ಕರ್ನಾಟಕ

karnataka

ತನಿಖೆಗೆ ವಶಪಡಿಸಿಕೊಂಡ ಚಿನ್ನಾಭರಣಗಳನ್ನು 15 ರಿಂದ 1 ತಿಂಗಳು ಮಾತ್ರ ಪೊಲೀಸರ ವಶದಲ್ಲಿರಬೇಕು: ಹೈಕೋರ್ಟ್​

By

Published : Sep 20, 2022, 10:45 PM IST

ತನಿಖೆ ಸಂದರ್ಭದಲ್ಲಿ ಅಪರಾಧಿಗಳಿಂದ ಜಪ್ತಿ ಮಾಡಿದ ಚಿನ್ನಾ ಆಭರಣಗಳನ್ನು 15 ದಿನ ಇಲ್ಲ ಹೆಚ್ಚೆಂದರೆ ಒಂದು ತಿಂಗಳ ವರೆಗೆ ಪೊಲೀಸರ ವಶದಲ್ಲಿರಬಹುದು ಎಂದು ಹೈಕೋರ್ಟ್​ ಹೇಳಿದೆ.

police custody
ಹೈಕೋರ್ಟ್​

ಬೆಂಗಳೂರು: ಪೊಲೀಸರು ತನಿಖೆ ಸಂದರ್ಭದಲ್ಲಿ ಅಪರಾಧಿಗಳಿಂದ ಜಪ್ತಿ ಮಾಡಿದ ಚಿನ್ನಾಭರಣಗಳನ್ನು 15 ದಿನದಿಂದ ಗರಿಷ್ಠ ಒಂದು ತಿಂಗಳವರಗೆ ಮಾತ್ರ ಪೊಲೀಸರ ವಶದಲ್ಲಿ ಇಟ್ಟುಕೊಳ್ಳಲು ಅವಕಾಶವಿದ್ದು, ನಂತರ ಸಂತ್ರಸ್ತ ಅಥವಾ ದೂರುದಾರರಿಗೆ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರಿನ ಚಿನ್ನಾಭರಣದ ಮಳಿಗೆಯೊಂದರ ಮಾಲೀಕ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅರ್ಜಿದಾರರಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಅವರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಮೈಸೂರಿನ ಲಷ್ಕರ್ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ.

ಅಲ್ಲದೆ, ತನಿಖೆ ಸಂದರ್ಭದಲ್ಲಿ ಜಪ್ತಿ ಮಾಡಿದ ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳನ್ನು ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಪೊಲೀಸರ ವಶದಲ್ಲಿ ವರ್ಷಾನುಗಟ್ಟಲೆ ಇಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ವಶಪಡಿಸಿಕೊಂಡ ವಸ್ತುಗಳು ಪೊಲೀಸ್ ಠಾಣೆಯಲ್ಲಿ ಹೆಚ್ಚೆಂದರೆ 15 ದಿನಗಳಿಂದ ಒಂದು ತಿಂಗಳವರೆ ಮಾತ್ರ ಇರುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಲಯ ನೋಡಿಕೊಳ್ಳಬೇಕು. ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಸಂಬಂಧಪಟ್ಟ ದುರುದಾರರ ಹಾಗೂ ಸಂತ್ರಸ್ತರ ಮಧ್ಯಂತರ ಸುಪರ್ದಿಗೆ ನೀಡುವ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಕ್ತ ಆದೇಶ ಹೊರಡಿಸಬೇಕು ಎಂದು ಆದೇಶಿಸಿದೆ.

ಜೊತೆಗೆ, ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳು ದೂರುದಾರರು - ಸಂತ್ರಸ್ತರಿಗೆ ನೀಡುವ ಮುನ್ನ ಅವುಗಳ ಪೋಟೋ ತೆಗೆದುಕೊಂಡು ಸಮಗ್ರವಾದ ಪಂಚನಾಮೆ ಮಾಡಬೇಕು. ವಿಚಾರಣೆ ವೇಳೆ ಅವುಗಳನ್ನು ಹಾಜರುಪಡಿಸಬೇಕು ಎಂಬುದಾಗಿ ವಸ್ತುಗಳನ್ನು ಸುಪರ್ದಿಗೆ ಪಡೆಯುವವರಿಂದ ಬಾಂಡ್ ಬರೆಸಿಕೊಳ್ಳಬೇಕು ಹಾಗೂ ಭದ್ರತಾ ಖಾತರಿ ಪಡೆದುಕೊಳ್ಳಬೇಕು.

ಅದಕ್ಕೆ ಆರೋಪಿ, ದೂರುದಾರ ಮತ್ತು ವಸ್ತುವನ್ನು ಸುಪರ್ದಿಗೆ ತೆಗೆದುಕೊಳ್ಳುವ ಸಹಿ ಪಡೆಯಬೇಕು. ಇದಲ್ಲದೇ ಇತರ ಷರತ್ತು ವಿಧಿಸುವುದು ಮ್ಯಾಜಿಸ್ಟ್ರೇಟ್ ಕೊರ್ಟ್‌ಗೆ ಬಿಟ್ಟಿರುತ್ತದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು? :ಕಾಸರಗೋಡಿನ ನಿವಾಸಿ ಹಮೀದ್ ಅಲಿ ತನ್ನಿಂದ ಒಂದು ಕೆ.ಜಿ. ಚಿನ್ನದ ಗಟ್ಟಿ ಪಡೆದುಕೊಂಡು ಹಣ ನೀಡದೇ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮೈಸೂರಿನ ಬಿ.ಇಂದರ್ ಚಂದ್ ಎಂಬುವರು ಲಷ್ಕರ್ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರನ ಚಿನ್ನದ ಮಳಿಗೆಯಿಂದ ಅರ್ಧ ಕೆ.ಜಿ. ಚಿನ್ನದ ಗಟ್ಟಿ ವಶಪಡಿಸಿಕೊಂಡು ಮ್ಯಾಜಿಸ್ಟ್ರೇಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ನಂತರ ತಮ್ಮ ಅಂಗಡಿಯಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಹಿಂದಿರುಗಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಮೈಸೂರಿನ ಅರ್ಜಿದಾರ ಸಲ್ಲಿಸಿದ್ದ ಅರ್ಜಿಯನ್ನು ಜೆಎಂಎಫ್‌ಸಿ ಕೋರ್ಟ್ 2020ರ ನ.10ರಂದು ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 2022ರ ಜ.9ರಂದು ಎತ್ತಿ ಹಿಡಿದಿತ್ತು. ಇದರಿಂದ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ :ಹತ್ಯೆಯಾದ ಪ್ರವೀಣ್​ ನೆಟ್ಟಾರು ಮನೆ ಭೇಟಿಗೆ ಮುತಾಲಿಕ್​ಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್​

ABOUT THE AUTHOR

...view details