ಕರ್ನಾಟಕ

karnataka

ಕೊಡಗು: ಜನರಲ್ ತಿಮ್ಮಯ್ಯ ಪ್ರತಿಮೆಯ ಬಳಿಕ ದೇವಯ್ಯ ವೃತ್ತಕ್ಕೆ ಸಾರಿಗೆ ಬಸ್​ ಡಿಕ್ಕಿ

By ETV Bharat Karnataka Team

Published : Aug 25, 2023, 9:27 PM IST

Updated : Aug 25, 2023, 10:48 PM IST

ಮಡಿಕೇರಿಯ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಕೆಎಸ್​​​ಆರ್​ಟಿಸಿ ಬಸ್​ ಡಿಕ್ಕಿಯಾಗಿರುವ ಘಟನೆ ನಡೆದಿದೆ.

ksrtc-bus-hit-squadron-leader-ajjamada-devaiya-circle-in-madikeri
ಕೊಡಗು: ಜನರಲ್ ತಿಮ್ಮಯ್ಯ ಪ್ರತಿಮೆ ಬೆನ್ನಲ್ಲೇ ದೇವಯ್ಯ ವೃತ್ತಕ್ಕೂ ಸಾರಿಗೆ ಬಸ್​ ಡಿಕ್ಕಿ

ದೇವಯ್ಯ ವೃತ್ತಕ್ಕೆ ಸಾರಿಗೆ ಬಸ್​ ಡಿಕ್ಕಿ

ಕೊಡಗು: ಇತ್ತೀಚಿಗೆ ಜನರಲ್ ತಿಮ್ಮಯ್ಯ ಪ್ರತಿಮೆಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದ ಘಟನೆಯ ಬೆನ್ನಲ್ಲೇ ಇದೀಗ ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ ಬಸ್​ ಗುದ್ದಿದೆ. ಮಡಿಕೇರಿಯಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಅಪಘಾತ ತಪ್ಪಿಸಲು ಹೋಗಿ ಪ್ರತಿಮೆಗೆ ಡಿಕ್ಕಿಯಾಗಿದೆ. ಬಸ್ ಡಿಕ್ಕಿಯಿಂದ ಪ್ರತಿಮೆಯ ಕೆಳಭಾಗದ ಕಟ್ಟೆಗೆ ಹಾನಿಯಾಗಿದ್ದು, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ.

ಜ.ತಿಮ್ಮಯ್ಯ ಪ್ರತಿಮೆ ಶೀಘ್ರವೇ ಪುನರ್‌ಸ್ಥಾಪಿಸಿ- ಎ.ಎಸ್.ಪೊನ್ನಣ್ಣ:"ರಾಷ್ಟ್ರಕಂಡ ಮಹಾನ್ ಸೇನಾ ನಾಯಕ, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಯನ್ನು ಶೀಘ್ರವೇ ಪುನರ್ ಸ್ಥಾಪಿಸಬೇಕು" ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಒತ್ತಾಯಿಸಿದರು.

ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಸ್ಥಳಾಂತರಿಸಲಾಗಿರುವ ವೀರಸೇನಾನಿ ಜನರಲ್ ತಿಮ್ಮಯ್ಯರ ಪ್ರತಿಮೆ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಹಾಗೂ ಸ್ಥಳೀಯ ಶಾಸಕರಾದ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದಂತೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡಬೇಕು" ಎಂದು ಹೇಳಿದರು.

ಪ್ರತಿಮೆ ಪುನರ್‌ನಿರ್ಮಾಣ ಸಂಬಂಧ ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಕೆಎಸ್ಆರ್​ಟಿಸಿ ವಿಭಾಗದಿಂದ 10 ಲಕ್ಷ ರೂ. ಭರಿಸಲಿದ್ದಾರೆ. ಕೊಡಗಿನ ಜನರ ಭಾವನೆಗೆ ಧಕ್ಕೆ ಆಗದಂತೆ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ಸ್ಥಾಪಿಸಲಾಗುವುದು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ತುರ್ತು ಕ್ರಮವಹಿಸುವಂತೆ ನಿರ್ದೇಶನ ನೀಡಿದರು. ಪ್ರತಿಮೆ ವೀಕ್ಷಣೆಗೂ ಮೊದಲು ಜನರಲ್ ತಿಮ್ಮಯ್ಯ ವೃತ್ತಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು.

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಕೆಎಸ್​ಆರ್​ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ ಇದ್ದರು.

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ:ಜಿಲ್ಲೆಯಲ್ಲಿಕಾಡಾನೆಗಳ ದಾಳಿ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, "ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕಾಡಾನೆ ದಾಳಿಗೆ ಇಬ್ಬರು ತುತ್ತಾಗಿರುವುದು ನೋವು ತಂದಿದೆ. ಕಾಡು ಪ್ರಾಣಿಗಳ ಹಾವಳಿ ತಡೆಯಬೇಕಿದ್ದು, ಆ ನಿಟ್ಟಿನಲ್ಲಿ ಆಗಸ್ಟ್, 26 ರಂದು ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಕಾಡಾನೆ ಹಾವಳಿಗೆ ತುತ್ತಾದ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಸಭೆ ನಡೆಸಲಿದ್ದಾರೆ. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಸಹ ಆಗಮಿಸಲಿದ್ದಾರೆ. ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷವನ್ನು ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತದೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಮಡಿಕೇರಿ: ಅಪಘಾತ ತಪ್ಪಿಸಲು ಹೋಗಿ ಜನರಲ್ ತಿಮ್ಮಯ್ಯ ಪ್ರತಿಮೆಗೆ KSRTC ಬಸ್ ಡಿಕ್ಕಿ

Last Updated :Aug 25, 2023, 10:48 PM IST

ABOUT THE AUTHOR

...view details