ETV Bharat / bharat

ಸೌದಿ ಯುವರಾಜನ ಭೇಟಿಯಾದ ಸಚಿವ ಜೈಶಂಕರ್: ಪ್ರಧಾನಿಯ ಲಿಖಿತ ಸಂದೇಶ ಹಸ್ತಾಂತರ

author img

By

Published : Sep 12, 2022, 11:22 AM IST

ಭಾರತದ ವಿದೇಶಾಂಗ ಸಚಿವರು ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧ ಬಲವರ್ಧನೆಗಾಗಿ ಎರಡೂ ದೇಶಗಳ ಮಧ್ಯೆ ಚರ್ಚೆ ನಡೆದಿದೆ.

ಸೌದಿ ಕ್ರೌನ್ ಪ್ರಿನ್ಸ್​ ಭೇಟಿಯಾದ ಸಚಿವ ಜೈಶಂಕರ್
Saudi Crown Prince Mohammed bin Salman

ಜೆಡ್ಡಾ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಲಿಖಿತ ಸಂದೇಶವನ್ನು ಅವರಿಗೆ ನೀಡಿದ್ದಾರೆ. ದ್ವಿಪಕ್ಷೀಯ ಬಾಂಧವ್ಯದಲ್ಲಾಗುತ್ತಿರುವ ಪ್ರಗತಿಯ ಹಿನ್ನೆಲೆಯಲ್ಲಿ ಕ್ರೌನ್ ಪ್ರಿನ್ಸ್ ಅವರಿಗೆ ಅಭಿನಂದನೆ ತಿಳಿಸಿದರು.

ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಶನಿವಾರ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ. ವಿದೇಶಾಂಗ ಸಚಿವರಾಗಿ ಸೌದಿ ಅರೇಬಿಯಾಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಅವರು ಭಾನುವಾರ ಜೆಡ್ಡಾದಲ್ಲಿ ಸೌದಿ ಕ್ರೌನ್ ಪ್ರಿನ್ಸ್ ಅವರನ್ನು ಭೇಟಿಯಾದರು.

ಕ್ರೌನ್ ಪ್ರಿನ್ಸ್ ಮತ್ತು ಉಪಪ್ರಧಾನಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಪ್ರಧಾನಿ ಮೋದಿ ಕಳುಹಿಸಿರುವ ಲಿಖಿತ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಸೌದಿ ಅಧಿಕೃತ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಜೆಡ್ಡಾದಲ್ಲಿರುವ ಕ್ರೌನ್ ಪ್ರಿನ್ಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡುವ ಮೂಲಕ ಲಿಖಿತ ಸಂದೇಶವನ್ನು ಕ್ರೌನ್ ಪ್ರಿನ್ಸ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅದು ಹೇಳಿದೆ.

ಸಭೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತು ಅವುಗಳನ್ನು ವೃದ್ಧಿಸುವ ಅವಕಾಶಗಳ ಬಗ್ಗೆ ಪರಿಶೀಲಿಸಲಾಯಿತು ಮತ್ತು ಇತ್ತೀಚಿನ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಲಾಗಿದೆ.

ಇಂದು ಸಂಜೆ ಜೆಡ್ಡಾದಲ್ಲಿ ಎಚ್‌ಆರ್‌ಹೆಚ್ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿದ ಬಗ್ಗೆ ನನಗೆ ಗೌರವವಿದೆ. ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ಆತ್ಮೀಯ ಶುಭಾಶಯಗಳನ್ನು ಅವರಿಗೆ ತಿಳಿಸಿರುವೆ. ನಮ್ಮ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ. ನಮ್ಮ ಬಾಂಧವ್ಯದ ಬಗ್ಗೆ ಅವರ ದೃಷ್ಟಿಕೋನವನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಜೈಶಂಕರ್ ಸಭೆಯ ನಂತರ ಟ್ವೀಟ್ ಮಾಡಿದ್ದಾರೆ.

ಜೈಶಂಕರ್ ರಿಯಾದ್‌ನಲ್ಲಿರುವ ಪ್ರಿನ್ಸ್ ಸೌದ್ ಅಲ್ ಫೈಸಲ್ ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೋಮ್ಯಾಟಿಕ್ ಸ್ಟಡೀಸ್‌ನಲ್ಲಿ ರಾಜತಾಂತ್ರಿಕರನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ಶೇ 18ಕ್ಕಿಂತ ಹೆಚ್ಚು ಕಚ್ಚಾ ತೈಲದ ಆಮದು ಸೌದಿ ಅರೇಬಿಯಾದಿಂದ ಬರುತ್ತದೆ. ಹಣಕಾಸು ವರ್ಷ 2022ರಲ್ಲಿ (ಏಪ್ರಿಲ್-ಡಿಸೆಂಬರ್) ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರವು 29.28 ಶತಕೋಟಿ ಯುಎಸ್ ಡಾಲರ್ ಮೌಲ್ಯದ್ದಾಗಿತ್ತು. ಈ ಅವಧಿಯಲ್ಲಿ, ಸೌದಿ ಅರೇಬಿಯಾದಿಂದ ಭಾರತದ ಆಮದು 22.65 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ ಮತ್ತು ಸೌದಿ ಅರೇಬಿಯಾಕ್ಕೆ ರಫ್ತು 6.63 ಬಿಲಿಯನ್ ಡಾಲರ್ ಆಗಿತ್ತು.

ಇದನ್ನೂ ಓದಿ: ಜಾಗತಿಕ ತೈಲ ಕೊರತೆ, ಬೆಲೆ ಏರಿಕೆಗೆ ತಾನು ಹೊಣೆಯಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.