ಮಲ್ಯ, ನೀರವ್ ಮೋದಿ, ಜುನೈದ್ ಇಕ್ಬಾಲ್ ಮೆಮನ್ ಮತ್ತು ಅಭಿಜಿತ್ ಅಸೋಮ್ ಅವರಂತಹ ಹಲವಾರು ದೇಶಭ್ರಷ್ಟ ಮತ್ತು ಆರ್ಥಿಕ ಅಪರಾಧಿಗಳನ್ನು ಮರಳಿ ಕರೆತರಲು ಭಾರತಕ್ಕೆ ಅನುವು ಮಾಡಿಕೊಡಲಿದೆ.

ತಾವು ವಾಸಿಸುತ್ತಿರುವ ದೇಶದಲ್ಲಿ ತೆರಿಗೆ ಬಾಕಿ ಹೊಂದಿರುವ ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಪತ್ತೆಹಚ್ಚಲು ನಿಯಮಗಳನ್ನು ರೂಪಿಸಲಾಗುವುದು ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಈಟಿವಿ ಭಾರತ್ ಗೆ ತಿಳಿಸಿದ್ದಾರೆ. ಅಂಥ ಜಾಗತಿಕ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತರಲು ಜಿ 20 ಅತ್ಯುತ್ತಮ ವೇದಿಕೆಯಾಗಿದೆ ಎಂದು ಪ್ರತಿಪಾದಿಸಿದ ಈ ಅಧಿಕಾರಿ, ಆರ್ಥಿಕ ಅಪರಾಧಗಳಿಂದ ಪಲಾಯನ ಮಾಡಿದವರ ವಿರುದ್ಧ ಕ್ರಮ ಮತ್ತು ಆಸ್ತಿ ವಸೂಲಾತಿಗಾಗಿ ಭಾರತವು ಒಂಬತ್ತು ಅಂಶಗಳ ಕಾರ್ಯಸೂಚಿಗೆ ಒತ್ತಾಯಿಸುತ್ತಿದೆ ಎಂದು ಹೇಳಿದರು.

ಆರ್ಥಿಕ ಅಪರಾಧಿಗಳನ್ನು ಯಶಸ್ವಿಯಾಗಿ ಹಸ್ತಾಂತರ ಮಾಡುವುದು, ಅಸ್ತಿತ್ವದಲ್ಲಿರುವ ಹಸ್ತಾಂತರ ವ್ಯವಸ್ಥೆಗಳಲ್ಲಿನ ದೌರ್ಬಲ್ಯಗಳು ಮತ್ತು ಕಾನೂನು ನೆರವು ಸೇರಿದಂತೆ ಅನುಭವಗಳು ಮತ್ತು ಉತ್ತಮ ಕಾರ್ಯತಂತ್ರಗಳನ್ನು ಹಂಚಿಕೊಳ್ಳಲು ಸಾಮಾನ್ಯ ವ್ಯವಸ್ಥೆಯೊಂದನ್ನು ರೂಪಿಸಬೇಕಿದೆ ಎಂದು ಅಧಿಕಾರಿ ಹೇಳಿದರು. ಈ ವಿಷಯದಲ್ಲಿ ಎಲ್ಲ ಜಿ-20 ರಾಷ್ಟ್ರಗಳ ಮಧ್ಯೆ ಜಂಟಿ ಕಾರ್ಯಯೋಜನೆ ಸಾಧ್ಯವಾದಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಬೇರೆ ದೇಶಗಳಲ್ಲಿ ಸುರಕ್ಷಿತವಾಗಿ ಅಡಗಿಕೊಳ್ಳುವುದನ್ನು ತಡೆಗಟ್ಟಬಹುದು ಎಂದು ಅಧಿಕಾರಿ ಹೇಳಿದರು.

10 ಜನರನ್ನು ದೇಶಭ್ರಷ್ಟ ಎಂದು ಘೋಷಿಸಿರುವ ಕೋರ್ಟ್​ಗಳು​: ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ, 2018 (ಎಫ್ಇಒಎ) ಅಡಿ ಭಾರತೀಯ ಕಾನೂನು ಜಾರಿ ಸಂಸ್ಥೆಗಳು 19 ಜನರ ವಿರುದ್ಧ ಅರ್ಜಿಗಳನ್ನು ಸಲ್ಲಿಸಿವೆ. ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯ್ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಸೇರಿದಂತೆ 19 ಜನರ ಪೈಕಿ 10 ಜನರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳು (ಎಫ್ಇಒ) ಎಂದು ಭಾರತದ ನ್ಯಾಯಾಲಯಗಳು ಘೋಷಿಸಿವೆ.

ಹಸ್ತಾಂತರ ಒಪ್ಪಂದದಲ್ಲಿನ ಲೋಪದೋಷಗಳ ಲಾಭ ಪಡೆದುಕೊಂಡು, ದೇಶಭ್ರಷ್ಟರು ಅನೇಕ ವರ್ಷಗಳಿಂದ ವಿವಿಧ ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. ಭಾರತವು ಪ್ರಸ್ತುತ 48 ದೇಶಗಳೊಂದಿಗೆ ಹಸ್ತಾಂತರ ಒಪ್ಪಂದಗಳನ್ನು ಮತ್ತು 12 ದೇಶಗಳೊಂದಿಗೆ ಹಸ್ತಾಂತರ ವ್ಯವಸ್ಥೆಗಳನ್ನು ಹೊಂದಿದೆ. ಇಟಲಿ ಮತ್ತು ಕ್ರೊಯೇಷಿಯಾದೊಂದಿಗಿನ ಹಸ್ತಾಂತರ ವ್ಯವಸ್ಥೆಗಳು ಮಾದಕವಸ್ತುಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದ ಅಪರಾಧಗಳಿಗೆ ಸೀಮಿತವಾಗಿವೆ.

ಹಲವು ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ರಕ್ಷಣೆ ಪಡೆದಿರುವ ಆರೋಪಿಗಳು: ದೇಶಭ್ರಷ್ಟ ಅಪರಾಧಿಗಳಲ್ಲಿ ಹೆಚ್ಚಿನವರು ಕಳೆದ ಹಲವಾರು ವರ್ಷಗಳಿಂದ ತಮಗೆ ರಕ್ಷಣೆ ನೀಡುತ್ತಿರುವ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಭಾರತವು ಅವರ ಹಸ್ತಾಂತರಕ್ಕಾಗಿ ಹೋರಾಡುತ್ತಿದೆ. ಅಧಿಕಾರಿಯ ಪ್ರಕಾರ, ಭಾರತದ ಜಂಟಿ ಕಾರ್ಯವಿಧಾನವು ಜಿ 20 ದೇಶಗಳು ಎಲ್ಲ ದೇಶಭ್ರಷ್ಟ ಆರ್ಥಿಕ ಅಪರಾಧಿಗಳಿಗೆ ಆಶ್ರಯ ನೀಡದಂತೆ ಖಚಿತಪಡಿಸುತ್ತದೆ.

ಸಕ್ಷಮ ಅಧಿಕಾರಿಗಳು ಮತ್ತು ಹಣಕಾಸು ಗುಪ್ತಚರ ಘಟಕಗಳ ನಡುವೆ ನೈಜ ಸಮಯದ ಮತ್ತು ಸಮಗ್ರ ಮಾಹಿತಿಯ ವಿನಿಮಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಸ್ಥಾಪಿಸಲು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಹಣಕಾಸು ಜಾಗತಿಕ ಕಾವಲು ಸಂಸ್ಥೆಯಾದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಆದ್ಯತೆ ನೀಡಬೇಕೆಂದು ಭಾರತ ಸೂಚಿಸಿದೆ.

"ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಪ್ರಮಾಣಿತ ವ್ಯಾಖ್ಯಾನವನ್ನು ರೂಪಿಸುವ ಕಾರ್ಯವನ್ನು ಎಫ್ಎಟಿಎಫ್​ಗೆ ವಹಿಸಬೇಕು" ಎಂದು ಅಧಿಕಾರಿ ಹೇಳಿದರು. ಭ್ರಷ್ಟಾಚಾರದ ವಿರುದ್ಧ ವಿಶ್ವಸಂಸ್ಥೆಯ ಸಮಾವೇಶ (ಯುಎನ್​ಸಿಎಸಿ) ಮತ್ತು ಬಹುರಾಷ್ಟ್ರೀಯ ಸಂಘಟಿತ ಅಪರಾಧದ ವಿರುದ್ಧ ವಿಶ್ವಸಂಸ್ಥೆಯ ಸಮಾವೇಶ (ಯುಎನ್ಒಟಿಸಿ) ತತ್ವಗಳನ್ನು, ವಿಶೇಷವಾಗಿ ಅಂತರರಾಷ್ಟ್ರೀಯ ಸಹಕಾರಕ್ಕೆ ಸಂಬಂಧಿಸಿದ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಭಾರತದ ಒತ್ತಾಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಉಕ್ರೇನ್​ಗೆ ಮತ್ತೆ 1 ಬಿಲಿಯನ್ ಡಾಲರ್​ ನೆರವು ನೀಡಿದ ಅಮೆರಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.