ಕರ್ನಾಟಕ

karnataka

ಈಶ್ವರಪ್ಪಗೆ ಹೈಕಮಾಂಡ್ ಬುಲಾವ್: ಕೋಟ ಶ್ರೀನಿವಾಸ ಪೂಜಾರಿ, ಪಿ.ಸಿ.ಮೋಹನ್‌ ಜೊತೆ ಇಂದು ದೆಹಲಿಗೆ

By ETV Bharat Karnataka Team

Published : Nov 2, 2023, 6:56 AM IST

K.S.Eeshwarappa to visit Delhi today: ಹೈಕಮಾಂಡ್​ ನಾಯಕರಿಂದ ಬುಲಾವ್ ಬಂದಿದ್ದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇಂದು ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಪಿ.ಸಿ.ಮೋಹನ್ ಅವರೊಂದಿಗೆ ದೆಹಲಿಗೆ ಪ್ರಯಾಣಿಸಲಿದ್ದಾರೆ.

eshwarappa
ಈಶ್ವರಪ್ಪ

ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ

ಬೆಂಗಳೂರು:ಹೈಕಮಾಂಡ್ ಬುಲಾವ್ ಮೇರೆಗೆ ಇಂದು (ಗುರುವಾರ) ದೆಹಲಿಗೆ ತೆರಳುತ್ತಿದ್ದೇನೆ. ಯಾವ ವಿಚಾರದ ಕುರಿತು ಕರೆದಿದ್ದಾರೆ ಎಂದು ಅಲ್ಲಿಗೆ ಹೋದ ನಂತರವೇ ತಿಳಿಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ಮಾತನಾಡಿದ ಅವರು, ದೆಹಲಿ ಕಚೇರಿಯಿಂದ ಕರೆ ಬಂದಿತ್ತು. ಹಾಗಾಗಿ, ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಪಿ.ಸಿ.ಮೋಹನ್ ಅವರನ್ನೂ ಕರೆದಿದ್ದಾರೆ. ನಾವು ಮೂವರು ಹೋಗಲಿದ್ದೇವೆ ಎಂದರು.

ರಾಜ್ಯಾಧ್ಯಕ್ಷರ ಆಯ್ಕೆ‌ ವಿಚಾರದಲ್ಲಿ ಹೈಕಮಾಂಡ್‌ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅವರಿಗೆ ಯಾವಾಗ ಏನು ಮಾಡಬೇಕು ಅಂತ ಗೊತ್ತು. ಅವರು ಬುದ್ಧಿವಂತರು. ಅವರಿಗೆ ಎಲ್ಲವೂ ತಿಳಿದಿದೆ. ಅವರೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಇಂತಹ ಸುಳ್ಳು ಆರೋಪ ಮಾಡುವುದಕ್ಕೇ ಸಿದ್ದರಾಮಯ್ಯ ಅವರನ್ನು ಸುಳ್ಳುಗಾರ ಅಂತ ಹೇಳೋದು. ರಾತ್ರೋರಾತ್ರಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಡಿ.ಕೆ.ಶಿವಕುಮಾರ್​ ಅವರನ್ನು ಕಳ್ಳ ಅಂತಾರೆ. ಒಬ್ಬರನ್ನು ಕಳ್ಳ, ಮತ್ತೊಬ್ಬರನ್ನು ಸುಳ್ಳ ಅಂದ್ರೆ ಸಿಟ್ಟು ಮಾಡಿಕೊಳ್ತಾರೆ. ಆದರೆ, ಇದನ್ನು ನಾನು ಹೇಳ್ತಿಲ್ಲ ಜನ ಮಾತಾಡ್ತಿದ್ದಾರೆ. ಇವರು ಪ್ರತಿದಿನ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅವರ ಶಾಸಕರಿಗೆ 50 ಕೋಟಿ ರೂಪಾಯಿ ಕೊಡೋಕೆ ನಮಗೆ ಗ್ರಹಚಾರವೇ?, ಒಬ್ಬನನ್ನು ಕರೆತಂದು ಸರ್ಕಾರ ಮಾಡುವುದಕ್ಕೆ ಆಗುತ್ತಾ?. ಇದೆಲ್ಲಾ ಸುಳ್ಳಲ್ಲದೆ ಮತ್ತೇನು ಎಂದು ಆಪರೇಷನ್ ಆರೋಪಕ್ಕೆ ತಿರುಗೇಟು ಕೊಟ್ಟರು.

ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಆಗಮಿಸಿದೆ. ಆಂತರಿಕ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದಾರೆ. ಆದರೆ, ಯಾವ ವಿಚಾರವನ್ನೂ ಅವರು ಬಗೆಹರಿಸಿಲ್ಲ. ಅವರು ಕೇಳಿದಷ್ಟು ಇವರು ಕೊಟ್ಟಿಲ್ಲ. ಹಾಗಾಗಿ ಕಲೆಕ್ಷನ್ ಕೊಡಿ ಅಂತ ಬಂದಿದ್ದಾರೆ. ಐದು ರಾಜ್ಯದ ಚುನಾವಣೆ ಬಂದಿದೆ. ಅದಕ್ಕೆ ಬೇಗ ಕಲೆಕ್ಷನ್ ಕೊಡಿ ಅಂತ ಬಂದಿದ್ದಾರೆ. ಹೇಳೋದು ಕರೆಕ್ಷನ್ ಮಾಡಲು ಬಂದಿದ್ದೇವೆ ಅಂತ, ಮಾಡೋದು ಮಾತ್ರ ಕಲೆಕ್ಷನ್ ಎಂದು ವೇಣುಗೋಪಾಲ್, ಸುರ್ಜೇವಾಲ ರಾಜ್ಯ ಭೇಟಿಯನ್ನು ಈಶ್ವರಪ್ಪ ಟೀಕಿಸಿದರು.

ಜನ ಕಾಂಗ್ರೆಸ್​ಗೆ ಮತ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯದ ಜನರ ಋಣ ತೀರಿಸಬೇಕಾಗಿದೆ. ಸಿಎಂ, ಡಿಸಿಎಂ ಎರಡು ಗುಂಪು ಇರಲಿ, ಬೇಡ ಅನ್ನಲಿಲ್ಲ. ಯಾವುದಾದ್ರೂ ಬರಗಾಲದ ಜಾಗ ನೋಡಿಕೊಂಡು ಬರಲಿ. ಮಾತೆತ್ತಿದ್ರೆ ಕೇಂದ್ರ ಸರ್ಕಾರ ಏನೂ ಮಾಡಲಿಲ್ಲ ಅಂತಾರೆ. ಪೂರ್ಣ ಎಷ್ಟು ತಾಲೂಕು ಬರ ಅಂತ ನಿಮಗೆ ಗೊತ್ತಿಲ್ಲ. ನಿಮಗೆ ಜವಾಬ್ದಾರಿ ಇಲ್ಲವಾ?, ಎಷ್ಟು ಬರಗಾಲ ಇದೆ ಅನ್ನೋ ಮಾಹಿತಿ ಇವರಿಗಿಲ್ಲ. ಯಾವ್ಯಾವ ಬೆಳೆ ಎಷ್ಟು ನಷ್ಟ ಆಗಿದೆ ಅಂತ ಗೊತ್ತಿಲ್ಲ, ಕೇಂದ್ರಕ್ಕೆ‌ ಎಷ್ಟು ಬರದ ಪರಿಹಾರ ಕೇಳಿದ್ದೇವೆ ಅನ್ನೋದನ್ನು ಜನತೆ ಮುಂದಿಡಿ. ಒಬ್ಬ ಉಸ್ತುವಾರಿ ಸಚಿವರು ಒಂದಾದ್ರೂ ಜಿಲ್ಲೆಗೆ ಹೋಗಿ ಪರಿಹಾರ ಬೇಡ, ಕನಿಷ್ಟ ಸಾಂತ್ವನವಾದರೂ ಹೇಳಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಜನತೆಗೆ ನಾನು ನಿಮ್ಮಿಂದ ಗೆದ್ದಿದ್ದೇನೆ. ನಿಮ್ಮ‌ ಕಷ್ಟ ಏನು ಅಂತ ಕೇಳುವ ವ್ಯವದಾನ ಇಲ್ಲ. ಸಮಾಧಾನ ಹೇಳುವ ಬಾಯಲ್ಲಿ ಏನಿಟ್ಟುಕೊಂಡಿದ್ದಾರೆ. ಎಲ್ಲರೂ ನಾನು ಸಿಎಂ ಆಗಬೇಕು, ಡಿಸಿಎಂ‌ ಆಗಬೇಕು ಅಂತ ಕಾಲ ಕಳೆಯುತ್ತಿದ್ದಾರೆ. ಬರಗಾಲದಲ್ಲಿ ಏನೂ ಮಾಡಿಲ್ಲ, ಎಲ್ಲ‌ ಗ್ಯಾರಂಟಿ ಫೇಲ್ಯೂರ್ ಆಗಿದೆ. ವಿದ್ಯುತ್ ಕೊಡಲಾಗ್ತಿಲ್ಲ, 2 ಸಾವಿರ ನಿನಗೂ, ನಿನ್ ಹೆಂಡತಿಗೆ ಅಂದ್ರು. ನಿರುದ್ಯೋಗ ಸ್ಕೀಮ್​ ಓಪನ್ ಆಗಿಲ್ಲ. ಸರ್ಕಾರ ಸಂಪೂರ್ಣ ಬಿದ್ದು ಹಾಳಾಗಿದೆ. ಕೆಎಸ್‌ಆರ್‌ಟಿಸಿಗೆ ಹಣವೇ ಕೊಟ್ಟಿಲ್ಲ. ಪುಕ್ಕಟೆ ಕೊಡ್ತೀನಿ ಅಂತ ಹೇಳಿದ್ದಾರೆ. ಹಣ ಕೊಡದೆ ಡಿಪಾರ್ಟ್‌ಮೆಂಟ್ ಹೇಗೆ ಉಳಿಯುತ್ತೆ?. ಇಂತ ಮೋಸಗಾರ ಸರ್ಕಾರ ನನ್ನ ಜೀವನದಲ್ಲಿ ನೋಡಿಲ್ಲ ಎಂದರು.

ಸಿದ್ದರಾಮಯ್ಯ ಮಾತೆತ್ತಿದರೆ ನಾನು 17 ಸಾರಿ ಬಜೆಟ್ ಮಾಡಿದ್ದೀನಿ ಅಂತಾರೆ. ಇದೇನಾ ಬಜೆಟ್ ಮಂಡನೆ ಮಾಡೋದು?. ಬಜೆಟ್​ಗೆ ತಕ್ಕಂತೆ ಖರ್ಚು ಮಾಡಬೇಕು. ಕೇಂದ್ರ ಮನೆ ಮನೆಗೂ ಗಂಗೆ ಅಂತಾ ಮಾಡಿದೆ. ಆದರೆ, ಕೇಂದ್ರದ ಹಣವನ್ನು ಇರುವ ಬೇರೆ ಯೋಜನೆಗೆ ನೀಡಿದ್ದಾರೆ. ಇದನ್ನು ಖಂಡಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದೆವು. ಭ್ರಷ್ಟಾಚಾರ ದಂಧೆ, ವರ್ಗಾವಣೆ ಎಲ್ಲಾ ಮಾಡ್ತಿದ್ದಾರೆ. ಈಗಲೂ ರಿಟೈರ್ಡ್ ಜಡ್ಜ್ ನೇತೃತ್ವದ ಸಮಿತಿ ಮಾಡಲಿ. ಹೇಗೆ ಕೋಟ್ಯಂತರ ಹಣ ತೆಗೆದುಕೊಂಡಿದ್ದಾರೆ ಎಂದು ಅವರ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸ್ತೇನೆ, ಇಲ್ಲ ಅಂದರೆ ನಾನು ರಾಜಕೀಯ ಬಿಡ್ತೀನಿ ಎಂದು ಸಾವಾಲೆಸೆದರು.

ರಾಜ್ಯದಲ್ಲಿಯೂ ಮಹಾರಾಷ್ಟ್ರದ ರೀತಿ ಆಗಲಿದೆ ಅನ್ನೋ ಸುದ್ದಿ ಹರಡಿದೆ. ಯಾರ್ಯಾರು ಅಜಿತ್ ಪವರ್, ಎಷ್ಟು ಜನ ಕನಸು ಕಂಡಿದ್ದಾರೋ ಗೊತ್ತಿಲ್ಲ. ಇಲ್ಲಿ ಅಜಿತ್ ಪವರ್ ಅವರಂಥವರು ಬಹಳಷ್ಟು ಜನ ಇದ್ದಾರೆ. ಕಾಂಗ್ರೆಸ್ ಶಾಸಕರೇ ಈ ಸರ್ಕಾರಕ್ಕೆ ಬೈಯ್ಯಬಹುದು. ಒಂದೇ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಸಿದ್ದರಾಮಯ್ಯ. ಜನ ಓಟ್ ಕೊಟ್ಟಿದ್ದಾರೆ, ಅನುದಾನ ಕೊಟ್ಟಿಲ್ಲ ಅಂತ ಬೈತಿದ್ದಾರೆ. ಇಂತಹ ಪರಿಸ್ಥಿತಿ ಇದೆ ಎಂದರು.

ಇದನ್ನೂ ಓದಿ:ರಾಜ್ಯದ ಜನರಿಗೆ ಈ ಸರ್ಕಾರ ಬೇಡವಾಗಿದೆ, ಉರುಳಿಸುವ ಕೆಲಸವನ್ನೇಕೆ ಬಿಜೆಪಿ ಮಾಡಬಾರದು?: ಕೆ.ಎಸ್.ಈಶ್ವರಪ್ಪ

ಬಿಜೆಪಿಯವರು 50%ಗಿಂತ ಜಾಸ್ತಿ ಕಾಂಗ್ರೆಸ್​ಗೆ ಬಂದರು ಅಂತಿದ್ದಾರೆ. ಆದರೆ, ಚಿಲ್ಲರೆಪಲ್ಲರೆ ಕಾರ್ಯಕರ್ತರು ಹೋಗಿದ್ದಾರಷ್ಟೆ. ಶಾಲು ಹಾಕಿದ್ದೇ ಹಾಕಿದ್ದು, ಹಾರ ಹಾಕಿದ್ದೂ ಹಾಕಿದ್ದೆ. ಒಬ್ಬ ನಾಯಕನನ್ನು ತೋರಿಸಲಿ. ಸುಮಾರು ಜನರನ್ನು ಕರೆದುಕೊಂಡು ಹೋದ್ರು. ಸೋತಿರೋ ಎಂಎಲ್‌ಎ ಬಗ್ಗೆ ನಾನು ಮಾತಾಡಲ್ಲ. ಹೋಗಿರೋರಲ್ಲಿ ಮತ್ತೆ ನಮ್ಮ ಪಕ್ಷಕ್ಕೆ ಯಾರ್ಯಾರು ಬರ್ತಾರೆ ನೋಡಿ ಎಂದು ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದರು.

ABOUT THE AUTHOR

...view details