ಕರ್ನಾಟಕ

karnataka

ಕೊರೊನಾ ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಹೊಸ ಚಿತಾಗಾರ..!

By

Published : Oct 19, 2020, 9:01 PM IST

ರುದ್ರಭೂಮಿಯಲ್ಲಿ ಒಂದೇ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಡವಾಗುತ್ತದೆ ಮತ್ತು ಕಷ್ಟವಾಗುತ್ತದೆ ಎಂದು ಅರಿತ ವಿಎಚ್​ಪಿ ಮತ್ತು ಭಜರಂಗದಳದ ಕಾರ್ಯಕರ್ತರು ಹಳೆ ಚಿತಾಗಾರದ ಪಕ್ಕದಲ್ಲೇ ಮತ್ತೊಂದು ಹೊಸ ಚಿತಾಗಾರ ಮಾಡುತ್ತಿದ್ದಾರೆ.

Madikeri
ಕೊರೊನಾ ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಹೊಸ ಚಿತಾಗಾರ

ಕೊಡಗು: ಕೊರೊನಾ ವೈರಸ್ ಅಂಟಿಕೊಳ್ಳಬಹುದೆಂದು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಯಾರು ಮಾಡುವುದಿಲ್ಲ. ಹೀಗಾಗಿಯೇ ವಿವಿಧ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಮಾಡುತ್ತಿದ್ದಾರೆ. ಆದರೆ ಕೊಡಗಿನ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಇನ್ನೂ ಒಂದೆಜ್ಜೆ ಮುಂದೆ ಹೋಗಿ ಮೃತಪಟ್ಟವರ ಸಂಸ್ಕಾರಕ್ಕಾಗಿ ಹೊಸ ಚಿತಗಾರವನ್ನೇ ಮಾಡುತ್ತಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಹೊಸ ಚಿತಾಗಾರ

ಕೊಡಗು ಜಿಲ್ಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರವೇ ಇದ್ದವು. ಆ ಸಂದರ್ಭದಲ್ಲಿ ಕೋವಿಡ್ ನಿಂದ ಮೃತಪಟ್ಟ ಪ್ರಕರಣಗಳು ಇರಲೇ ಇಲ್ಲ. ಜೂನ್, ಜುಲೈ ತಿಂಗಳಲ್ಲಿ ಕೋವಿಡ್ ಜಿಲ್ಲೆಯ ಜನರನ್ನು ಬಲಿಪಡೆಯಲಾರಂಭಿಸಿತು. ಆಗ ಹಿಂದೂ ಧರ್ಮದವರು ಯಾರಾದರೂ ಮೃತಪಟ್ಟರೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಡಿಕೇರಿಯ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಆದರೆ ಕೊಡಗಿನಲ್ಲಿ ಈಗ ಕೊರೊನಾ ಪ್ರಕರಣಗಳು ಮಿತಿಮೀರಿವೆ. ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದು, ಇದುವರೆಗೆ 61 ಜನರು ಮೃತಪಟ್ಟಿದ್ದಾರೆ. ಅಂದರೆ ದಿನಕ್ಕೆ ಎರಡು ಜನರು ಕೋವಿಡ್ ನಿಂದ ಸಾವನ್ನಪ್ಪುತ್ತಿದ್ದಾರೆ.

ಹೀಗಾಗಿ ರುದ್ರಭೂಮಿಯಲ್ಲಿ ಒಂದೇ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಡವಾಗುತ್ತದೆ ಮತ್ತು ಕಷ್ಟವಾಗುತ್ತದೆ ಎಂದು ಅರಿತ ವಿಎಚ್​ಪಿ ಮತ್ತು ಭಜರಂಗದಳದ ಕಾರ್ಯಕರ್ತರು ಹಳೆ ಚಿತಾಗಾರದ ಪಕ್ಕದಲ್ಲೇ ಮತ್ತೊಂದು ಹೊಸ ಚಿತಾಗಾರ ಮಾಡುತ್ತಿದ್ದಾರೆ. ಚಿತಾಗಾರದ ಮೇಲ್ಚಾವಣಿಗೆ ಬೇಕಾಗಿರುವ ಕಬ್ಬಿಣ ಮತ್ತು ಇತ್ತರೆ ಸಾಮಾನುಗಳನ್ನು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೊಡಿಸಿದ್ದಾರೆ. ಉಳಿದಂತೆ ಸಿಮೆಂಟ್, ಜೆಲ್ಲಿ ಮತ್ತು ಗಾರೆಕೆಲಸವನ್ನು ಕಾರ್ಯಕರ್ತರು ಸ್ವಂತ ಕರ್ಚಿನಿಂದಲೇ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೋವಿಡ್ ನಿಂದ ಮೃತಪಟ್ಟವರನ್ನು ಸುಡಲು ಬೇಕಾಗಿರುವ ಸೌದೆಯನ್ನು ಸ್ವಂತ ಖರ್ಚಿನಿಂದಲೇ ತರುತ್ತಿದ್ದಾರೆ. ತೋಟಗಳಿಂದ ತಂದ ಮರದ ದಿಮ್ಮಿಗಳನ್ನು ಕಾರ್ಯಕರ್ತರು ಶ್ರಮದಾನದ ಮೂಲಕ ತುಂಡರಿಸಿ ಚಿತಾಗಾರದ ಬಳಿಯೇ ಶೇಖರಿಸಿಡುತ್ತಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು 33 ಮೃತದೇಹಗಳಿಗೆ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿ ಸಂಸ್ಕಾರ ಮಾಡಿದ್ದಾರೆ. ಜೊತೆಗೆ ಮೃತ ವ್ಯಕ್ತಿಯ ಸಂಬಂಧಿಗಳು ಅಂತ್ಯಸಂಸ್ಕಾರ ಮಾಡಲು ಮುಂದೆ ಬಂದಲ್ಲಿ ಅವರಿಗೂ ಪಿಪಿಇ ಕಿಟ್ ಧರಿಸಿಸಿ ಅವರಿಂದಲೇ ಅಂತ್ಯಸಂಸ್ಕಾರವನ್ನು ಮಾಡಿಸುವ ಮೂಲಕ ಎಲ್ಲರು ಶ್ಲಾಘಿಸುವಂತ ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details