ETV Bharat / bharat

ಮಾಲೀಕನ ಕತ್ತು ಕಚ್ಚಿ ಕೊಂದ ಒಂಟೆಯನ್ನು ಹೊಡೆದು ಹತ್ಯೆ.. ರಾಜಸ್ಥಾನದಲ್ಲಿ ಘಟನೆ

author img

By

Published : Feb 8, 2023, 9:11 AM IST

camel-beaten-to-death
ಮಾಲೀಕನ ಕತ್ತು ಕಚ್ಚಿ ಕೊಂದ ಒಂಟೆಯನ್ನು ಹೊಡೆದು ಹತ್ಯೆ

ಮಾಲೀಕನ ಕತ್ತು ಕಚ್ಚಿ ಕೊಂದ ಒಂಟೆ- ಉದ್ರಿಕ್ತ ಜನರು ಒಂಟೆಯನ್ನು ಹೊಡೆದು ಕೊಂದರು- ರಾಜಸ್ಥಾನದ ಬಿಕಾನೇರ್​ನಲ್ಲಿ ಘಟನೆ

ಬಿಕನೇರ್ (ರಾಜಸ್ಥಾನ): ತನ್ನ ಮಾಲೀಕನನ್ನೇ ಕಚ್ಚಿ ಕೊಂದ ಹಿಂಸಾತ್ಮಕ ಮನೋಭಾವ ಹೊಂದಿದ್ದ ಒಂಟೆಯನ್ನು ಜನರು ಹೊಡೆದು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಂದೆಯನ್ನು ಕಳೆದುಕೊಂಡ ಮಕ್ಕಳು, ಕುಟುಂಬಸ್ಥರು ರೋಧಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಪ್ರಕರಣದ ಹಿನ್ನೆಲೆ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ ಒಂಟೆಯ ಮಾಲೀಕ ಸೋಹನ್‌ರಾಮ್ ನಾಯಕ್ ಮತ್ತು ಅವರ ಮಗ ಮೋಹನ್‌ರಾಮ್ ಒಂಟೆಯನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂಟೆ ಹಗ್ಗ ಹರಿದುಕೊಂಡು ಮತ್ತೊಂದು ಒಂಟೆಯ ಹಿಂದೆ ಓಡಿದೆ. ಮಾಲೀಕ ತನ್ನ ಒಂಟೆಯನ್ನು ಹಿಡಿಯಲು ಹಿಂದೆ ಹೋಗಿದ್ದಾರೆ. ಹಿಡಿದುಕೊಂಡು ಮರಳಿ ತರುತ್ತಿದ್ದಾಗ ಒಂಟೆ ಮಾಲೀಕನನ್ನು ಕತ್ತು ಕಚ್ಚಿ ಹಿಡಿದಿದೆ.

ಅಲ್ಲಿಯೇ ಇದ್ದ ಮಗ ಮೋಹನ್‌ರಾಮ್ ಮತ್ತಿತರರು, ಒಂಟೆಯಿಂದ ಸೋಹನ್‌ರಾಮ್ ನಾಯಕ್​ರನ್ನು ಬಿಡಿಸಲು ಯತ್ನಿಸಿದ್ದಾರೆ. ಆದರೆ, ಒಂಟೆ ಬಿಗಿಯಾಗಿ ಕಚ್ಚಿ ಹಿಡಿದಿತ್ತು. ಇದರಿಂದ ತೀವ್ರ ರಕ್ತಸ್ರಾವವಾಗಿ ಸೋಹನ್‌ರಾಮ್ ನಾಯಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದು ಜನರ ಕೋಪಕ್ಕೆ ಕಾರಣವಾಯಿತು. ಮಾಲೀಕನನ್ನೇ ಕಚ್ಚಿ ಕೊಂದ ಒಂಟೆ ಹಿಂಸಾತ್ಮಕ ಮನೋಭಾವ ಹೊಂದಿದ್ದರಿಂದ ಅದನ್ನು ಮರಕ್ಕೆ ಹಗ್ಗದಿಂದ ಬಿಗಿಯಾಗಿ ಕಟ್ಟಿ ಹಾಕಿದ್ದಾರೆ.

ಹಿಗ್ಗಾಮುಗ್ಗಾ ಥಳಿಸಿ ಹತ್ಯೆ: ಮಾಲೀಕನ ಬಲಿ ಪಡೆದ ಒಂಟೆಯನ್ನು ಉದ್ರಿಕ್ತ ಜನರು ದೊಣ್ಣೆಗಳಿಂದ ಮನಸೋಇಚ್ಛೆ ಹೊಡೆದಿದ್ದಾರೆ. ಮುಖ, ಬಾಯಿ, ದೇಹಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಒಂಟೆ ಕೂಡ ಮೃತಪಟ್ಟಿದೆ. ಮಾಲೀಕ ಸೋಹನ್‌ರಾಮ್ ನಾಯಕ್ ಈ ಒಂಟೆಯನ್ನು ಕೇವಲ 20 ದಿನಗಳ ಹಿಂದೆಯಷ್ಟೇ ಖರೀದಿ ಮಾಡಿದ್ದರು. ಒಂಟೆ ಈ ಹಿಂದೆಯೂ ಕೂಡ ತುಸು ರೋಷದಿಂದ ವರ್ತಿಸುತ್ತಿತ್ತು. ಬಳಿಕ ಅದೇ ಸರಿ ಹೋಗಲಿದೆ ಎಂದು ಸೋಹನ್‌ರಾಮ್ ತಿಳಿದಿದ್ದರು. ಆದರೆ, ಆತನನ್ನೇ ಒಂಟೆ ಬಲಿ ಪಡೆದಿದೆ. ಬಳಿಕ ಹತ್ಯೆಗೀಡಾಗಿದೆ.

ಒಂಟೆಯನ್ನು ಹೊಡೆದು ಹತ್ಯೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಒಂಟೆ ಕೊಂದಿದ್ದ ಕಿರಾತಕರು: ಕೆಲ ದಿನಗಳ ಹಿಂದೆ ರಾಜಸ್ಥಾನದ ಸರ್ದರ್ಶಹರ್ ತಹಸಿಲ್​ನಲ್ಲಿ ಮೂವರು ಕಿರಾತರು ಒಂಟೆಯೊಂದನ್ನು ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದರು. ತೀವ್ರ ರಕ್ತಸ್ರಾವವಾಗಿ ಒಂಟೆ ಸಾವನ್ನಪ್ಪಿತ್ತು. ಬೈಕ್​ ಮೇಲೆ ಬಂದ ಮೂವರು ಆರೋಪಿಗಳು ಮೇಯುತ್ತಿದ್ದ ಒಂಟೆಯ ಕಾಲಿಗೆ ಕೊಡಲಿಯಿಂದ ಹೊಡೆದಿದ್ದರು. ಇದರಿಂದ ಅದರ ಕಾಲಿಗೆ ತೀವ್ರ ಗಾಯವಾಗಿತ್ತು. ರಕ್ತಸ್ರಾವವೂ ಉಂಟಾಗಿ ಒಂಟೆ ಕುಳಿತಲ್ಲೇ ಬಿದ್ದಿತ್ತು.

ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಪಾಸಣೆ ನಡೆಸಿದಾಗ ಒಂಟೆಯ ಕಾಲು ಕತ್ತರಿಸಿದಂತಾಗಿ ರಕ್ತ ಚಿಮ್ಮಿತ್ತು. ಕೊನೆಗೆ ಒಂಟೆ ಅಸ್ವಸ್ಥಗೊಂಡು ಸಾವನ್ನಪ್ಪಿತ್ತು. ಪ್ರಾಣಿಯ ಮೇಲೆ ಮನುಷ್ಯನ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಓದಿ: ಟರ್ಕಿ, ಸಿರಿಯಾ ಭೂಕಂಪನದಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಸಾವು: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.